ಲಂಡನ್: ಬ್ರಿಟನ್ ಹಾಗೂ ಇಡೀ ಜಗತ್ತಿನ ಹಿತಕ್ಕೆ ಈ ಶತಮಾನದ ಅತ್ಯಂತ ದೊಡ್ಡ ಬೆದರಿಕೆ ಎಂದರೆ ಚೀನಾ ಎಂದು ಬ್ರಿಟನ್‌ನ ಪ್ರಧಾನಿ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ರಿಷಿ ಸುನಕ್ ಹೇಳಿದ್ದಾರೆ.
ಚೀನಾ ಜಾಗತಿಕ ಬೆದರಿಕೆ ಎಂಬುದು ಅಮೆರಿಕದಿಂದ ಹಿಡಿದು ಭಾರತದವರೆಗೂ ಅದು ಗುರಿಯಾಗಿಸಿ ತೊಂದರೆ ಕೊಡುತ್ತಿರುವ ಸನ್ನಿವೇಶಗಳು ಸಾಬೀತುಪಡಿಸಿವೆ. ನಾನು ಬ್ರಿಟನ್‌ನ ಪ್ರಧಾನಿಯಾದರೆ, ಚೀನಾದ ಸೈಬರ್ ಬೆದರಿಕೆ ಎದುರಿಸಲು ಹಾಗೂ ತಂತ್ರಜ್ಞಾನ ಭದ್ರತೆಯನ್ನು ಕಾಪಾಡಿಕೊಳ್ಳಲು ಹಲವಾರು ಮುಕ್ತ ರಾಷ್ಟ್ರಗಳು ಇರುವ ಅಂತಾರಾಷ್ಟ್ರೀಯ ಒಕ್ಕೂಟವೊಂದನ್ನು ರಚಿಸಲಿದ್ದೇನೆ ಎಂದು ರಿಷಿ ಹೇಳಿದ್ದಾರೆ.
ಬ್ರಿಟನ್‌ನಲ್ಲಿ ಚೀನಾದ ಅತಿ ಹೆಚ್ಚು ಕನ್‌ಫ್ಯೂಶಿಯಸ್ ಸಂಸ್ಥೆಗಳು (ಚೀನಾದ ಸಾಂಸ್ಕೃತಿಕ ವಿಚಾರಗಳನ್ನು ಪ್ರಚಾರ ಮಾಡುವ ಸಂಸ್ಥೆಗಳು) ಇದ್ದು, ಈ 30 ಸಂಸ್ಥೆಗಳನ್ನು ಮುಚ್ಚಿಸಲಿದ್ದೇನೆ ಎಂದು ಅವರು ಭರವಸೆ ನೀಡಿದರು. ನಾನು ಉದ್ದೇಶಿಸಿರುವ ಜಾಗತಿಕ ಒಕ್ಕೂಟವು ಸೈಬರ್ ಸೆಕ್ಯುರಿಟಿ, ಟೆಲಿಕಮ್ಯುನಿಕೇಶನ್‌ನಲ್ಲಿ ಜಾಗತಿಕ ಮಾನದಂಡಗಳನ್ನು ಅಳವಡಿಸಲಿದ್ದು, ಬೌದ್ಧಿಕ ಹಕ್ಕುಗಳ ಕಳವನ್ನು ತಡೆಯಲಿದೆ ಎಂದಿದ್ದಾರೆ ರಿಷಿ.
ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಆಯ್ಕೆಯ ಅಂತಿಮ ಸುತ್ತಿಗೆ ರಿಷಿ ಸುನಕ್, ಲಿಜ್ ಟ್ರುಸ್ ಆಯ್ಕೆ
ಸಿರಿ ಸುನಕ್ ಅವರ ತಂಡ ಹೊರಡಿಸಿರುವ ಪ್ರಣಾಳಿಕೆ “ರೆಡಿ ಫಾರ್ ರಿಷಿʼಯಲ್ಲಿ ಈ ಅಂಶಗಳನ್ನು ಪ್ರಸ್ತಾವಿಸಲಾಗಿದೆ.
ಬ್ರಿಟನ್‌ನ ತಂತ್ರಜ್ಞಾನವನ್ನು ಚೀನಾ ಕದಿಯುತ್ತಿದೆ. ರಷ್ಯ ಅದ್ಯಕ್ಷ ಪುಟಿನ್‌ರ ಕಾರ್ಯತಂತ್ರವನ್ನು ಬಲಪಡಿಸುತ್ತಿದೆ. ತೈವಾನ್ ಮೇಲೆ ಗೂಂಡಾಗಿರಿ ನಡೆಸುತ್ತಿದೆ. ಮಾನವಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ. ಜಾಗತಿಕ ಆರ್ಥಿಕತೆಯನ್ನು ತನಗೆ ಬೇಕಾದಂತೆ ತಿರುಚಲು ಯತ್ನಿಸುತ್ತಿದೆ ಎಂದು ರಿಷಿ ಆರೋಪಿಸಿದ್ದಾರೆ. ಬ್ರಿಟನ್‌ನ ಶಿಕ್ಷಣ ಸಂಸ್ಥೆಗಳಲ್ಲಿ ಇರಬಹುದಾದ ಚೀನಾದ ಯಾವುದೇ ಬಗೆಯ ಹೂಡಿಕೆಯನ್ನು ಸಂಪೂರ್ಣ ಬಹಿರಣಗಪಡಿಸಲು ಬೇಕಾದ ಕಾಯಿದೆಯನ್ನು ಬಲಪಡಿಸುವುದಾಗಿ ಅವರು ವಾಗ್ದಾನ ಮಾಡಿದ್ದಾರೆ.
ರಿಷಿ ಸುನಕ್ ಅವರು ಚೀನಾದ ಕುರಿತು ಮೃದುವಾದ ನಿಲುವುಗಳನ್ನು ಹೊಂದಿದ್ದಾರೆ ಎಂದು ಅವರ ಎದುರಾಳಿ, ಪ್ರಧಾನಿ ಅಭ್ಯರ್ಥಿ ಲಿಜ್ ಟ್ರಸ್ ಅವರ ಕಡೆಯವರು ಆರೋಪಿಸುತ್ತಿರುವ ಹೊತ್ತಿಗೆ ರಿಷಿ ಅವರ ಈ ಹೇಳಿಕೆ ಹೊರಬಿದ್ದಿದೆ. ರಿಷಿ ಹಾಗೂ ಟ್ರಸ್ ಪೈಪೋಟಿ ಹೆಚ್ಚುತ್ತಿದ್ದು, ಕನ್ಸರ್ವೇಟಿವ್ ಪಕ್ಷದ 20,000 ಸದಸ್ಯರ ಮತಗಳಿಗಾಗಿ ಇಬ್ಬರೂ ಸೆಣಸುತ್ತಿದ್ದಾರೆ.
ಇದನ್ನೂ ಓದಿ: ರಿಷಿ ಸುನಕ್‌ರನ್ನು ಪ್ರಧಾನಿಯಾಗಿ ಆರಿಸಲೇಬೇಡಿ: ಬೋರಿಸ್ ಜಾನ್ಸನ್ ಪ್ರಚಾರ!