ಭಾರತದಲ್ಲಿ ಹಿಂದೂಗಳು ಸಂಭ್ರಮದಿಂದ, ಅದ್ಧೂರಿಯಾಗಿ ಆಚರಿಸುವ ದೀಪಾವಳಿ ಹಬ್ಬ ಯುಎಸ್ನಲ್ಲಿಯೂ ಈಗಾಗಲೇ ಮಹತ್ವ ಪಡೆದುಕೊಂಡಿದೆ. ಅಲ್ಲಿನ ವೈಟ್ಹೌಸ್ನಲ್ಲಿ ಕೂಡ ದೀಪಾವಳಿ ಆಚರಣೆ ನಡೆಯುತ್ತದೆ. ಇದೀಗ ಅಮೆರಿಕದ ಪ್ರಮುಖ ಜನಪ್ರತಿನಿಧಿಯೊಬ್ಬರು ‘ಬೆಳಕಿನ ಹಬ್ಬ ದೀಪಾವಳಿಗೆ ಯುಎಸ್ನಲ್ಲಿ ಸಾರ್ವತ್ರಿಕ ರಜೆ ನೀಡಬೇಕು’ ಎಂಬ ಮಸೂದೆ (Diwali As Federal Holiday In US)ಯನ್ನು ಇಂದು ಯುಎಸ್ ಕಾಂಗ್ರೆಸ್ (ಜನಪ್ರತಿನಿಧಿಗಳ ಸದನ ಮತ್ತು ಸೆನೆಟ್ನ್ನು ಒಳಗೊಂಡ ಶಾಸಕಾಂಗ)ನಲ್ಲಿ ಮಂಡಿಸಿದ್ದಾರೆ.
ಹೀಗೆ ಯುಎಸ್ ಕಾಂಗ್ರೆಸ್ನಲ್ಲಿ ಮಸೂದೆ ಮಂಡಿಸಿದ ಬಳಿಕ ಮಾತನಾಡಿದ ಸಂಸದೆ ಗ್ರೇಸ್ಡ್ ಮೆಂಗ್ ಅವರು ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ದೀಪಾವಳಿ ಹಬ್ಬ ಅತ್ಯಂತ ಮುಖ್ಯವಾದ ದಿನವಾಗಿದೆ. ವಿಶ್ವದಾದ್ಯಂತ ಎಲ್ಲ ಜನಾಂಗದವರೂ ಈ ಬೆಳಕಿನ ಹಬ್ಬವನ್ನು ಆಚರಿಸುತ್ತಾರೆ. ಯುಎಸ್ನಲ್ಲಿ, ಅದರಲ್ಲೂ ನ್ಯೂಯಾರ್ಕ್ನ ಕ್ವೀನ್ಸ್ನಲ್ಲಿ ಅಸಂಖ್ಯಾತ ಕುಟುಂಬಗಳು, ಹಲವು ಸಮುದಾಯದವರು ದೀಪಾವಳಿ ಆಚರಣೆ ಮಾಡುತ್ತಾರೆ. ಹೀಗಾಗಿ ಅಂದಿನ ದಿನವನ್ನು ಸಾರ್ವತ್ರಿಕ ರಜೆ ಎಂದು ಘೋಷಣೆ ಮಾಡಬೇಕು ಎಂಬ ಮಸೂದೆ ಮಂಡಿಸಲಾಗಿದೆ ಎಂದು ಹೇಳಿದರು. ಸದ್ಯ ದಿ ದಿವಾಳಿ ಆ್ಯಕ್ಟ್ಗೆ ಸಂಬಂಧಪಟ್ಟ ಮಸೂದೆಯನ್ನು ಇವರು ಅಮೆರಿಕ ಸಂಸತ್ ಭವನದಲ್ಲಿ ಸಂಸದೆ ಮಂಡನೆ ಮಾಡಿದ್ದಷ್ಟೇ. ಅದಿನ್ನು ಅಲ್ಲಿನ ಅಧ್ಯಕ್ಷರ ಸಹಿ ಪಡೆದ ಬಳಿಕವಷ್ಟೇ ಕಾನೂನು ಆಗಲಿದೆ. ಅದಾದ ಮೇಲೆ ಯುಎಸ್ನಲ್ಲಿ ದೀಪಾವಳಿ ದಿನವನ್ನು ಸಾರ್ವತ್ರಿಕ ರಜೆ ಎಂದು ಘೋಷಣೆ ಮಾಡಲಾಗುತ್ತದೆ.
ಇದನ್ನೂ ಓದಿ: Fire tragedy : ಮೈಸೂರಿನ ಪಟಾಕಿ ಗೋದಾಮು ಬೆಂಕಿಗಾಹುತಿ, ದೀಪಾವಳಿಯಂತೆ ಸಿಡಿದ ಪಟಾಕಿಗಳು, ಲಕ್ಷಾಂತರ ರೂ. ನಷ್ಟ
ಕಳೆದ ವರ್ಷ ಅಧ್ಯಕ್ಷ ಜೋ ಬೈಡೆನ್ ಅವರು ಶ್ವೇತಭವನದಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮನೆಯಲ್ಲೂ ದೀಪಾವಳಿ ಆಚರಣೆ ಭರ್ಜರಿಯಾಗಿ ನಡೆದಿತ್ತು. ಅದಕ್ಕೂ ಮುನ್ನ 2022ರ ಅಕ್ಟೋಬರ್ನಲ್ಲಿ ನ್ಯೂಯಾರ್ಕ್ ಸಿಟಿಯ ಮೇಯರ್ ಎರಿಕ್ ಅಡಮ್ಸ್ ಅವರು ಈ ದೀಪಾವಳಿ ಹಬ್ಬದ ದಿನ ಶಾಲೆಗಳಿಗೆ ರಜೆ ಕೊಡುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ನ್ಯೂಯಾರ್ಕ್ ಸಿಟಿಯಲ್ಲಿ ಅನೇಕಾನೇಕ ಕುಟುಂಬಗಳು ದೀಪಾವಳಿ ಆಚರಿಸುತ್ತವೆ. ಹೀಗಾಗಿ 2023ರಿಂದ ದೀಪಾವಳಿಯಂದು ಶಾಲೆಗೆ ರಜಾ ಕೊಡಲಾಗುವುದು ಎಂದು ಅವರು ತಿಳಿಸಿದ್ದರು. ಈಗ ಒಟ್ಟಾರೆ ಯುಎಸ್ನಲ್ಲಿಯೇ ಸಾರ್ವತ್ರಿಕ ರಜೆ ಎಂದು ಘೋಷಿಸುವ ಬಗ್ಗೆ ಒಂದು ಮಸೂದೆ ಮಂಡಿಸಲಾಗಿದೆ.