ನಾಯಿಗಳು ತಮ್ಮನ್ನು ಸಾಕಿದವರನ್ನು ತುಂಬ ಪ್ರೀತಿಸುತ್ತವೆ. ಮನೆಯಲ್ಲಿ, ಮನೆಯ ಸದಸ್ಯನಂತೇ ಇರುತ್ತವೆ. ಸಾಕಿದವರನ್ನು ಕಾಯುತ್ತ, ಮುದ್ದುಗರೆಯುತ್ತ, ಕಾಲು ಸುತ್ತುತ್ತಲೇ ಕಾಲಕಳೆಯುತ್ತವೆ. ನಾಯಿಗಳು ಮನುಷ್ಯನತ್ತ ತೋರಿಸುವ ಪ್ರೀತಿ, ನಿಷ್ಠೆಗೆ ಸಂಬಂಧಪಟ್ಟ ಹಲವು ಸ್ಟೋರಿಗಳನ್ನು ಓದಿದ್ದೇವೆ, ವಿಡಿಯೊಗಳಲ್ಲಿ ನೋಡಿದ್ದೇವೆ. ಇದೀಗ ಗೋಲ್ಡನ್ ರಿಟ್ರೈವರ್ ಪ್ರಭೇದಕ್ಕೆ ಸೇರಿದ ಸಾಕು ನಾಯಿಯೊಂದು ಇದೇ ಸಾಲಿಗೆ ಸೇರಿದೆ. ಮತ್ತೊಬ್ಬರ ಮನೆಯಲ್ಲಿ ತನ್ನನ್ನು ಬಿಟ್ಟು ಹೋದ ಮಾಲೀಕನನ್ನು ಅರಸಿಕೊಂಡು ವಾಪಸ್ ಹೋಗಿದೆ. ಅವನಿಗಾಗಿ 40 ಮೈಲುಗಳಷ್ಟು ದೂರ (64 ಕಿಮೀ) ನಡೆದಿದೆ.
ಈ ಶ್ವಾನದ ಹೆಸರು ಕೂಪರ್ ಲೀಪ್ಟ್. ಉತ್ತರ ಐರ್ಲ್ಯಾಂಡ್ನ ಲಂಡೆನ್ಡೆರಿ ಕೌಂಟಿಯ ಟೋಬರ್ಮೋರ್ ಎಂಬಲ್ಲಿ ಮನೆಯೊಂದರಲ್ಲಿ ಕೂಪರ್ನನ್ನು ಸಾಕಲಾಗಿತ್ತು. ಆದರೆ ಅವರು ಇನ್ಮುಂದೆ ನಾಯಿಯ ಬಗ್ಗೆ ಕಾಳಜಿ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅದನ್ನು ಟೈರೋನ್ ಕೌಂಟಿಯಲ್ಲಿರುವ ಮನೆಯೊಂದಕ್ಕೆ ಕರೆತಂದರು. ಆ ಮನೆಯಲ್ಲಿ ಅದಾಗಲೇ ಒಂದು ನಾಯಿ ಇದ್ದುದರಿಂದ, ಕೂಪರ್ಗೆ ಅನುಕೂಲವಾಗುತ್ತದೆ. ಇಲ್ಲಿ ಹೊಂದಿಕೊಳ್ಳಲು ತುಂಬ ಸಮಯ ಬೇಕಾಗುವುದಿಲ್ಲ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅವರ ಕಲ್ಪನೆಯೇ ತಪ್ಪಾಗಿತ್ತು. ಹಳೇ ಮಾಲೀಕ ಶ್ವಾನವನ್ನು ಕಾರಿನಲ್ಲಿ ಕರೆತಂದು ವಾಪಸ್ ಹೋದರು. ಆದರೆ ನಾಯಿ ಕೆಲವೇ ಹೊತ್ತು ಮಾತ್ರ ಈ ಮನೆಯಲ್ಲಿ ಇತ್ತು. ಮತ್ತು ಹೊಸ ಮನೆಯ ಸಹವಾಸ ಬೇಡ, ಹಳೇ ಓನರ್ ಬೇಕೆಂದು ಹೊರಟೇಬಿಟ್ಟಿತ್ತು. ಸುಮಾರು 27ದಿನಗಳ ಕಾಲ, 64 ಕಿಮೀ ದೂರ ನಡೆದಿದೆ. ಹಳೇ ಮಾಲೀಕನ ಮನೆಗಿಂತ ಕೆಲವೇ ಕಿಮೀ ದೂರದಲ್ಲಿ ನಾಯಿ ಸಿಕ್ಕಿದೆ.
ಇದನ್ನೂ ಓದಿ: ಅಮ್ಮನ ವಿರುದ್ಧ ಅಜ್ಜಿಗೆ ದೂರು ಕೊಡಲು 22 ತಾಸು ಸೈಕಲ್ ಹೊಡೆದ 11 ವರ್ಷದ ಬಾಲಕ; 130 ಕಿಮೀ ದೂರ ಸಾಗಿದ ಬಳಿಕ ಏನಾಯ್ತು?
ಶ್ವಾನದ ಹೊಸ ಮಾಲೀಕ ನಿಗೆಲ್ ಫ್ಲೆಮಿಂಗ್ ಅವರು ತೀವ್ರ ಹುಡುಕಾಟ ನಡೆಸಿದ್ದರು. ಈಗಷ್ಟೇ ತಮ್ಮ ಮನೆಗೆ ಬಂದ ಶ್ವಾನ ಎಲ್ಲಿ ಹೋಯಿತು ಎಂದು ಅರ್ಥವಾಗದೆ ಕಾಣೆಯಾದ ಸಾಕುಪ್ರಾಣಿಗಳನ್ನು ಹುಡಕಿಕೊಡುವ ಸಂಸ್ಥೆ ಲಾಸ್ಟ್ ಪಾವ್ಸ್ಗೆ ದೂರು ಕೊಟ್ಟಿದ್ದರು. ಅದರ ಸಿಬ್ಬಂದಿ ಹಲವು ಕಡೆ ಹುಡುಕಿದ್ದಾರೆ. ಕೂಪರ್ ಲೀಪ್ಟ್ನ ಫೋಟೋವನ್ನು ಕೂಡ ಬಿಡುಗಡೆ ಮಾಡಿದ್ದರು. ಆ ಫೋಟೋ ನೋಡಿದ ಕೆಲವರು ಕೂಪರ್ನನ್ನು ತಾವು ನೋಡಿದ್ದಾಗಿ ಹೇಳಿದ್ದರು. ಅವರು ಕೊಟ್ಟ ಸುಳಿವಿನ ಆಧಾರದಲ್ಲಿ ಹುಡುಕುತ್ತ ಹೊರಟಾಗ ಕೂಪರ್ ಲೀಪ್ಟ್ ತನ್ನ ಹಳೇ ಮಾಲೀಕನ ಮನೆಯ ಸಮೀಪವೇ ಸಿಕ್ಕಿದ್ದಾನೆ. ಅದೆಷ್ಟೋ ರಸ್ತೆಗಳು, ಹೊಲ-ಗದ್ದೆಗಳನ್ನು ದಾಟಿ ತನ್ನ ಮೂಲಮನೆಯ ಬಳಿಯೇ ನಿಂತಿದ್ದ. ಈ ಸ್ಟೋರಿ ವೈರಲ್ ಆಗುತ್ತಿದ್ದಂತೆ, ಅನೇಕಾನೇಕರು ಕೂಪರ್ನನ್ನು ಹೊಗಳಿದ್ದಾರೆ. ಸದ್ಯ ಕೂಪರ್ ತನ್ನ ಹೊಸಮನೆಯಲ್ಲೇ ಇದ್ದು, ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುತ್ತಿದ್ದಾನೆ.