ಬ್ರೆಸಿಲಿಯಾ: ತಲೆಯ ಭಾಗದಲ್ಲಿ ಕೂಡಿಕೊಂಡಿದ್ದ, ನಾಲ್ಕು ವರ್ಷ ವಯಸ್ಸಿನ ಸಂಯೋಜಿತ ಅವಳಿಗಳನ್ನು ಅತ್ಯಂತ ಕ್ಲಿಷ್ಟ ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸಲಾಗಿದೆ. ಬ್ರೆಜಿಲ್‌ನ ರಿಯೋ ಡಿ ಹನೈರೊದಲ್ಲಿ ನಡೆಸಲಾದ ೨೭ ತಾಸುಗಳ ಈ ಸುದೀರ್ಘ ಶಸ್ತ್ರಚಿಕಿತ್ಸೆಗೆ, ವರ್ಚ್ಯುವಲ್ ರಿಯಾಲಿಟಿ ತಂತ್ರಜ್ಞಾನವನ್ನು ವೈದ್ಯರ ತಂಡ ಸಮರ್ಥವಾಗಿ ಬಳಸಿಕೊಂಡು ಯಶಸ್ವಿಯಾಗಿದೆ.
ನಾಲ್ಕು ವರ್ಷ ವಯಸ್ಸಿನ ಬೆರ್ನಾಡೊ ಮತ್ತು ಆರ್ಥರ್ ಸಹೋದರರ ಮೆದುಳನ್ನು ರಕ್ಷಿಸುವ ಭಾಗದಲ್ಲಿನ ತಲೆಬುರುಡೆಯ ಮೂಳೆ ಸಂಯೋಜಿತವಾಗಿತ್ತು. ಮಾತ್ರವಲ್ಲ, ಕೆಲವು ಪ್ರಮುಖ ನರಗಳು ಕೂಡಿಕೊಂಡಿದ್ದವು ಅಥವಾ ಇಬ್ಬರಿಗೆ ಸೇರಿ ಒಂದೇ ಇದ್ದವು. ೨೦೧೮ರಲ್ಲಿ ಹುಟ್ಟಿದ್ದ ಈ ಸಯಾಮಿ ಅವಳಿಗಳು, ಈ ನಾಲ್ಕು ವರ್ಷಗಳಲ್ಲಿ ಹೆಚ್ಚಿನ ದಿನಗಳನ್ನು ಆಸ್ಪತ್ರೆಯಲ್ಲೇ ಕಳೆದಿದ್ದರು. ರಿಯೋ ಡಿ ಹನೈರೊದ ಆಸ್ಪತ್ರೆಯೊಂದರಲ್ಲಿ ಅವರಿಗಾಗಿ ವಿಶೇಷ ಹಾಸಿಗೆಯನ್ನೂ ರೂಪಿಸಲಾಗಿತ್ತು.
ಒಂಬತ್ತು ವಿಭಿನ್ನ ಶಸ್ತ್ರಚಿಕಿತ್ಸೆಗಳನ್ನು ೨೭ ತಾಸುಗಳಲ್ಲಿ ನಡೆಸಿ, ಇಬ್ಬರನ್ನೂ ಬೇರ್ಪಡಿಸಿದ ನಂತರ, ಈಗ ಮಕ್ಕಳಿಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಿದ್ದಾರೆ. ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಲಂಡನ್ ಮೂಲದ ʻಜೆಮಿನಿ ಅನ್‌ಟ್ವೈನ್ಡ್ʼ ಎಂಬ ವೈದ್ಯಕೀಯ ನೆರವು ಸಂಸ್ಥೆ ಈ ಶಸ್ತ್ರಚಿಕಿತ್ಸೆಗಳಿಗೆ ನೆರವು ನೀಡಿದೆ. ಶಸ್ತ್ರಚಿಕಿತ್ಸೆಯ ನಂತರ, ಹಾಸಿಗೆಯಲ್ಲಿ ಅಕ್ಕ-ಪಕ್ಕದಲ್ಲಿ ಮಲಗಿರುವ ಪುಟಾಣಿಗಳು, ಒಬ್ಬರ ಕೈಯನ್ನೊಬ್ಬರು ಹಿಡಿದುಕೊಂಡು ನಿದ್ರೆ ಮಾಡುತ್ತಿರುವ ಚಿತ್ರವನ್ನು ಆಸ್ಪತ್ರೆ ಬಿಡುಗಡೆ ಮಾಡಿದೆ. ʻಕಳೆದ ನಾಲ್ಕು ವರ್ಷಗಳಿಂದ ಆಸ್ಪತ್ರೆಯಲ್ಲೇ ಬದುಕುತ್ತಿದ್ದೆವುʼ ಎಂದ ಮಕ್ಕಳ ಹೆತ್ತವರು, ಈಗ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.
ʻಅತ್ಯಂತ ಗಂಭೀರವಾಗಿತ್ತು ಅವರ ಸಮಸ್ಯೆ. ಹಾಗಾಗಿಯೇ ಇಬ್ಬರನ್ನೂ ಒಮ್ಮೆಲೇ ಕಳೆದುಕೊಳ್ಳುವ ಅಪಾಯವೂ ಗಾಢವಾಗಿತ್ತು. ಯಾರಿಗೂ ಇದು ಸರಿಯಾಗಬಹುದೆಂಬ ನಂಬಿಕೆ ಇರಲಿಲ್ಲ. ಆದರೆ ನಾವು ಭರವಸೆ ಕಳೆದುಕೊಂಡಿರಲಿಲ್ಲ. ಚಿಕಿತ್ಸೆಯ ಫಲಿತಾಂಶದಿಂದ ನಿಜಕ್ಕೂ ತೃಪ್ತಿಯಾಗಿದೆʼ ಎಂದು ಶಸ್ತ್ರಚಿಕಿತ್ಸೆ ನಡೆದ ಆಸ್ಪತ್ರೆಯ ನ್ಯೂರೊಸರ್ಜನ್ ಗೇಬ್ರಿಯಲ್ ಮುಫರೆಜ್ ಹೇಳಿದ್ದಾರೆ. ಇದಕ್ಕಾಗಿ ಸುಮಾರು ೧೦೦ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಶ್ರಮಿಸಿದ್ದಾರೆ.
ವಿಶೇಷವೆಂದರೆ, ಅತಿ ಕ್ಲಿಷ್ಟವಾಗಿದ್ದ ಈ ಶಸ್ತ್ರಚಿಕಿತ್ಸೆಯನ್ನು ಮೊದಲಿಗೆ ವರ್ಚ್ಯುವಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ವೈದ್ಯರ ತಂಡ ಅಭ್ಯಾಸ ಮಾಡಿಕೊಂಡಿತ್ತು. ಅಂದರೆ ಮಕ್ಕಳ ಮೆದುಳಿನ ಡಿಜಿಟಲ್ ಅಚ್ಚನ್ನು ಇಟ್ಟುಕೊಂಡು ಬ್ರೆಜಿಲ್, ಬ್ರಿಟನ್ ಮುಂತಾದ ದೇಶಗಳಲ್ಲಿದ್ದ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮಾಡುವುದನ್ನು ಅಭ್ಯಸಿಸಿತ್ತು. ಮೆದುಳನ್ನು ರಕ್ಷಿಸುತ್ತಿರುವ ಮೂಳೆಯ ಯಾವೆಲ್ಲಾ ಭಾಗಗಳು ಸೇರಿಕೊಂಡಿವೆ, ಎಲ್ಲೆಲ್ಲಿ ನರಗಳು ಸಂಯೋಜಿತವಾಗಿವೆ, ಅವುಗಳನ್ನು ಹೇಗೆ ಮತ್ತು ಎಲ್ಲಿ ಬೇರ್ಪಡಿಸಬೇಕು ಎಂಬುದನ್ನೆಲ್ಲಾ ಮೊದಲಿಗೇ ವಿವರವಾಗಿ ಅಭ್ಯಾಸ ನಡೆಸಿತ್ತು. ʻಇದು ನಿಜಕ್ಕೂ ಅದ್ಭುತ. ಮಕ್ಕಳ ಜೀವವನ್ನು ಅಪಾಯಕ್ಕೆ ಒಡ್ಡುವ ಮುನ್ನ ಈ ಮಟ್ಟಿಗೆ ಅಭ್ಯಾಸ ನಡೆಸಲು ಸಾಧ್ಯವಾದರೆ ವೈದ್ಯರಿಗೆ ದೊಡ್ಡ ಭರವಸೆ ಸಿಕ್ಕಿದಂತೆʼ ಎಂದು ಜೆಮಿನಿ ಅನ್‌ಟ್ವೈನ್ಡ್ ಸಂಸ್ಥೆಯ ಮುಖ್ಯ ಸರ್ಜನ್, ಬ್ರಿಟನ್‌ನಲ್ಲಿರುವ ನೂರುಲ್ ಒವಾಸೆ ಗೀಲಾನಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಟೆಲಿವಿಷನ್ ತಾರೆ ಕಿಮ್‌ಳಂತೆ ಕಾಣಲು 12 ವರ್ಷದಲ್ಲಿ 40 ಕಾಸ್ಮೆಟಿಕ್ ಸರ್ಜರಿ! ಆಕೆಯ ಅವಸ್ಥೆ ನೋಡಿ!!