Site icon Vistara News

Covid 19: ಸಿಂಗಾಪುರದಲ್ಲಿ ಕೊರೊನಾ ಹೊಸ ಅಲೆ; ವಾರದಲ್ಲಿ 25 ಸಾವಿರ ಕೇಸ್‌, ಭಾರತಕ್ಕೆ ಇದೆಯೇ ಭೀತಿ?

Covid 19

New Covid 19 Wave In Singapore, Minister Advises Wearing Of Masks After 25,900 Cases Recorded In A Week

ಸಿಂಗಾಪುರ: ಭಾರತ ಸೇರಿ ಜಗತ್ತನ್ನೇ ಪಿಡುಗಿನಂತೆ ಕಾಡಿದ ಕೊರೊನಾ ಸೋಂಕು (Covid 19) ಈಗ ಸಿಂಗಾಪುರದಲ್ಲಿ ಹೊಸದೊಂದು ಅಲೆ ಸೃಷ್ಟಿಸಿದೆ. ಸಿಂಗಾಪುರದಲ್ಲಿ (Singapore) ಕಳೆದ ಒಂದು ವಾರದಲ್ಲಿಯೇ (ಮೇ 5-11) 25,900 ಪ್ರಕರಣಗಳು ದಾಖಲಾಗಿದ್ದು, ಪ್ರತಿಯೊಬ್ಬರೂ ಮಾಸ್ಕ್‌ ಧರಿಸುವಂತೆ ಆರೋಗ್ಯ ಸಚಿವ ಓಂಗ್‌ ಯೆ ಕುಂಗ್‌ (Ong Ye Kung) ಅವರು ಖಡಕ್‌ ಆದೇಶ ಹೊರಡಿಸಿದ್ದಾರೆ. ಸಿಂಗಾಪುರದಲ್ಲಿ ಏಕಾಏಕಿ ಮಹಾಮಾರಿಯ ಹೊಸ ಅಲೆ ಸೃಷ್ಟಿಯಾಗಿರುವುದರಿಂದ ಭಾರತಕ್ಕೂ ಭೀತಿ ಎದುರಾಗಿದೆ.

“ಸಿಂಗಾಪುರದಲ್ಲಿ ಕೊರೊನಾ ಪ್ರಕರಣಗಳು ದಿನೇದಿನೆ ಜಾಸ್ತಿಯಾಗುತ್ತಿವೆ. ಕೊರೊನಾ ಹೊಸ ಅಲೆಯ ಆರಂಭಿಕ ಹಂತದಲ್ಲಿ ನಾವಿದ್ದೇವೆ. ಎರಡರಿಂದ ನಾಲ್ಕು ವಾರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಲಿದೆ ಎಂಬುದಾಗಿ ವರದಿಗಳು ತಿಳಿಸಿವೆ. ಜೂನ್‌ ಅಂತ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವಿಪರೀತವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕಾಗಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್‌ ಧರಿಸುವ ಜತೆಗೆ ಅಂತರ ಕಾಪಾಡಿಕೊಳ್ಳುವ ಮೂಲಕ ಸೋಂಕನ್ನು ನಿಗ್ರಹಿಸಲು ಸೂಚಿಸಲಾಗಿದೆ” ಎಂದು ಓಂಗ್‌ ಯೆ ಕುಂಗ್‌ ತಿಳಿಸಿದ್ದಾರೆ.

ಮೇ 5ಕ್ಕಿಂತ ಮೊದಲಿನ ಒಂದು ವಾರದಲ್ಲಿ ಸಿಂಗಾಪುರದಲ್ಲಿ 13,700 ಕೇಸ್‌ಗಳು ದಾಖಲಾಗಿದ್ದವು. ಆದರೆ, ಒಂದೇ ವಾರದ ಅಂತರದಲ್ಲಿ ಪ್ರಕರಣಗಳ ಸಂಖ್ಯೆ 25 ಸಾವಿರಕ್ಕೆ ಏರಿಕೆಯಾಗಿದೆ. ಒಂದು ವಾರದಲ್ಲಿ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 181ರಿಂದ 250ಕ್ಕೆ ಏರಿಕೆಯಾಗಿದೆ. ಪ್ರತಿ ದಿನ ಸರಾಸರಿ ಮೂವರು ಸೋಂಕಿತರು ಐಸಿಯು ಸೇರುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ ಸೇರಿ ಹಲವು ವೈದ್ಯಕೀಯ ಸೌಕರ್ಯಗಳನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಭಾರತಕ್ಕೂ ಇದೆ ಹೊಸ ಅಲೆಯ ಭೀತಿ

ಸಿಂಗಾಪುರದಿಂದ ಭಾರತಕ್ಕೆ ಬರುವವರ ಸಂಖ್ಯೆ ಜಾಸ್ತಿ ಇರುವುದರಿಂದ ಭಾರತಕ್ಕೂ ಹೊಸ ಸೋಂಕಿನ ಅಲೆಯ ಭೀತಿ ಇದ್ದೇ ಇದೆ. ಹಾಗೊಂದು ವೇಳೆ, ಸಿಂಗಾಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟ ಜಾಸ್ತಿಯಾದರೆ ಭಾರತಕ್ಕೆ ಬರುವವರ ಮೇಲೆ ಹೆಚ್ಚಿನ ನಿಗಾ ಇರಿಸುವುದು ಸೇರಿ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೊರೊನಾ ಲಸಿಕೆಯಿಂದ ಅಡ್ಡ ಪರಿಣಾಮದ ಕುರಿತು ವರದಿಗಳು ಬಹಿರಂಗವಾದ ಬೆನ್ನಲ್ಲೇ ಹೊಸ ತಳಿಯ ಸೋಂಕು ಹರಡುವ ಭೀತಿಯು ಜನರನ್ನು ಆತಂಕಕ್ಕೀಡು ಮಾಡಿದೆ.

ಇದನ್ನೂ ಓದಿ: Covaxin: ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

Exit mobile version