ಅಥೆನ್ಸ್: ಭಾರತದಲ್ಲಿ ಇತ್ತೀಚೆಗೆ ವಿಮಾನ ಪ್ರಯಾಣ ಮಾಡುವಾಗ ಸಹ ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸುವ, ಮೂತ್ರ ವಿಸರ್ಜನೆ ಮಾಡುವ, ಗಗನಸಖಿಯರ ಜತೆ ಗಲಾಟೆ ನಡೆಸಿದ ಪ್ರಕರಣಗಳು ಹೆಚ್ಚಾಗುತ್ತಿವೆ. ಈಗ ವಿದೇಶದಲ್ಲೂ ಇಂತಹ ಪ್ರಕರಣಗಳು ಸುದ್ದಿಯಾಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ ಅಮೆರಿಕದ ನ್ಯೂಯಾರ್ಕ್ ಸಿಟಿಯಿಂದ ಗ್ರೀಸ್‌ನ ಅಥೆನ್ಸ್‌ಗೆ ತೆರಳುತ್ತಿದ್ದ ಡೆಲ್ಟಾ ವಿಮಾನದಲ್ಲಿ (Delta Flight) ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಹಿಳೆ ಹಾಗೂ ಮಹಿಳೆಯ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಹೌದು, 2022ರ ಜುಲೈನಲ್ಲಿ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಡೆಲ್ಟಾ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಕನು 10 ಪೆಗ್ ವೋಡ್ಕಾ ಹಾಗೂ ಒಂದು ಗ್ಲಾಸ್ ವೈನ್ ಕುಡಿದು ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಅಮೆರಿಕದಲ್ಲಿ ಡೆಲ್ಟಾ ಏರ್‌ಲೈನ್ಸ್ ವಿರುದ್ಧ ದೂರು ದಾಖಲಾಗಿದೆ. ಅಷ್ಟೇ ಅಲ್ಲ, 16.45 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
“ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಗಗನಸಖಿಯರು ಸತತವಾಗಿ ಮದ್ಯ ಪೂರೈಸಿದ್ದಾರೆ. ಮದ್ಯ ಸೇವಿಸಿದ ವ್ಯಕ್ತಿಯು ಮಹಿಳೆ ಹಾಗೂ ಅವರ ಪುತ್ರಿಗೆ ಕಿರುಕುಳ ನೀಡಿದ್ದಾನೆ. ಇಬ್ಬರ ಜತೆ ಅನುಚಿತವಾಗಿ ವರ್ತಿಸಿದ್ದಾನೆ. ಸುಮಾರು ಒಂಬತ್ತು ಗಂಟೆಯ ಪ್ರಯಾಣದುದ್ದಕ್ಕೂ ಈತ ಕಿರುಕುಳ ನೀಡಿದ್ದಾನೆ. ಮುಟ್ಟಬಾರದ ಜಾಗಕ್ಕೆ ಮುಟ್ಟಿದ್ದಾನೆ. ಈತನಿಗೆ ಮದ್ಯ ಪೂರೈಸಬೇಡಿ ಎಂದು ಮನವಿ ಮಾಡಿದರೂ ವಿಮಾನದ ಸಿಬ್ಬಂದಿ ಕೇಳಿಲ್ಲ” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Air India: ವಿಮಾನದಲ್ಲಿ ಸಿಬ್ಬಂದಿಗೆ ಬೈದು ಟಾಯ್ಲೆಟ್ ಬಾಗಿಲು ಮುರಿದ ವ್ಯಕ್ತಿ; ಸಿಗರೇಟ್ ಚಟಕ್ಕಾಗಿ ಅವಾಂತರ
“ಮಹಿಳೆ ಹಾಗೂ ಪುತ್ರಿಯ ಜತೆ ಅನುಚಿತವಾಗಿ ವರ್ತಿಸಿದ್ದನ್ನು ಕಂಡರೂ, ಇಬ್ಬರೂ ವಿಮಾನದ ಸಿಬ್ಬಂದಿಗೆ ಸಹಾಯಕ್ಕಾಗಿ ಕೋರಿದರೂ ಯಾರೂ ನೆರವಿಗೆ ಬಂದಿಲ್ಲ. ಒಂಬತ್ತು ತಾಸು ಇಬ್ಬರೂ ವ್ಯಕ್ತಿಯಿಂದ ಕಿರುಕುಳ ಅನುಭವಿಸಿದ್ದಾರೆ” ಎಂದು ದೂರಿನಲ್ಲಿ ತಿಳಿಸಲಾಗಿದೆ. ಇನ್ನು ಅಥೆನ್ಸ್ ತಲುಪಿದ ಬಳಿಕ ವಿಮಾನದ ಸಿಬ್ಬಂದಿಯು ಇಬ್ಬರನ್ನೂ ಸಮಾಧಾನಪಡಿಸಲು ಮುಂದಾಗಿದ್ದಾರೆ. “ಸಾರಿ ಕೇಳುತ್ತೇವೆ ಹಾಗೂ 500 ಮೈಲು ದೂರದವರೆಗೆ ವಿಮಾನದಲ್ಲಿ ಉಚಿತವಾಗಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗುತ್ತದೆ” ಎಂದು ಆಫರ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಕೋರ್ಟ್‌ಗೆ ದಾಖಲೆಗಳನ್ನೂ ನೀಡಲಾಗಿದೆ ಎಂದು ತಿಳಿದುಬಂದಿದೆ.