ತೈವಾನ್ ದ್ವೀಪದ ಸಮೀಪ ಚೀನಾ ಉಡಾಯಿಸಿರುವ ಐದು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಜಪಾನ್‌ನ ವಿಶೇಷ ವಾಣಿಜ್ಯ ವಲಯದಲ್ಲಿ ಬಿದ್ದಿವೆ ಎಂದು ಜಪಾನ್ ವರದಿ ಮಾಡಿದೆ.
ಜಪಾನ್‌ನ ಪಶ್ಚಿಮ ಕರಾವಳಿಯಿಂದ 200 ನಾಟಿಕಲ್ ಮೈಲು (370 ಕಿಮೀ) ದೂರ ಚಾಚಿರುವ ಅದರ ವಿಶೇಷ ವಾಣಿಜ್ಯ ವಲಯದಲ್ಲಿ ಚೀನಾದ ಈ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಬಂದು ಬಿದ್ದಿವೆ. ಜಪಾನ್‌ಗೆ ಸೇರಿದ ಒಕಿನಾವಾ ದ್ವೀಪಸಮೂಹದ ಹತೆರುಮಾ ಎಂಬ ದ್ವೀಪದಲ್ಲಿ ಇವು ಭೂಸ್ಪರ್ಶ ಮಾಡಿವೆ. ಈ ಬಗ್ಗೆ ರಾಜತಾಂತ್ರಿಕ ವಿರೋಧವನ್ನು ಜಪಾನ್, ಬೀಜಿಂಗ್ ಮುಂದೆ ದಾಖಲಿಸಿದೆ.
ʼʼಇದು ನಮ್ಮ ದೇಶದ ಸಾರ್ವಭೌಮತ್ವ, ದೇಶದ ಭದ್ರತೆ ಹಾಗೂ ಪ್ರಜೆಗಳ ಸುರಕ್ಷತೆಯನ್ನು ಪ್ರಶ್ನಿಸುವ ನಡೆ. ಇದನ್ನು ಸಹಿಸಲಾಗದುʼʼ ಎಂದು ಜಪಾನ್ ಹೇಳಿದೆ.
ಇದಕ್ಕೂ ಮುನ್ನು ತಾವು 11 ಕ್ಷಿಪಣಿಗಳನ್ನು ತೈವಾನ್‌ನ ಉತ್ತರ, ಪೂರ್ವ ಹಾಗೂ ದಕ್ಷಿಣ ದಿಕ್ಕಿನ ಜಲರಾಶಿಗೆ ಗುರಿಯಾಗಿ ಬಿಟ್ಟಿರುವುದಾಗಿ ಚೀನಾದ ಮಿಲಿಟರಿ ಇಲಾಖೆ ಹೇಳಿಕೊಂಡಿತ್ತು. ಇದರಲ್ಲಿ ನಾಲ್ಕು ಕ್ಷಿಪಣಿಗಳು ತೈವಾನ್‌ನ ರಾಜಧಾನಿಯ ತೈಪೆಯ ಆಕಾಶದ ಮೇಲೆಯೇ ಸಾಗಿದ್ದವು. ಇವು ಜಪಾನ್‌ನ ಪ್ರದೇಶದಲ್ಲಿ ಬಿದ್ದಿರುವಂತಿದೆ.
ಇದನ್ನೂ ಓದಿ: ವಿಸ್ತಾರ Explainer | ತೈವಾನ್ ದ್ವೀಪದೇಶದಲ್ಲಿ ಚೀನಾ- ಅಮೆರಿಕ ತಿಕ್ಕಾಟದ ಹಕೀಕತ್ತು
ಅಮೆರಿಕದ ಪ್ರತಿನಿಧಿ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯನ್ನು ಚೀನಾ ಕಟು ಶಬ್ದಗಳಲ್ಲಿ ಟೀಕಿಸಿತ್ತಲ್ಲದೆ, ಇದನ್ನು ವಿರೋಧಿಸಲು ತಾನು ಬೃಹತ್ ಮಿಲಿಟರಿ ಪ್ರದರ್ಶನ ನಡೆಸುವುದಾಗಿಯೂ ಹೇಳಿತ್ತು. ಈ ಕ್ಷಿಪಣಿ ಪ್ರಯೋಗಗಳನ್ನು ತೈವಾನ್, ಅಮೆರಿಕಕ್ಕೆ ಎಚ್ಚರಿಕೆಯಾಗಿ ಮಾಡಲಾಗಿದೆ. ಮಾತ್ರವಲ್ಲ, ಜಪಾನ್‌ಗೆ ಎಚ್ಚರಿಕೆ ನೀಡಲೂ ಈ ಅವಕಾಶವನ್ನು ಚೀನಾ ಬಳಸಿಕೊಂಡಿದೆ. ಯಾಕೆಂದರೆ ಒಕಿನಾವಾ ಬಳಿಕ ಕೆಲವು ದ್ವೀಪಗಳ ಸ್ವಾಮ್ಯದ ವಿಚಾರದಲ್ಲಿ ಚೀನಾ ಮತ್ತು ಜಪಾನ್ ನಡುವೆ ತಗಾದೆಯಿದೆ. ತೈವಾನ್ ಅನ್ನು ಚೀನಾ ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡರೆ, ಅದರ ಮೂಲಕವೇ ಜಪಾನ್‌ಗೆ ಸಾಗಿಬರುವ ಪೆಟ್ರೋಲಿಯಂ ತೈಲದ ಸರಬರಾಜಿಗೂ ತೊಡಕು ಎದುರಾಗಲಿದೆ.