ಕಠ್ಮಂಡು: ಮದ್ಯ ಪ್ರಿಯರು ಯಾವಾಗಲೂ ಮದ್ಯದ ಬಗ್ಗೆಯೇ ಯೋಚಿಸುತ್ತಾರೆ. ಅವರಿಗೆ ಕಂಠಪೂರ್ತಿ ಮದ್ಯ ಸೇವಿಸಿದರೇನೇ ಆ ದಿನ ಸಾರ್ಥಕ ಎನಿಸುತ್ತದೆ. ಆದರೆ, ನೇಪಾಳದಲ್ಲೊಬ್ಬ ಮದ್ಯಪ್ರಿಯನ ಹೊಟ್ಟೆಯಲ್ಲಿ ವೋಡ್ಕಾ ಬಾಟಲಿಯೇ (Viral News:) ಸಿಕ್ಕಿದ್ದು, ವೈದ್ಯರಿಗೇ ಅಚ್ಚರಿಯಾಗಿದೆ. ಅಷ್ಟೇ ಏಕೆ, ವ್ಯಕ್ತಿಗೂ ತನ್ನ ಹೊಟ್ಟೆಯಲ್ಲಿ ವೋಡ್ಕಾ ಬಾಟಲಿ ಹೇಗೆ ಸೇರಿದೆ ಎಂಬ ಗೊಂದಲ ಮೂಡಿದೆ.
ಹೌದು, ಏಕಾಏಕಿ ಹೊಟ್ಟೆನೋವು ಕಾಣಿಸಿಕೊಂಡ ಕಾರಣ ರೌತಾಹತ್ ಜಿಲ್ಲೆಯ ನುರ್ಸಾದ್ ಮನ್ಸೂರಿ ಎಂಬ ವ್ಯಕ್ತಿಯು ಆಸ್ಪತ್ರೆಗೆ ತೆರಳಿದ್ದಾರೆ. ಸ್ಕ್ಯಾನಿಂಗ್ ಮಾಡಿ ನೋಡಿದಾಗ ಮನ್ಸೂರಿ ಹೊಟ್ಟೆಯಲ್ಲಿ ವಸ್ತುವೊಂದು ಇರುವುದು ಪತ್ತೆಯಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದಾಗ ವೋಡ್ಕಾ ಬಾಟಲಿ ಸಿಕ್ಕಿದೆ. ಇದು ಮನ್ಸೂರಿಯೂ ಅಚ್ಚರಿಯಾಗುವಂತೆ ಮಾಡಿದೆ. ವ್ಯಕ್ತಿಯು ಅಪಾಯದಿಂದ ಪಾರಾಗಿದ್ದಾನೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: Viral Video : ಮಾರುದ್ದದ ವಿಷಕಾರಿ ಹಾವನ್ನು ಕೈನಲ್ಲಿ ಹಿಡಿದು ವಿಡಿಯೊ ಮಾಡಿದ ವ್ಯಕ್ತಿ; ಇಲ್ಲಿದೆ ನೋಡಿ ವೈರಲ್ ವಿಡಿಯೊ
ಹೊಟ್ಟೆ ಸೇರಿದ್ದು ಹೇಗೆ?
ನುರ್ಸಾದ್ ಮನ್ಸೂರಿಯು ಇತ್ತೀಚೆಗೆ ಗೆಳೆಯರ ಜತೆ ಪಾರ್ಟಿ ಮಾಡಿದ್ದಾನೆ. ಇದೇ ವೇಳೆ ಗೆಳೆಯರು ಮನ್ಸೂರಿಗೆ ಜಾಸ್ತಿ ಕುಡಿಸಿದ್ದಾರೆ. ಹಾಗೆಯೇ, ವೋಡ್ಕಾ ಬಾಟಲಿಯನ್ನೂ ಮನ್ಸೂರಿ ಬಾಯಿಗೆ ತುರುಕಿದ್ದಾರೆ. ದುರದೃಷ್ಟವಶಾತ್, ಬಾಟಲಿಯು ಹೊಟ್ಟೆಯೊಳಗೆ ಹೋಗಿದೆ. ಇದರ ಕುರಿತು ಗೆಳೆಯರು ಮನ್ಸೂರಿಗೆ ಹೇಳಿಲ್ಲ. ಆದರೆ, ಕೆಲ ದಿನಗಳ ಬಳಿಕ ಮನ್ಸೂರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಬಳಿಕ ಬಾಟಲಿ ಪತ್ತೆಯಾಗಿದೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಖ್ ಶಮೀಮ್ ಎಂಬಾತನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.