ನವದೆಹಲಿ: ಪಾಕಿಸ್ತಾನ ಮೂಲದ ಉಗ್ರ ಅಬ್ದುಲ್ ರೆಹಮಾನ್ ಮಖ್ಖಿಯನ್ನು ಜಾಗತಿಕ ಉಗ್ರನೆಂದು ಘೋಷಿಸುವ ಭಾರತ ಮತ್ತು ಅಮೆರಿಕದ ಜಂಟಿ ಪ್ರಯತ್ನಕ್ಕೆ ಚೀನಾ ಕೊನೇ ಕ್ಷಣದಲ್ಲಿ ಅಡ್ಡಗಾಲು ಹಾಕಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಅಲ್‌ಖೈದಾ ನಿರ್ಬಂಧ ಸಮಿತಿ ಎದುರು ಭಾರತ ಮತ್ತು ಅಮೆರಿಕ ಜಂಟಿಯಾಗಿ ಈ ಪ್ರಸ್ತಾಪವನ್ನು ಇರಿಸಿದ್ದವು. ಆದರೆ ಇದಕ್ಕೆ ಹಿನ್ನಡೆಯಾಗಿದೆ. ಈ ರೆಹಮಾನ್ ಮಖ್ಖಿ, ಲಷ್ಕರ್ ಇ ತೊಯ್ಬಾ ತೊಯಿಬಾ ಉಗ್ರ ಹಫೀಜ್ ಸಯೀದ್‌ನ ಹತ್ತಿರದ ಸಂಬಂಧಿ. ಹಫೀಜ್ ಸಯೀದ್ ಭಾರತದಲ್ಲಿ 26/11ರ ಮುಂಬೈ ದಾಳಿಯ ರೂವಾರಿಯಾಗಿದ್ದಾನೆ. ರೆಹಮಾನ್ ಮಖ್ಖಿಯನ್ನು ಯುಎಸ್ ಈಗಾಗಲೇ ಮೋಸ್ಟ್ ವಾಂಟೆಡ್ ಉಗ್ರ ಎಂದು ಘೋಷಿಸಿದ್ದು, ಆತನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಲು ಭಾರತದೊಂದಿಗೆ ಜಂಟಿ ಯತ್ನದಲ್ಲಿ ತೊಡಗಿದೆ.
ಇದಕ್ಕೂ ಮುನ್ನ 2019ರಲ್ಲಿ, ಜೈಷೆ ಮೊಹಮ್ಮದ್ ಉಗ್ರ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವಲ್ಲಿ ಭಾರತ ಮಹತ್ವದ ರಾಜತಾಂತ್ರಿಕ ಮುನ್ನಡೆ ದಾಖಲಿಸಿತ್ತು. ತನ್ನ ಈ ಪ್ರಸ್ತಾಪವನ್ನು ಭದ್ರತಾ ಸಮಿತಿಯ ಮುಂದಿಟ್ಟ ಸುಮಾರು ಒಂದು ದಶಕದ ನಂತರ ಭಾರತಕ್ಕೆ ಈ ಮುನ್ನಡೆ ಲಭಿಸಿತ್ತು.
ಉಗ್ರರ ನೆಲೆಯಾಗಿರುವ ಪಾಕಿಸ್ತಾನದ ಆಪ್ತ ಚೀನಾದ ಈ ನಡೆಯಿಂದಾಗಿ ಉಗ್ರಗಾಮಿ ಚಟಿವಟಿಕೆಗಳನ್ನು ಹತ್ತಿಕ್ಕುವ ಜಾಗತಿಕ ಪ್ರಕ್ರಿಯೆಗೆ ತೊಡಕು ಉಂಟಾಗಿದೆ. ಇಡೀ ಪ್ರಕ್ರಿಯೆಗೆ ಕೊನೇ ಕ್ಷಣದಲ್ಲಿ ʻತಾಂತ್ರಿಕ ತಡೆʼಯನ್ನು ಚೀನಾ ಒಡ್ಡಿದೆ. ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿರುವ 15 ಸದಸ್ಯ ರಾಷ್ಟ್ರಗಳ ಪೈಕಿ ವಿಟೋ ಚಲಾಯಿಸುವ ಅಧಿಕಾರ ಹೊಂದಿರುವ ಚೀನಾ, ರೆಹಮಾನ್ ಮಖ್ಖಿಯನ್ನು ಬ್ಲ್ಯಾಕ್ ಲಿಸ್ಟ್‌ಗೆ ಹಾಕಲು ಒಪ್ಪಲಿಲ್ಲ. ಆತನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸಲು ಸಮ್ಮತಿಸದ ಏಕೈಕ ರಾಷ್ಟ್ರ ಇದಾಗಿದೆ.
ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ಸಾಮರ್ಥ್ಯ; ಚೀನಾ, ಅಮೆರಿಕ ಬಳಿಕ ಭಾರತವೇ ಟಾಪ್