Site icon Vistara News

ಪ್ರತಿದಾಳಿಗೆ ಮಣಿದು ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್‌ ಒಪ್ಪಿಗೆ? ಇಸ್ರೇಲ್‌ ಹೇಳುವುದಿಷ್ಟು…

Benjamin Netanyhu

International Criminal Court Seeks Arrest Warrants Against Israel PM Benjamin Netanyahu, Three Hamas Leaders

ಜೆರುಸಲೇಂ: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರವು (Israel Palestine War) ದಿನೇದಿನೆ ಭೀಕರವಾಗುತ್ತಿದೆ. ಅದರಲ್ಲೂ, ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರ ದಾಳಿ ಬಳಿಕ ಗಾಜಾ ನಗರದ (Gaza City) ಮೇಲೆ ಇಸ್ರೇಲ್‌ ಸಂಪೂರ್ಣ ಹಿಡಿತ ಸಾಧಿಸಿದೆ. ಬಾಂಬ್‌, ರಾಕೆಟ್‌ ದಾಳಿ ಮೂಲಕ ಗಾಜಾ ನಗರವನ್ನು ಮಸಣದಂತೆ ಮಾಡಿದೆ. ಹಮಾಸ್‌ ಉಗ್ರರನ್ನು ಹುಡುಕಿ ಹುಡುಕಿ ಕೊಲ್ಲುತ್ತಿದೆ. ಹೀಗೆ ಇಸ್ರೇಲ್‌ ನಿರಂತರ ದಾಳಿಗೆ ಕಂಗೆಟ್ಟಿರುವ ಹಮಾಸ್‌ ಉಗ್ರರು ಇಸ್ರೇಲ್‌ ಜತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ. ಆದರೆ, ಇಸ್ರೇಲ್‌ ಇದನ್ನು ನಿರಾಕರಿಸಿದೆ.

ವರದಿ ಹೇಳುವುದೇನು?

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವೆ ಸಂಧಾನ ಏರ್ಪಟ್ಟಿದೆ. ಇನ್ನೇನು ಒಪ್ಪಂದಕ್ಕೆ ಸಹಿ ಹಾಕುವುದಷ್ಟೇ ಬಾಕಿ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ. “ಕತಾರ್‌ ಮಧ್ಯಸ್ಥಿಕೆಯಲ್ಲಿ ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವೆ ಸಂಧಾನ ಏರ್ಪಟ್ಟಿದೆ. ಹಮಾಸ್‌ ಉಗ್ರರು 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ, ಇಸ್ರೇಲ್‌ ಗಾಜಾ ನಗರದಲ್ಲಿ ಐದು ದಿನ ಯುದ್ಧ ನಿಲ್ಲಿಸುವುದು ಒಪ್ಪಂದದ ಪ್ರಮುಖ ಅಂಶವಾಗಿದೆ. ಇನ್ನೇನು ಒಪ್ಪಂದಕ್ಕೆ ಸಹಿ ಬಿದ್ದರೆ ಕದನವಿರಾಮ ಘೋಷಣೆಯಾದಂತೆಯೇ” ಎಂಬುದಾಗಿ ವರದಿ ಮಾಡಲಾಗಿತ್ತು.

ವರದಿ ನಿರಾಕರಿಸಿದ ಇಸ್ರೇಲ್

ದಿ ವಾಷಿಂಗ್ಟನ್‌ ಪೋಸ್ಟ್‌ ವರದಿಯನ್ನು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ನಿರಾಕರಿಸಿದ್ದಾರೆ. “ಹಮಾಸ್‌ ಉಗ್ರರ ಜತೆಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಹಾಗೂ ಒಪ್ಪಂದದ ಪ್ರಸ್ತಾಪವೇ ನಮ್ಮ ಮುಂದಿಲ್ಲ. ಹಮಾಸ್‌ ಉಗ್ರರು ಮೊದಲು ಇಸ್ರೇಲ್‌ನ ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ನಾವೇ ನಮ್ಮ ನಾಗರಿಕರನ್ನು ಬಿಡುಗಡೆ ಮಾಡಿಕೊಂಡು ಬರುತ್ತೇವೆ. ಒತ್ತೆಯಾಳುಗಳನ್ನು ಬಿಡದ ಹೊರತು ಒಪ್ಪಂದದ ಮಾತೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಒಪ್ಪಂದ ನಡೆದಿಲ್ಲ ಎಂದು ಅಮೆರಿಕ ಕೂಡ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಇಸ್ರೇಲ್‌ ಪ್ರಧಾನಿಯನ್ನು ಗುಂಡಿಟ್ಟು ಕೊಲ್ಲಬೇಕು ಎಂದ ಕಾಂಗ್ರೆಸ್‌ ಸಂಸದ; ಸಿಟ್ಟಿಗೆ ಕಾರಣ ಇಲ್ಲಿದೆ

12 ಸಾವಿರಕ್ಕೂ ಅಧಿಕ ಜನರ ಸಾವು

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವಿನ ಸಮರದಲ್ಲಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ. ಅದರಲ್ಲೂ, ಹಮಾಸ್‌ ಉಗ್ರರ ತಾಣವಾದ ಗಾಜಾ ನಗರದ ಮೇಲೆ ಇಸ್ರೇಲ್‌ ನಿರಂತರವಾಗಿ ದಾಳಿ ನಡೆಸುತ್ತಿದ್ದು, ನಗರದಲ್ಲಿ ಇದುವರೆಗೆ 11 ಸಾವಿರಕ್ಕೂ ಜನ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯವೇ ಮಾಹಿತಿ ನೀಡಿದೆ. ಇನ್ನೂ 3 ಸಾವಿರಕ್ಕೂ ಅಧಿಕ ಜನ ಕಟ್ಟಡದ ಅವಶೇಷಗಳಲ್ಲಿ ಸಿಲುಕಿದ್ದು, ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ ಎಂಬುದಾಗಿ ಮಾಹಿತಿ ನೀಡಿದೆ. ಇನ್ನು ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ನಲ್ಲಿ 1,400 ಜನ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version