Site icon Vistara News

Facebook: ಪ್ರಜಾಪ್ರಭುತ್ವಕ್ಕೆ ಫೇಸ್‌ಬುಕ್‌ನಿಂದ ಅಪಾಯ, ಜುಕರ್‌ಬರ್ಗ್ ಒಬ್ಬ ಸರ್ವಾಧಿಕಾರಿ!

Nobel Peace Prize winner Maria Ressa

ನವದೆಹಲಿ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಿಂದ (Facebook) ಪ್ರಜಾಪ್ರಭುತ್ವಕ್ಕೆ (democracy) ಧಕ್ಕೆಯಾಗುತ್ತಿದೆ. ಈ ತಾಣದ ಮಾಲೀಕ ಮಾರ್ಕ್ ಜುಕರ್‌ಬರ್ಗ್ ಒಬ್ಬ ಸರ್ವಾಧಿಕಾರಿ ಎಂದು ನೊಬೆಲ್ ಶಾಂತಿ ಪುರಸ್ಕಾರ ಪುರಸ್ಕೃತ ಮತ್ತು ಫಿಲಿಪ್ಪಿನೊ-ಅಮೆರಿಕನ್ ಜರ್ನಲಿಸ್ಟ್ ಮರಿಯಾ ರೆಸ್ಸಾ (Nobel Peace Prize winner Maria Ressa) ಅವರು ಆರೋಪಿಸಿದ್ದಾರೆ. ಬಿಬಿಸಿಯ ಲಾಸ್ಟ್ ಸ್ಯಾಟರ್ಡೇ ಕಾರ್ಯಕ್ರಮದಲ್ಲಿ ಮಾತನಾಡಿದ ರೆಸ್ಸಾ ಅವರು, ಪ್ರಜಾಪ್ರಭುತ್ವಕ್ಕೆ ಫೇಸ್‌ಬುಕ್‌ನಿಂದ ಅಪಾಯ ಎದುರಾಗಿದ್ದು, ಬಳಕೆದಾರರನ್ನು ಬಂಧಿಯಾಗಿಸಿದೆ ಎಂದು ಹೇಳಿದರು.

ಫಿಲಿಪ್ಪಿನ್ಸ್ ಅಧ್ಯಕ್ಷ ಡುಟರ್ಟೆ ಹಾಗೂ ಸಂಪ್ರದಾಯವಾದಿಗಳು ಅಧಿಕಾರಕ್ಕೇರಿದ ಆರು ತಿಂಗಳಲ್ಲೇ ನಮ್ಮ ಎಲ್ಲ ಸಂಸ್ಥೆಗಳನ್ನು ನಾಶ ಮಾಡಿದರು. ಇದಕ್ಕೆ ಫೇಸ್‌ಬುಕ್‌ ಕೂಡ ಸಾಕಷ್ಟು ಕಾಣಿಕೆ ನೀಡಿದೆ ಎಂದು ರೆಸ್ಸಾ ಅವರು ಆರೋಪಿಸಿದರು. ಪತ್ರಕರ್ತೆ ಮರಿಯಾ ರೆಸ್ಸಾ ಅವರು How to stand up to a dictator ಕುರಿತು ಮಾತನಾಡುತ್ತಾ, ನಾವು ಯಾವ ಸರ್ವಾಧಿಕಾರಿಗಳ ಬಗ್ಗೆ ಮಾತನಾಡುತ್ತಿದ್ದೇವೆ? ಯಾರು ಹೆಚ್ಚು ಶಕ್ತಿಶಾಲಿಗಳು? ಫಿಲಿಪ್ಪಿನ್ಸ್‌ನಲ್ಲಿ ಅಧ್ಯಕ್ಷ ಡುಟರ್ಟೆ ಅವರಾ? ಅಥವಾ ಫೇಸ್‌ಬುಕ್‌ನಲ್ಲಿ ಮಾರ್ಕ್ ಜುಕರ್‌ಬರ್ಗಾ ಎಂದು ಪ್ರಶ್ನಿಸಿದರು.

ಇಂಟರ್ನೆಟ್‌ನಲ್ಲಿರುವ ಶೇ.100ರಷ್ಟು ಫಿಲಿಪಿನೋಗಳು ಪೈಕಿ ಎಲ್ಲರೂ ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿದ್ದಾರೆ. ಫೇಸ್‌ಬುಕ್ಕೇ ನಮ್ಮ ಇಂಟರ್ನೆಟ್ ಆಗಿದೆ. ಹಾಗಾಗಿ, ಈ ಟೆಕ್ ಕಂಪನಿಗಳು ಹಾಗೂ ಈ ಸಿಇಒಗಳು ಕೈಗೊಳ್ಳುವ ನಿರ್ಧಾರವೇ ನಮ್ಮ ಜಗತ್ತಾಗಿರುತ್ತದೆ ಎಂದು ಅವರು ಆರೋಪಿಸಿದರು. ಇದೇ ವೇಳೆ, 2018ರಲ್ಲಿ ಮೆಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಕೈಗೊಂಡ ಅಧ್ಯಯನ ವರದಿಯೊಂದನ್ನು ಉಲ್ಲೇಖಿಸಿ, ಅಸಲಿ ಸುದ್ದಿಗಿಂತ ಸುಳ್ಳು ಸುದ್ದಿಗಳು ಹೆಚ್ಚು ವೇಗವಾಗಿ ಪಸರಿಸುತ್ತವೆ ಎಂದು ತಿಳಿಸಿದರು.

2021ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪಡೆದಿರುವ ಮರಿಯಾ ರೆಸ್ಸಾ ಅವರು, ಫಿಲಿಪ್ಪಿನ್ಸ್‌ನ ಅತಿದೊಡ್ಡ ಸ್ವತಂತ್ರ ಮಾಧ್ಯಮ ಸಂಸ್ಥೆ ರ್ಯಾಪ್ಲರ್‌ನ ಸಹ- ಸಂಸ್ಥಾಪಿಕಾಯಾಗಿದ್ದಾರೆ. ಈ ಹಿಂದೆಯೂ ಸೋಷಿಯಲ್ ಮೀಡಿಯಾ ಫೇಸ್‌ಬುಕ್ ಕುರಿತು ಅವರು ಈ ಹಿಂದೆಯೂ ಟೀಕೆಗಳನ್ನು ಮಾಡಿದ್ದಾರೆ. ಸೋಷಿಯಲ್ ಮೀಡಿಯಾ ದೈತ್ಯ ಫೇಸ್‌ಬುಕ್, ಸತ್ಯ ಸಂಗತಿಗಳ ವಿರುದ್ಧದ ವೇದಿಕೆಯಾಗಿದೆ ಎಂದು ಟೀಕಿಸಿದ್ದರು.

ಈ ಸುದ್ದಿಯನ್ನೂ ಓದಿ: Meta: ಭಾರತದಲ್ಲಿ ಫೇಸ್‌ಬುಕ್, ಇನ್‌ಸ್ಟಾದಿಂದ 2.8 ಕೋಟಿ ಕಂಟೆಂಟ್ ಡಿಲಿಟ್! ಏನು ಕಾರಣ?

ಫಿಲಿಪ್ಪಿನ್ಸ್‌ನಲ್ಲಿ ಫೇಸ್‌ಬುಕ್ ಬೀರುತ್ತಿರುವ ಪರಿಣಾಮವನ್ನು ಸಿಇಒ ಮಾರ್ಕ್ ಜುಕರ್‌ಬುರ್ಗ್ ಅವರ ಗಮನಕ್ಕೆ ತರುವ ಪ್ರಯತ್ನವನ್ನು ಮರಿಯಾ ಮಾಡಿದ್ದಾರೆ. 2016ರಲ್ಲಿ ಅವರು ಫೇಸ್‌ಬುಕ್ ಸಂಪರ್ಕಿಸುವ ಪ್ರಯತ್ನ ಮಾಡಿದ್ದರು. ಆ ಮೇಲೆ 2017ರಲ್ಲಿ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ಅವರನ್ನು ಭೇಟಿ ಮಾಡಿ, ಫೇಸ್‌ಬುಕ್‌ನಿಂದಾಗುತ್ತಿರುವ ಪರಿಣಾಮವನ್ನು ತಿಳಿದುಕೊಳ್ಳಲು ಫಿಲಿಪ್ಪಿನ್ಸ್‌ಗೆ ಆಗಮಿಸುವಂತೆ ಆಹ್ವಾನ ನೀಡಿದ್ದರು. ಅಲ್ಲದೇ ಶೇ.97ರಷ್ಟು ಬಳಕೆದಾರರು ಫೇಸ್‌ಬುಕ್‌ನಲ್ಲಿ ಸಕ್ರಿಯರಾಗಿದ್ದಾರೆಂದು ತಿಳಿಸಿದ್ದಾರೆ. ಆಗ ಪ್ರತಿಕ್ರಿಯಿಸಿದ ಮಾರ್ಕ್ ಜುಕರ್‌ಬರ್ಗ್, ಓ ಹೌದಾ.. ಉಳಿದ ಮೂರು ಪ್ರತಿಶತ ಜನರು ಏನು ಮಾಡುತ್ತಿದ್ದಾರೆ ಮಾರಿಯಾ ಎಂದು ಪ್ರಶ್ನಿಸಿದ್ದರು. ಅಂದರೆ, ಫೇಸ್‌ಬುಕ್‌ನಿಂದಾಗುತ್ತಿರವ ಪರಿಣಾಮದ ಬಗ್ಗೆ ಸೋಷಿಯಲ್ ಮೀಡಿಯಾ ಸಿಇಒಗೆ ಯಾವುದೇ ಆತಂಕವಿಲ್ಲ ಎಂಬುದು ಅವರ ವಾದವಾಗಿತ್ತು.

ವಿದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version