ಬೀಜಿಂಗ್: ಮೊಬೈಲ್ ಇಲ್ಲದೆ ಮಕ್ಕಳು ಊಟ ಮಾಡುವುದಿಲ್ಲ, ತಿಂಡಿ ತಿನ್ನುವುದಿಲ್ಲ. ಮೊಬೈಲ್ ಗೇಮ್ ಆಡಲು ಅವಕಾಶ ಮಾಡಿಕೊಟ್ಟು, ಯುಟ್ಯೂಬ್ ವಿಡಿಯೊ ನೋಡಲು ಬಿಟ್ಟು ಊಟ ಮಾಡಿಸುವ ತಾಯಿಯರ ಸಂಖ್ಯೆ ಕೋಟಿಗಟ್ಟಲೆ. ಮಕ್ಕಳು ಊಟ ಮಾಡಿದರೆ ಸಾಕು ಎಂದು ಆಕೆಯೂ ಮೊಬೈಲ್ ಕೊಡುತ್ತಾಳೆ. ಇನ್ನು, ನಾಲ್ಕೈದು ವರ್ಷವಾದರಂತೂ ಮಕ್ಕಳ ಕೈಯಲ್ಲಿ ಸ್ಮಾರ್ಟ್‌ಫೋನ್ ಬೇಕೇಬೇಕು. ಮಕ್ಕಳ ಮೊಬೈಲ್ ಖಯಾಲಿಯಿಂದ (Mobile Addiction) ಪೋಷಕರು, ಶಿಕ್ಷಕರು ಚಿಂತೆಗೀಡಾಗಿದ್ದಾರೆ. ಈ ಚಿಂತೆಯನ್ನು ದೂರ ಮಾಡಲೆಂದೇ ಚೀನಾದಲ್ಲಿ ಹೊಸ ಉಪಾಯ ಕಂಡುಕೊಳ್ಳಲಾಗಿದೆ. ಶೀಘ್ರದಲ್ಲೇ, ಒಂದು ದಿನದಲ್ಲಿ ಮಕ್ಕಳು ಎರಡು ಗಂಟೆ ಬಳಸಿದ ಬಳಿಕ ತಾನೇ ಆಫ್ ಆಗುವ ತಂತ್ರಜ್ಞಾನದ ಅಳವಡಿಕೆಯತ್ತ ಚೀನಾ ಹೆಜ್ಜೆ ಇಡುತ್ತಿದೆ.
ಹೌದು, ಸೈಬರ್‌ಸ್ಪೇಸ್ ಅಡ್ಮಿಸ್ಟ್ರೇಷನ್ ಆಫ್ ಚೀನಾ ಸಂಸ್ಥೆಯು ಇಂತಹದ್ದೊಂದು ಪ್ರಮುಖ ಪ್ರಸ್ತಾಪ ಮಾಡಿದೆ. ಇದು ಚೀನಾದ ಇಂಟರ್‌ನೆಟ್ ನಿಯಂತ್ರಣ ಸಂಸ್ಥೆಯಾಗಿದ್ದು, ಮುಂದಿನ ದಿನಗಳಲ್ಲಿ ಮಕ್ಕಳು ಎರಡು ಗಂಟೆ ಮೊಬೈಲ್ ಬಳಸಿದ ಮೂಲಕ ತಾನೇ ಮೊಬೈಲ್ ಆಫ್ ಆಗುವ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಮೊಬೈಲ್ ಡಿವೈಸ್‌ಗಳು, Apps ಹಾಗೂ App Storeಗಳನ್ನು ಸ್ಥಗಿತಗೊಳಿಸುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲು ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ. ಮಕ್ಕಳು ಮೌಲ್ಯಗಳ ಜತೆ ಹಾಗೂ ಸಮಾಜಮುಖಿಯಾಗಿ ಬೆಳೆಯಲಿ ಎಂಬ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಸೈಬರ್‌ಸ್ಪೇಸ್ ಅಡ್ಮಿಸ್ಟ್ರೇಷನ್ ಆಫ್ ಚೀನಾ ಪ್ರಸ್ತಾಪಕ್ಕೆ ಸರ್ಕಾರ ಅನುಮೋದನೆ ನೀಡಿದರೆ ಶೀಘ್ರದಲ್ಲೇ ಮೊಬೈಲ್ ಬಳಕೆ ನಿರ್ಬಂಧ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕಾಗಿ ಪೋಷಕರು ಸೇರಿ ಸಾರ್ವಜನಿಕರಿಂದ ಸೆಪ್ಟೆಂಬರ್ 2ರವರೆಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಇದಾದ ಬಳಿಕ ಮಕ್ಕಳು ಬಳಸುವ ಎಲೆಕ್ಟ್ರಾನಿಕ್ ಡಿವೈಸ್‌ಗಳು ಎರಡು ಗಂಟೆಯ ಬಳಿಕ ಆಫ್ ಆಗುವಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Mobile addiction | ಜಾಸ್ತಿ ಮೊಬೈಲ್ ನೋಡ್ಬೇಡ ಎಂದು ಅಮ್ಮ ಗದರಿದ್ದಕ್ಕೆ ನೇಣು ಬಿಗಿದುಕೊಂಡ 14 ವರ್ಷದ ಬಾಲಕ
ಹೀಗಿದೆ ಮೊಬೈಲ್ ಬಳಕೆ ಸಮಯದ ಮಿತಿ
ಚೀನಾದಲ್ಲಿ 18ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಬಳಸಲು ಆಗುವುದಿಲ್ಲ. ಹಾಗೆಯೇ, ನಿತ್ಯ 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ದಿನದಲ್ಲಿ ಕೇವಲ 40 ನಿಮಿಷ, 8-16 ವರ್ಷದ ಮಕ್ಕಳು ಕೇವಲ ಒಂದು ಗಂಟೆ ಹಾಗೂ 16-18 ವರ್ಷದ ಮಕ್ಕಳು ಕೇವಲ ಎರಡು ಗಂಟೆ ಮಾತ್ರ ಮೊಬೈಲ್ ಬಳಸಲು ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಈಗಾಗಲೇ, ಪೋಷಕರು ಇಂತಹ ಕ್ರಮದ ಪರವಾಗಿದ್ದಾರೆ ಎನ್ನಲಾಗುತ್ತಿದೆ.