Site icon Vistara News

Christian Oliver: ವಿಮಾನ ಅಪಘಾತಕ್ಕೆ ಖ್ಯಾತ ನಟ ಬಲಿ

oliver

oliver

ಲಾಸ್‌ ಏಂಜಲೀಸ್‌: ಜನವರಿ 4ರಂದು ಸಂಭವಿಸಿದ ವಿಮಾನ ಅಪಘಾತದಲ್ಲಿ ʼಸ್ಪೀಡ್‌ ರೇಸರ್‌ʼ (Speed Racer) ಮತ್ತು ʼವಾಲ್ಕೈರಿʼ (Valkyrie) ಚಿತ್ರಗಳ ಖ್ಯಾತಿಯ ಜರ್ಮನ್ ಮೂಲದ ಹಾಲಿವುಡ್ ನಟ, 51ರ ಹರೆಯದ ಕ್ರಿಶ್ಚಿಯನ್ ಆಲಿವರ್ (Christian Oliver) ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳು ಮೃತಪಟ್ಟಿದ್ದಾರೆ. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಕೆರಿಬಿಯನ್ (Caribbean Sea) ಸಮುದ್ರಕ್ಕೆ ಪತನವಾಗಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ʼದಿ ಗುಡ್ ಜರ್ಮನ್ʼ ಮತ್ತು ಆ್ಯಕ್ಷನ್-ಕಾಮಿಡಿ ʼಸ್ಪೀಡ್ ರೇಸರ್‌ʼನಲ್ಲಿ ಜಾರ್ಜ್ ಕ್ಲೂನಿ ಅವರೊಂದಿಗೆ ದೊಡ್ಡ ಪರದೆಯ ಮೇಲೆ ಮಿಂಚಿದ್ದ ಆಲಿವರ್ ಗುರುವಾರ ಖಾಸಗಿ ಒಡೆತನದ, ಏಕ-ಎಂಜಿನ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ನಡೆದಿದೆ ಎಂದು ರಾಯಲ್ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ಪೊಲೀಸ್ ಮೂಲಗಳು ತಿಳಿಸಿದೆ. ಮೀನುಗಾರರು ಮತ್ತು ಕೋಸ್ಟ್ ಗಾರ್ಡ್ ತಕ್ಷಣ ಘಟನಾ ಸ್ಥಳಕ್ಕೆ ತೆರಳಿದ್ದು, ಸಮುದ್ರದಲ್ಲಿ 4 ಶವಗಳನ್ನು ಪತ್ತೆಯಾಗಿವೆ. ಆಲಿವರ್ ಜತೆಗೆ ಅವರ ಪುತ್ರಿಯರಾದ ಮಡಿತಾ (10), ಅನ್ನಿಕ್ (12) ಮತ್ತು ಪೈಲಟ್ ರಾಬರ್ಟ್ ಸ್ಯಾಚ್ಸ್ ಮೃತಪಟ್ಟಿದ್ದಾರೆ.

ಗ್ರೆನಡೈನ್ಸ್‌ನ ಸಣ್ಣ ದ್ವೀಪವಾದ ಬೆಕ್ವಿಯಾದಿಂದ ಸೈಂಟ್‌ ಲೂಸಿಯಾಗೆ ವಿಮಾನ ಪ್ರಯಾಣಿಸುತ್ತಿತ್ತು. ಆಲಿವರ್ ತಮ್ಮ ಕುಟುಂಬದ ಜತೆ ಪ್ರವಾಸ ಕೈಗೊಂಡಿದ್ದರು ಎನ್ನಲಾಗಿದೆ. ಆಲಿವರ್ ಕೆಲವು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಕಡಲತೀರದ ಚಿತ್ರವನ್ನು ಪೋಸ್ಟ್ ಮಾಡಿ, “ಸ್ವರ್ಗದಲ್ಲಿ ಎಲ್ಲರಿಗೂ 2024ರ ಶುಭಾಶಯಗಳು! ನಾವು ಶೀಘ್ರ ಆಗಮಿಸುತ್ತೇವೆʼʼ ಎಂದು ಬರೆದುಕೊಂಡಿದ್ದರು.

ಟೇಕ್‌ಆಫ್ ಆದ ಸ್ವಲ್ಪ ಸಮಯದಲ್ಲೇ ವಿಮಾನದಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಪೈಲಟ್‌ ಹೇಳಿಕೊಂಡಿರುವುದು ರೆಕಾರ್ಡ್‌ನಲ್ಲಿ ದಾಖಲಾಗಿದೆ. ಇದು ವಿಮಾನದಿಂದ ಬಂದ ಏಕೈಕ ಮತ್ತು ಕೊನೆಯ ಸಂವಹನವಾಗಿತ್ತು. ವಿಮಾನವು ಜೋರಾಗಿ ಶಬ್ದದೊಂದಿಗೆ ಪತನವಾಯಿತು ಎಂದು ಸ್ಥಳೀಯರು ಹೇಳಿದ್ದಾರೆ. ʼʼಪೇಜೆಟ್ ಫಾರ್ಮ್ಸ್‌ನ ಮೀನುಗಾರರು ತಮ್ಮ ದೋಣಿಗಳಲ್ಲಿ ಘಟನಾ ಸ್ಥಳಕ್ಕೆ ತೆರಳಿ ಸಹಾಯ ಮಾಡಿದರು” ಎಂದು ರಾಯಲ್ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ ಪೊಲೀಸ್ ಪಡೆ ತಿಳಿಸಿದೆ.

ಕ್ರಿಶ್ಚಿಯನ್ ಕ್ಲೆಪ್ಸರ್ ಎಂಬ ಹೆಸರಿನಿಂದ ಜನಿಸಿದ ಅವರು ಬಳಿಕ ಕ್ರಿಶ್ಚಿಯನ್ ಆಲಿವರ್ ಆಗಿ ಜನಪ್ರಿಯತೆ ಪಡೆದರು. ಟಾಮ್ ಕ್ರೂಸ್ ಚಿತ್ರ ʼವಾಲ್ಕೈರಿʼಯಲ್ಲಿನ ಸಣ್ಣ ಪಾತ್ರವನ್ನು ಒಳಗೊಂಡಂತೆ 60ಕ್ಕೂ ಹೆಚ್ಚು ಚಲನಚಿತ್ರ ಮತ್ತು ಟಿವಿ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವೃತ್ತಿ ಜೀವನದ ಆರಂಭಿಕ ಪಾತ್ರಗಳಾದ ಟಿವಿ ಸರಣಿ ʼಸೇವ್ಡ್ ಬೈ ದಿ ಬೆಲ್: ದಿ ನ್ಯೂ ಕ್ಲಾಸ್ʼ ಮತ್ತು ʼದಿ ಬೇಬಿ-ಸಿಟ್ಟರ್ಸ್ ಕ್ಲಬ್ʼ ಅವರಿಗೆ ಅಪಾರ ಜನಪ್ರಿಯತೆ ತಂಡು ಕೊಟ್ಟಿದ್ದವು. ಜರ್ಮನ್‌ನ ಪ್ರಸಿದ್ಧ ಕಾಪ್‌ ಶೋ ಅಲಾರಾಂ ಫರ್‌ ಕೋಬ್ರಾ 11 (Alarm fur Cobra 11)ರ ಎರಡು ಸೀಸನ್‌ಗಳಲ್ಲಿ ನಟಿಸಿದ್ದರು. 1972ರಲ್ಲಿ ಜನಿಸಿದ ಆಲಿವರ್‌ ಕಳೆದ ವರ್ಷ ತೆರೆಕಂಡ Indiana Jones and the Dial of Destiny ಚಿತ್ರಕ್ಕೆ ಧ್ವನಿ ನೀಡಿದ್ದರು.

ಇದನ್ನೂ ಓದಿ: Vin Diesel: ದೀಪಿಕಾ ಜತೆ ಅಭಿನಯಿಸಿದ್ದ ನಟನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ!

Exit mobile version