ಕಣ್ಣಿನ ಸಮಸ್ಯೆ ಇರುವವರು, ಅಂದರೆ ದೂರದೃಷ್ಟಿ, ಸಮೀಪ ದೃಷ್ಟಿ ದೋಷ ಇದ್ದು ಕಣ್ಣು ಸರಿಯಾಗಿ ಕಾಣದೆ ಇರುವವರು ಕನ್ನಡಕ ಧರಿಸುವುದು ಸಾಮಾನ್ಯ. ಈಗ ಅನೇಕರು ಕನ್ನಡಕಕ್ಕೆ ಪರ್ಯಾಯವಾಗಿ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಬಳಸುತ್ತಾರೆ. ಲೆನ್ಸ್ಗಳು ಮುಖದ ಸೌಂದರ್ಯ ಹಾಳು ಮಾಡುವುದಿಲ್ಲ, ತೊಂದರೆ ಕೊಡುವುದಿಲ್ಲ, ಕನ್ನಡಕಕ್ಕಿಂತಲೂ ಇದೇ ಉತ್ತಮ ಎಂಬುದು ಅನೇಕರ ಅಭಿಪ್ರಾಯ. ಆದರೆ ಹೀಗೆ ಲೆನ್ಸ್ ಬಳಸುವವರು ಅದನ್ನು ಸರಿಯಾಗಿ ಗಮನಕೊಟ್ಟು ನಿಭಾಯಿಸಬೇಕು. ಅದರ ಬಾಳಿಕೆ ಎಷ್ಟು ಅವಧಿಯೋ, ಅಷ್ಟೇ ಅವಧಿಗೆ ಬಳಸಬೇಕು. ಹಾಗೇ ಯಾವ ಕಾರಣಕ್ಕೂ ನಿದ್ದೆ ಮಾಡುವಾಗ ಲೆನ್ಸ್ ಹಾಕಿಕೊಂಡೇ ನಿದ್ದೆ ಮಾಡಬಾರದು. ಹಾಗೊಮ್ಮೆ ಮಾಡಿದರೆ ಈ ಮಹಿಳೆಗೆ ಆದ ಸ್ಥಿತಿಯೇ ಆಗಬಹುದು..!
California Eye Associates ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ವೈದ್ಯರೊಬ್ಬರು ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಅವರು ಮಹಿಳೆಯೊಬ್ಬರ ಕಣ್ಣಿನಿಂದ 23 ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಹೊರತೆಗೆಯುವುದನ್ನು ನೋಡಬಹುದು. ಈ ದೃಶ್ಯ ನೋಡುತ್ತಿದ್ದರೆ ಮೈ ಜುಂ ಎನ್ನುತ್ತದೆ. ಆ ಲೆನ್ಸ್ಗಳೆಲ್ಲ ಆಕೆಯ ಕಣ್ಣಿನ ಮೇಲ್ಭಾಗಕ್ಕೆ ಹೋಗಿ ಸೇರಿಕೊಂಡಿದ್ದವು. ಅದನ್ನು ವೈದ್ಯರು ಒಂದೊಂದಾಗಿ ತೆಗೆದಿದ್ದಾರೆ. ಈ ವಿಡಿಯೋ ಶೇರ್ ಮಾಡಿಕೊಂಡ ವೈದ್ಯರು ‘ಲೆನ್ಸ್ ಬಳಸುವವರು ಯಾವ ಕಾರಣಕ್ಕೂ ರಾತ್ರಿ ಮಲಗುವಾಗ ಅದನ್ನು ಹಾಕಿಕೊಂಡೇ ನಿದ್ದೆ ಮಾಡಬೇಡಿ’ ಎಂದು ಎಚ್ಚರಿಕೆಯ ಕ್ಯಾಪ್ಷನ್ ಬರೆದಿದ್ದಾರೆ.
ಈ ಮಹಿಳೆ ಕಣ್ಣಿಗೆ ಲೆನ್ಸ್ ಧರಿಸುತ್ತಿದ್ದರು. ಆದರೆ ರಾತ್ರಿ ಅದನ್ನು ತೆಗೆಯುತ್ತಿರಲಿಲ್ಲ. ಹಾಗೇ ನಿದ್ದೆ ಮಾಡಿ, ಬೆಳಗ್ಗೆ ಎದ್ದು ಮತ್ತೆ ಹೊಸದೊಂದು ಲೆನ್ಸ್ ಹಾಕಿಕೊಳ್ಳುತ್ತಿದ್ದರು. ತಿಂಗಳು ಕಾಲ ಇದೇ ಮುಂದುವರಿದೆ. ಲೆನ್ಸ್ಗಳೆಲ್ಲ ಕಣ್ಣಿನ ಗುಡ್ಡೆ ಮೇಲ್ಭಾಗಕ್ಕೆ ಹೋಗಿ, ಒಂದಕ್ಕೊಂದು ಅಂಟಿಕೊಂಡು ಕುಳಿತಿದ್ದವು. ಇದರಿಂದಾಗಿ ಅವರಿಗೆ ನೋವು ಬರಲು ಪ್ರಾರಂಭವಾಗಿತ್ತು. ಲೆನ್ಸ್ಗಳನ್ನು ತೆಗೆಯಲು ನಾನು ಅತಿ ಸೂಕ್ಷ್ಮವಾದ ಉಪಕರಣ ಬಳಸಬೇಕಾಯಿತು ಎಂದು ವೈದ್ಯರು ತಿಳಿಸಿದ್ದಾರೆ. ಕಾಂಟ್ಯಾಕ್ಟ್ ಲೆನ್ಸ್ಗಳು ಸಾಮಾನ್ಯವಾಗಿ ನೀಲಿ ಬಣ್ಣದಲ್ಲಿ ಇರುತ್ತವೆ. ನಾನು ಅದನ್ನು ಹೊರತೆಗೆಯಬೇಕಾದರೆ ಫ್ಲೋರಾಕ್ಸ್ ಎಂಬ ವಿಶೇಷ ಸ್ಟೇನ್ (Stain) ಬಳಸಿದ್ದೇನೆ. ಹಾಗಾಗಿ ಅವು ಹಸಿರು ಬಣ್ಣಕ್ಕೆ ತಿರುಗಿದ್ದವು ಎಂದೂ ವೈದ್ಯರು ತಿಳಿಸಿದ್ದಾರೆ.
ಹೀಗೆ ಮಹಿಳೆಯ ಕಣ್ಣಿನಿಂದ ಕಾಂಟ್ಯಾಕ್ಟ್ ಲೆನ್ಸ್ ತೆಗೆಯುವ ವಿಡಿಯೊವನ್ನು ನೋಡಿ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ‘ನಾನೂ ಲೆನ್ಸ್ಗಳನ್ನು ಧರಿಸುತ್ತೇನೆ. ಆದರೆ ನನ್ನ ಕಣ್ಣಲ್ಲಿ ಅದು ಇದೆ ಎನ್ನುವುದು ನನಗೆ ಸದಾ ನೆನಪಿನಲ್ಲಿ ಇರುತ್ತದೆ. ಆದರೆ ಈ ಮಹಿಳೆಗೆ ಏನಾಗಿದೆ? 23 ಲೆನ್ಸ್ಗಳಿದ್ದರೂ ಗೊತ್ತಾಗಲಿಲ್ಲವೇ?’ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ‘ಇದು ಹೇಗಾಯಿತು ಎಂದು ಸರಿಯಾಗಿ ವಿವರಿಸಿ ಹೇಳಿ’ ಎಂದು ಇನ್ನೊಬ್ಬರು ಕೇಳಿದ್ದಾರೆ. ‘ಇಷ್ಟೆಲ್ಲ ನಿರ್ಲಕ್ಷ್ಯ ಮಾಡುವವರೂ ಇರುತ್ತಾರಾ?’ ಎಂದೂ ಕೇಳಿದವರು ಇದ್ದಾರೆ.
ಇದನ್ನೂ ಓದಿ: Cancer Update | ಕಣ್ಣೀರಿನಿಂದ ಕ್ಯಾನ್ಸರ್ ಪತ್ತೆಹಚ್ಚುವ ಲೆನ್ಸ್ ಅಭಿವೃದ್ಧಿ, ಹೇಗಿದರ ಕಾರ್ಯ?