ಕೊಲಂಬೊ: ಶ್ರೀಲಂಕಾದ ನೂತನ ಪ್ರಧಾನಿಯಾಗಿ ಮಾಜಿ ಸಚಿವ ದಿನೇಶ್ ಗುಣವರ್ಧನ (73) ಅವರು ನೇಮಕವಾಗುವ ಸಾಧ್ಯತೆ ಇದೆ.
ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ತಮ್ಮ ಶಾಲಾ ಸಹಪಾಠಿಯೂ ಆಗಿದ್ದ ದಿನೇಶ್ ಗುಣವರ್ಧನ ಅವರನ್ನು ಪ್ರಧಾನಿ ಹುದ್ದೆಗೆ ಹೆಸರಿಸುವ ನಿರೀಕ್ಷೆ ಇದೆ. ಕಳೆದ ಬುಧವಾರ ವಿಕ್ರಮಸಿಂಘೆ ಅವರು ನೂತನ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಅಧ್ಯಕ್ಷ ವಿಕ್ರಮಸಿಂಘೆ ಅವರು ಶುಕ್ರವಾರ ಸಚಿವ ಸಂಪುಟವನ್ನು ರಚಿಸುವ ನಿರೀಕ್ಷೆ ಇದೆ.
ಹಿರಿಯ ರಾಜಕಾರಣಿ ದಿನೇಶ್ ಗುಣವರ್ಧನ ಅವರು ರಾಜಪಕ್ಸ ಕುಟುಂಬದ ಆಪ್ತರೂ ಹೌದು. ರಾಜಪಕ್ಸ ಸರ್ಕಾರ ಪತನವಾದ ಬಳಿಕ, ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ವಿಕ್ರಮಸಿಂಘೆ, ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದೇಶವನ್ನು ವಿಪತ್ತಿನಿಂದ ಪಾರು ಮಾಡುವ ಸಲುವಾಗಿ, ಎಲ್ಲ ಪಕ್ಷಗಳನ್ನೂ ಸರ್ಕಾರ ರಚನೆಗೆ ಆಹ್ವಾನಿಸಿದ್ದಾರೆ.