ಗರ್ಭಿಣಿಯರಿಗೆ ಸಹಜವಾಗಿ ಹೆರಿಗೆಯಾಗುವಾಗ ತುಂಬ ಪ್ರಯಾಸವಾಗುತ್ತದೆ. ಪ್ರಸವ ವೇದನೆ (Delivery)ಯನ್ನು ಬಲ್ಲವರೇ ಬಲ್ಲರು. ಹೊಟ್ಟೆಯಿಂದ ಮಗು ಹೊರಬರುವ ಸಂದರ್ಭದಲ್ಲಿ ಆ ತಾಯಿ ನರಕ ನೋಡಿಬಿಡುತ್ತಾಳೆ. ಆಕೆಗೆ ಹೆರಿಗೆ ಮಾಡಿಸುವ ವೈದ್ಯರು, ಪ್ರಸೂತಿ ತಜ್ಞರು ಅತ್ಯಂತ ನಾಜೂಕಾಗಿ ಅವಳ ಹೊಟ್ಟೆಯನ್ನು ಒತ್ತುತ್ತ, ಹೊರಬರುತ್ತಿರುವ ಮಗುವನ್ನು ಅತ್ಯಂತ ಸೂಕ್ಷ್ಮವಾಗಿ ಹಿಡಿದುಕೊಳ್ಳುತ್ತಾರೆ. ತಾಯಿ ಮತ್ತು ಮಗು ಇಬ್ಬರಿಗೂ ಏನೂ ತೊಂದರೆಯಾಗದಂತೆ ಕಾಪಾಡುವ ಜವಾಬ್ದಾರಿ ಆ ವೈದ್ಯರದ್ದಾಗಿರುತ್ತದೆ. ಆದರೆ ಬ್ರೆಜಿಲ್ನಲ್ಲಿ ವೈದ್ಯ (Brazil Doctor)ನೊಬ್ಬ ಉಳಿದವರು ಬೆಚ್ಚಿ ಬೀಳುವಂತೆ ಮಹಿಳೆಯರೊಬ್ಬರಿಗೆ ಹೆರಿಗೆ ಮಾಡಿಸಿದ್ದಾನೆ. ಅವನ ಅಜಾಗರೂಕತೆಯಿಂದಾಗಿ ತಾಯಿಯ ಹೊಟ್ಟೆಯಿಂದ ಮಗುವಿನ ಕತ್ತರಿಸಿದ ತಲೆ ಹೊರಬಿದ್ದಿದೆ. ಅದೂ ಕೂಡ ಆ ಮಹಿಳೆಯ ಪತಿ ಕಣ್ಣೆದುರಲ್ಲೇ ಆಗಿದೆ.
ಘಟನೆ ನಡೆದಿದ್ದು ಮೇ 1ರಂದು. ಸಾಂಟಾ ಎಫಿಜೆನಿಯಾದಲ್ಲಿರುವ ಹಾಸ್ಪಿಟಲ್ ದಾಸ್ ಕ್ಲಿನಿಕಾಸ್ UFMG ಎಂಬ ಆಸ್ಪತ್ರೆಗೆ ತುಂಬು ಗರ್ಭಿಣಿ ರಾನಿಲ್ಲಿ ಕೊಯೆಲ್ಹೋ ಸ್ಯಾಂಟೋಸ್ (33) ದಾಖಲಾಗಿದ್ದರು. ಅದಾಗಲೇ ಆಕೆಗೆ 9 ವರ್ಷದ ಮಗಳು ಒಬ್ಬಳು ಇದ್ದಳು. ಇದು ಅವಳ ಎರಡನೇ ಹೆರಿಗೆ ಆಗಿತ್ತು. ಏಪ್ರಿಲ್ 28ರಂದು ಅವರು ಆಸ್ಪತ್ರೆ ಸೇರಿದ್ದರು. ಆಕೆಯನ್ನು ಹೆರಿಗೆಗಾಗಿ ಪ್ರಸೂತಿ ವಿಭಾಗಕ್ಕೆ ಕರೆದುಕೊಂಡು ಹೋದಾಗ ವೈದ್ಯ, ಅವರ ಪತಿಯನ್ನೂ ಒಳಗೆ ಕರೆದರು. ಮಗು ಹುಟ್ಟುವುದನ್ನು ನೀವೂ ನೋಡಬೇಕು ಎಂದು ಹೇಳಿದರು. ಈಗೆಲ್ಲ ಅನೇಕ ಕಡೆ ಹೀಗೆ ಮಾಡುತ್ತಾರೆ. ಪತಿಯೂ ಕೂಡ ಪತ್ನಿಯ ಹೆರಿಗೆ ಸಂದರ್ಭದಲ್ಲಿ ಅಲ್ಲಿರುತ್ತಾರೆ.
ಮಹಿಳೆ ನೋವಿನಲ್ಲಿ ಕೂಗಾಡುತ್ತಿದ್ದರು. ಆ ವೈದ್ಯ ಮಹಿಳೆಯ ಹೊಟ್ಟೆಗೆ ಒತ್ತಡ ಕೊಡುತ್ತಿದ್ದ. ಮಗು ಸ್ವಲ್ಪ ಹೊರಬಂದಿತ್ತು. ಆದರೆ ಮಗು ಬೇಗ ಹೊರಬರಲಿ ಎಂದು ಗರ್ಭಿಣಿಯ ಹೊಟ್ಟೆಯ ಮೇಲೆ ಹತ್ತಿ ಕುಳಿತಿದ್ದಾನೆ. ಇವನ ಒತ್ತಡಕ್ಕೆ ಮಗುವಿನ ತಲೆ ಕತ್ತರಿಸಿ ಹೊರಬಂದಿದೆ. ಅದನ್ನು ನೋಡಿ ಅಲ್ಲೇ ಇದ್ದ ಆ ಪುಟ್ಟ ಕೂಸಿನ ಅಪ್ಪನಿಗೆ ದಿಗಿಲುಬಡಿದಿದೆ. ಅವರೆ ಹೋಗಿ ಪೊಲೀಸರಿಗೆ ದೂರು ನೀಡಿದ್ದಾರೆ. ‘ಮಗು ಜನನ ಆಗುವುದನ್ನು ನಾನು ಹತ್ತಿರದಿಂದ ನೋಡುತ್ತಿದ್ದೆ. ಅದು ಹೆಣ್ಣು ಮಗು, ಮೊದಲು ಅದರ ಮುಖ ಸ್ವಲ್ಪವೇ ಹೊರಗೆ ಕಂಡಿತ್ತು. ಅದು ಕಣ್ಣು ಮಿಟುಕಿಸುತ್ತಿತ್ತು. ಅದರ ಬಾಯಿಯಲ್ಲಿ ಚಲನೆ ಇತ್ತು. ಅಷ್ಟಾದ ಮೇಲೆ ವೈದ್ಯ ಇನ್ನಷ್ಟು ಅವಸರ ಮಾಡಿದ. ನನ್ನ ಪತ್ನಿಯ ಹೊಟ್ಟೆಯ ಮೇಲೆ ಹತ್ತಿ ಒತ್ತಡ ಕೊಟ್ಟ. ಆಗ ಮಗುವಿನ ತಲೆ ಕತ್ತರಿಸಲ್ಪಟ್ಟಿದೆ. ವೈದ್ಯ ಮಗುವನ್ನು ಹಿಡಿದು ಎಳೆದಾಗ ಅವನ ಕೈಯಲ್ಲಿ ಮಗುವಿನ ತಲೆ ಇತ್ತು. ಮಗು ಹುಟ್ಟುವಾಗಲೇ ಸತ್ತಿತ್ತು ಎಂದು ವೈದ್ಯ ಹೇಳುತ್ತಾನೆ. ಆದರೆ ಹಾಗಿರಲಿಲ್ಲ. ಅದು ಜೀವಂತವಾಗಿತ್ತು ಎಂಬುದಕ್ಕೆ ಸಾಕ್ಷಿಯಿದೆ‘ ಎಂದು ಮಹಿಳೆಯ ಪತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ನಿದ್ದೆಯಲ್ಲಿದ್ದ ಉದ್ಯಮಿಯ ಕಾಲ್ಬೆರಳು ಚೀಪಿದ ಹೋಟೆಲ್ ಮ್ಯಾನೇಜರ್: ಪಾರಾಗಲು ಹೊಗೆ ವಾಸನೆ ಕಥೆ ಕಟ್ಟಿದ!
ಇಷ್ಟಾದ ಮೇಲೆ ಆಸ್ಪತ್ರೆ ಈ ತಪ್ಪನ್ನು ಮರೆಮಾಚಲು ಯತ್ನಿಸಿದೆ. ಮಗುವಿನ ಶವಪರೀಕ್ಷೆ ಮಾಡದೆಯೇ, ಅದು ಆಗಿ ಹೋಗಿದೆ ಎಂದು ವರದಿ ಕೊಟ್ಟಿದೆ. ಹೆರಿಗೆ ಮಾಡಿಸಿದ ವೈದ್ಯ ಒಂದು ಕ್ಷಮಾಪಣಾ ಪತ್ರ ಕೊಟ್ಟು ಪಾರಾಗಲು ಯತ್ನಿಸಿದ. ಬಳಿಕ ಮೃತ ಮಗುವಿನ ಕುಟುಂಬ ಒಂದು ಸಾಮಾಜಿಕ ಕಾರ್ಯಕರ್ತನನ್ನು ಸಂಪರ್ಕಿಸಿ, ಅವನ ಮೂಲಕ ಕಾನೂನು ಹೋರಾಟ ನಡೆಸಿ ಆಸ್ಪತ್ರೆಯಿಂದ ಪರಿಹಾರ ಪಡೆದಿದೆ ಎನ್ನಲಾಗಿದೆ. ಇನ್ನೊಂದೆಡೆ ಪೊಲೀಸರು ಆಸ್ಪತ್ರೆ ಸಿಬ್ಬಂದಿಯನ್ನು, ವೈದ್ಯನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.