Site icon Vistara News

ಗಾಜಾ ನಗರದಲ್ಲಿ ಇಂಟರ್‌ನೆಟ್‌, ಮೊಬೈಲ್‌ ನೆಟ್‌ವರ್ಕ್‌ ಕಡಿತ; ಇಸ್ರೇಲ್‌ ಪ್ಲಾನ್‌ ಏನು?

Gaza City

ಗಾಜಾ: ಹಮಾಸ್‌ ಉಗ್ರರನ್ನು (Hamas Terrorists) ಸಂಪೂರ್ಣವಾಗಿ ನಿರ್ನಾಮ ಮಾಡಬೇಕು ಎಂದು ಪಣ ತೊಟ್ಟಿರುವ ಇಸ್ರೇಲ್‌ ಸೇನೆಯು (Israel Palestine War) ಗಾಜಾ ನಗರದ ಮೇಲೆ ಬಿಗಿ ಹಿಡಿತ ಸಾಧಿಸುತ್ತಿದೆ. ಅದರಲ್ಲೂ, ಗಾಜಾ ನಗರದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡಲು ಗಡಿಯಲ್ಲಿ ನೂರಾರು ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿದ್ದು, ಯಾವಾಗ ಬೇಕಾದರೂ ದಾಳಿ ನಡೆಸಬಹುದು ಎನ್ನಲಾಗಿದೆ. ಇನ್ನು ಇದರ ಬೆನ್ನಲ್ಲೇ, ಗಾಜಾ ನಗರದಲ್ಲಿ ಮೊಬೈಲ್‌ ನೆಟ್‌ವರ್ಕ್‌, ಇಂಟರ್‌ನೆಟ್‌ ಸೇವೆಗಳನ್ನು (Communications Blackout) ಸ್ಥಗಿತಗೊಳಿಸಲಾಗಿದೆ. ಇದು ಈಗ ಗಾಜಾ ನಾಗರಿಕರು ಹಾಗೂ ಉಗ್ರರನ್ನು ಆತಂಕಕ್ಕೀಡು ಮಾಡಿದೆ ಎಂದು ತಿಳಿದುಬಂದಿದೆ.

ಗಾಜಾ ನಗರದ ಬೆಳವಣಿಗೆಗಳು ಹೊರ ಜಗತ್ತಿಗೆ ಗೊತ್ತಾಗಬಾರದು ಎಂಬ ಕಾರಣಕ್ಕಾಗಿ ಇಸ್ರೇಲ್‌ ಸೇನೆಯೇ ನಗರದಲ್ಲಿ ಇಂಟರ್‌ನೆಟ್‌, ಮೊಬೈಲ್‌ ನೆಟ್‌ವರ್ಕ್‌ ಸೇರಿ ಹಲವು ರೀತಿಯ ಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ. ಅದರಲ್ಲೂ, ಐದು ದಿನಗಳಲ್ಲಿ ಎರಡನೇ ಬಾರಿ ಈ ರೀತಿಯಾಗುತ್ತಿದ್ದು, ಇಸ್ರೇಲ್‌ ಸೈನಿಕರು, ಯುದ್ಧ ಟ್ಯಾಂಕರ್‌ಗಳು ಇಡೀ ನಗರವನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಮತ್ತೊಂದೆಡೆ, ಹಮಾಸ್‌ ಉಗ್ರರು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿರುವ ಇಸ್ರೇಲ್‌ ನಾಗರಿಕರನ್ನು ರಕ್ಷಿಸಲು ಕೂಡ ಹೀಗೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗಾಜಾದಲ್ಲೇ 8,796 ಜನರ ಹತ್ಯೆ

ಇಸ್ರೇಲ್‌ ನಡೆಸುತ್ತಿರುವ ಸತತ ದಾಳಿಯಿಂದಾಗಿ ಗಾಜಾ ನಗರದಲ್ಲಿ ಇದುವರೆಗೆ 8,796 ಜನ ಹತರಾಗಿದ್ದಾರೆ ಎಂದು ತಿಳಿದುಬಂದಿದೆ. ಇಸ್ರೇಲ್‌ ದಾಳಿಗೆ ಇದುವರೆಗೆ 3,648 ಮಕ್ಕಳು, 2,290 ಮಹಿಳೆಯರು ಸೇರಿ ಒಟ್ಟು 8,796 ಮಂದಿ ಬಲಿಯಾಗಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. 22 ಸಾವಿರಕ್ಕೂ ಅಧಿಕ ಜನ ಗಾಯಗೊಂಡಿದ್ದು, ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಇನ್ನೂ 2 ಸಾವಿರಕ್ಕೂ ಅಧಿಕ ನಾಗರಿಕರು ಸಿಲುಕಿದ್ದಾರೆ ಎಂದು ತಿಳಿಸಿದೆ. ವೆಸ್ಟ್‌ ಬ್ಯಾಂಕ್‌ ಪೂರ್ತಿ ಇಸ್ರೇಲ್‌ ವಶವಾಗಿದ್ದು, ಅಲ್ಲೂ ನೂರಾರು ಜನ ಹತರಾಗಿದ್ದಾರೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: ಹಮಾಸ್‌ ದಾಳಿ ಮಾಡಿದರೂ ಮನಮೋಹನ್‌ ಸಿಂಗ್‌ರಂತೆ ಇಸ್ರೇಲ್‌ ಸುಮ್ಮನಿರಬೇಕಿತ್ತು ಎಂದ ಅಮೆರಿಕ ಲೇಖಕ!

ಇಸ್ರೇಲ್‌ ಮಾಡುತ್ತಿರುವ ಸತತ ದಾಳಿಗಳಿಂದ ಕಂಗೆಟ್ಟುಹೋಗಿರುವ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ಹಲವು ಆರೋಪ ಮಾಡಿದ್ದಾರೆ. ಇಸ್ರೇಲ್‌ ದಾಳಿ ಮುಂದುವರಿಸಿದ್ದು, ಬುಧವಾರ 12ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಇಸ್ರೇಲ್‌ಗೆ ತನ್ನ ದೇಶದ ಒತ್ತೆಯಾಳುಗಳ ರಕ್ಷಣೆಗಿಂತ, ಪ್ಯಾಲೆಸ್ತೀನ್‌ ನಾಗರಿಕರನ್ನು ಹತ್ಯೆ ಮಾಡುವುದು ಪ್ರಮುಖ ಉದ್ದೇಶವಾಗಿದೆ ಎಂದು ಆರೋಪಿಸಿದೆ. ಆದಾಗ್ಯೂ, ವಿಶ್ವಸಂಸ್ಥೆ ನಿರ್ಣಯವನ್ನೇ ಲೆಕ್ಕಕ್ಕೆ ತೆಗೆದುಕೊಳ್ಳದ ಇಸ್ರೇಲ್‌ ಸೇನೆಯು ದಾಳಿ ಮುಂದುವರಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version