ಕ್ಯಾಲಿಫೋರ್ನಿಯಾದ ಪೆಟಲುಮಾದಲ್ಲಿ ಕಳೆದ 50ವರ್ಷಗಳಿಂದ ಆಚರಿಸಲಾಗತ್ತಿರುವ ಸೊನೊಮಾ ಮರಿನ್ ಉತ್ಸವದ ಅಂಗವಾಗಿ ನಡೆಯುವ ‘ವಿಶ್ವದ ಅತ್ಯಂತ ಕುರೂಪಿ ನಾಯಿ (Ugliest Dog 2023)’ ಸ್ಪರ್ಧೆಯಲ್ಲಿ ಈ ಬಾರಿ ಚೀನಾದ ‘ಸ್ಕೂಟರ್’ ಗೆದ್ದಿದೆ. ಸ್ಕೂಟರ್ ಎಂಬುದು ಚೀನಾದ ಏಳು ವರ್ಷದ ನಾಯಿಯ ಹೆಸರು(Dog Scooter). ಈ ಸಲ ಸ್ಪರ್ಧೆ ಗೆದ್ದು 1500 ಯುಎಸ್ ಡಾಲರ್ (1,22,978 ರೂಪಾಯಿ) ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಇನ್ನು ನಾಯಿಗಳ ದತ್ತು ತೆಗೆದುಕೊಳ್ಳುವಿಕೆ, ಬರೀ ಸುಂದರವಾದ ನಾಯಿಗಳನ್ನಷ್ಟೇ ಅಲ್ಲ, ದೇಹದಲ್ಲಿ ಊತಹೊಂದಿರುವ ನಾಯಿಗಳನ್ನೂ ಸಾಕುವುದನ್ನು ಉತ್ತೇಜಿಸುವ ಸಲುವಾಗಿ ಇಂಥದ್ದೊಂದು ಸ್ಪರ್ಧೆ ಆಯೋಜಿಸಲಾಗುತ್ತಿದೆಯಂತೆ. ವಿಶ್ವದ ವಿವಿಧ ದೇಶಗಳ ನಾಯಿ ಮಾಲೀಕರು ತಮ್ಮ ಶ್ವಾನಗಳನ್ನು ಕರೆದುಕೊಂಡು ಇಲ್ಲಿಗೆ ಬರುತ್ತಾರೆ.
ಈ ಸಲ ಗೆದ್ದಿರುವ ಚೀನಾದ ಏಳುವರ್ಷದ ನಾಯಿ ಸ್ಕೂಟರ್ಗೆ ಹಿಂಬದಿಯ ಕಾಲುಗಳ ರಚನೆ ಸಮರ್ಪಕವಾಗಿಲ್ಲ. ಬಾಗಿಕೊಂಡಿವೆ. ಮುಖವೂ ಸರಿಯಾಗಿಲ್ಲ. ಹಣೆಯನ್ನು ಹೊರತು ಪಡಿಸಿ, ಮೈಮೇಲೆ ಇನ್ನೆಲ್ಲೂ ಕೂದಲೂ ಇಲ್ಲ. ನಾಲಿಗೆಯನ್ನು ಚಾಚಿಕೊಂಡೇ ಇರುತ್ತದೆ. ಇದು ತುಂಬ ಚಿಕ್ಕದಾಗಿದ್ದಾಗ ಪ್ರಾಣಿ ಸಂರಕ್ಷಣಾ ಗ್ರೂಪ್ವೊಂದು ಇದನ್ನು ರಕ್ಷಿಸಿತು. ಅದೇ ಗುಂಪಿನಲ್ಲಿದ್ದ ಸಿಬ್ಬಂದಿಯೊಬ್ಬರು ಇದನ್ನು ದತ್ತು ಪಡೆದರು. ಸುಮಾರು ಏಳು ವರ್ಷ ತನ್ನ ಬಳಿ ಇಟ್ಟು ನೋಡಿಕೊಂಡರು. ಔಷಧಿ ಕೊಡಿಸಿದರು. ಆರೈಕೆ ಮಾಡಿದರು. ಇನ್ನು ತನ್ನ ಬಳಿ ಸಾಕಲಾಗದು ಎಂದಾಗ ಲಿಂಡಾ ಎಲ್ಮ್ಕ್ವಿಸ್ಟ್ ಎಂಬ ಮಹಿಳೆಗೆ ಇದನ್ನು ಮಾರಿದ್ದಾರೆ. ಅವರು ಸದ್ಯ ಸ್ಕೂಟರ್ನ ಕಾಳಜಿ ಮಾಡುತ್ತಿದ್ದಾರೆ, ಹಾಗೇ, ಈ ಸ್ಪರ್ಧೆಗೂ ಕರೆದುಕೊಂಡು ಬಂದಿದ್ದರು.
ಇದನ್ನೂ ಓದಿ: Viral News : ನಾಯಿ ನೋಡಿಕೊಂಡು ಇರೋದಕ್ಕೆ 1 ಕೋಟಿ ರೂ. ಸಂಬಳ!
ಸ್ಕೂಟರ್ ಹಿಂದಿನ ಕಾಲುಗಳು ಬಾಗಿದ್ದರಿಂದ, ಅದಕ್ಕೆ ಮುಂದಿನ ಕಾಲುಗಳ ಮೇಲೆ ಮಾತ್ರ ನಡೆಯಲು ಸಾಧ್ಯ. ತುಂಬ ದೂರ ನಡೆಯಲು ಸಾಧ್ಯವಿಲ್ಲ. ಬಹಳ ಬೇಗನೇ ಆಯಾಸಗೊಳ್ಳುತ್ತದೆ. ‘ಸ್ಕೂಟರ್ಗಾಗಿ ಒಂದು ಪುಟ್ಟ ಗಾಡಿಯನ್ನು ಮಾಡಲಾಗಿದೆ. ಮೊದಮೊದಲು ಅದಕ್ಕೆ ಅವನು ಹೊಂದಿಕೊಳ್ಳಲಿಲ್ಲ. ಆದರೆ ನಂತರ ಸರಿಯಾಗಿ ಬಳಸುವುದನ್ನು ಕಲಿತ. ಅವನಿಗೆ ಕಾಲುಗಳು ಸರಿಯಿಲ್ಲ ಎನ್ನುವುದು ಬಿಟ್ಟರೆ, ಉಳಿದಂತೆ ಸಹಜವಾಗಿಯೇ ಇದ್ದಾನೆ. ಚುರುಕು ಬುದ್ಧಿಯಿದೆ’ ಎಂದು ಲಿಂಡಾ ಹೇಳಿದ್ದಾರೆ.