Site icon Vistara News

ಮನಕಲಕುವ ಸುದ್ದಿ ಇದು; ಬೋಟ್​ ಕಟ್ಟುತ್ತಿದ್ದ ಅಪ್ಪನ ಎದುರೇ 1 ವರ್ಷದ ಮಗುವನ್ನು ಎಳೆದೊಯ್ದು, ನುಂಗಿದ ಮೊಸಳೆ

crocodile

ಮೀನುಗಾರಿಕೆ ನಡೆಸಿ ಜೀವನ ನಡೆಸುವ ಬಡ ಅಪ್ಪ, ಒಂದು ಮುಂಜಾನೆ ತನ್ನೊಂದಿಗೆ ಒಂದು ವರ್ಷದ ಮಗನನ್ನೂ ದೋಣಿಯಲ್ಲಿ ಕರೆದುಕೊಂಡು ಮೀನು ಹಿಡಿಯಲು ಹೋಗಿದ್ದ. ಅಂದಿನ ದಿನದ ಕೆಲಸ ಮುಗಿಯುತ್ತಿದ್ದಂತೆ, ವಾಪಸ್​ ದಡಕ್ಕೆ ಬಂದು ದೋಣಿಯನ್ನು ಕಟ್ಟುತ್ತಿದ್ದ. ಅಷ್ಟರಲ್ಲಿ ದೊಡ್ಡ ದುರಂತವೇ ನಡೆದುಹೋಗಿದೆ. ನೀರಿನಲ್ಲಿದ್ದ ಇದ್ದ 11 ಅಡಿ ಉದ್ದದ, ಬೃಹತ್ ಗಾತ್ರದ ಮೊಸಳೆ, ಒಮ್ಮೆಲೇ ನೀರಿನಿಂದ ತಲೆ ಎತ್ತಿ ಹೊರಬಂದು, ಬೋಟ್​ಗೇ ಬಾಯಿ ಹಾಕಿ ಆ 1 ವರ್ಷದ ಮಗುವನ್ನು ಕಚ್ಚಿಕೊಂಡು ಎಳೆದೊಯ್ದಿದೆ. ಮಗುವನ್ನು ಕಾಪಾಡಲು ಅಪ್ಪ ಅದೆಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಆತನ ತಲೆಗೂ ಮೊಸಳೆ ಗಂಭೀರವಾದ ಗಾಯ ಮಾಡಿದೆ…!

ಮಲೇಷ್ಯಾದ ಸಬಾಹ್​​ನಲ್ಲಿರುವ ಲಹಾದ್ ದಾತುವಿನ ಬೊರ್ನಿಯೊ ಕರಾವಳಿ ತೀರದಲ್ಲಿ ಈ ಭಯಾನಕ ಘಟನೆ ನಡೆದಿದೆ. ಬೋಟ್​​ನಲ್ಲಿದ್ದ ಮಗುವನ್ನು ಬಾಯಲ್ಲಿ ಕಚ್ಚಿ ಎಳೆದೊಯ್ದ ಮೊಸಳೆ, ಅದನ್ನು ಜೀವಂತವಾಗಿ ನುಂಗಿದೆ. ಮಗುವನ್ನು ರಕ್ಷಿಸಲು ಇನ್ನಿಲ್ಲದಂತೆ ಹೋರಾಡಿದ ಅಪ್ಪ, ಕೊನೆಗೂ ಅದು ಸಾಧ್ಯವಾಗದೆ ದಡದ ಮೇಲೆ ತಲೆ ಮೇಲೆ ಕೈಹೊತ್ತು ಕುಳಿತಿರುವ ಫೋಟೋ ಕೂಡ ವೈರಲ್ ಆಗಿದೆ.

ಮೊಸಳೆಯೊಂದಿಗೆ ಹೋರಾಡಿ, ಗಾಯಗೊಂಡ ಅಪ್ಪ

ಡಿಸೆಂಬರ್​ 1ರಂದು ಮುಂಜಾನೆ 45 ವರ್ಷದ ಈ ವ್ಯಕ್ತಿ ಎಂದಿನಂತೆ ಮೀನುಗಾರಿಕೆಗೆ ಹೋಗಿದ್ದರು. ಆದರೆ ಅಲ್ಲಾಗಿದ್ದು ಅಕ್ಷರಶಃ ದುರಂತವೇ ಸರಿ. ಇನ್ನು ಮಗುವನ್ನು ಮೊಸಳೆ ಎತ್ತೊಯ್ಯುತ್ತಿದ್ದಂತೆ ತುರ್ತು ಸೇವೆ ಸಿಬ್ಬಂದಿಗೆ ಅಲ್ಲಿದ್ದವರು ಕರೆ ಮಾಡಿದರು. ಬೆಳಗ್ಗೆ 10.30ಕ್ಕೆ ಅವರೆಲ್ಲರೂ ಬಂದರು. ಆದರೆ ಮೊಸಳೆ ಅದಾಗಲೇ ಮಗುವನ್ನು ತಿಂದಾಗಿತ್ತು. ಅವರೆಲ್ಲ ಸೇರಿ ಆ ಪ್ರದೇಶವನ್ನು ಇಡೀ ಹುಡುಕಿದರೂ ಮಗು ಪತ್ತೆಯಾಗಲಿಲ್ಲ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ತಂದೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಈ ಭಾಗದ ಜನರು ಜೀವನಾಧಾರಕ್ಕಾಗಿ ಮೀನುಗಾರಿಕೆಯನ್ನೇ ಅವಲಂಬಿಸಿದ್ದಾರೆ. ಬೆಳಗ್ಗೆ ಎದ್ದರೆ ಕುಟುಂಬದ ಎಲ್ಲರೂ ಬೋಟ್​ನಲ್ಲಿ ಹೊರಟುಬಿಡುತ್ತಾರೆ. ಆದರೆ ಮೊಸಳೆ ಬಗ್ಗೆ ಜಾಗೃತೆ ಇರಲಿ. ಅದು ಮನುಷ್ಯರ ರಕ್ತದ ರುಚಿ ನೋಡಿದ ಮೊಸಳೆ. ಮತ್ತೆ ದಾಳಿ ಮಾಡುವ ಸಂಭವ ಹೆಚ್ಚಾಗಿದೆ ಎಂದು ರಾಯಲ್​ ಮಲೇಷಿಯನ್​ ಪೊಲೀಸರು ಸ್ಥಳೀಯ ಗ್ರಾಮಸ್ಥರನ್ನು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Actress Haripriya | ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥದ ಫೋಟೊಗಳು ವೈರಲ್‌!

Exit mobile version