ಲಂಡನ್: ಬ್ರಿಟನ್ ಉಪ ಪ್ರಧಾನಿ ಹಾಗೂ ಕಾನೂನು ಸಚಿವ ಡೊಮಿನಿಕ್ ರಾಬ್ (Dominic Raab) ಶುಕ್ರವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಸಹೋದ್ಯೋಗಿಗಳಿಗೆ ಬೆದರಿಕೆಯೊಡ್ಡಿದ ಪ್ರಕರಣದ ಸ್ವತಂತ್ರ ತನಿಖೆ ಬೆನ್ನಲ್ಲೇ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಪ್ರಧಾನಿ ರಿಷಿ ಸುನಕ್ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರವನ್ನು ರಾಬ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಸ್ವತಂತ್ರ ತನಿಖೆಯು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಆದರೂ ಸರ್ಕಾರದ ಬೆಂಬಲಕ್ಕೆ ನಿಲ್ಲುವೆ ಎಂದು ಅವರು ಹೇಳಿಕೊಂಡಿದ್ದಾರೆ.
ತನಿಖೆ ನಡೆಸುವಂತೆ ನಾನೇ ಹೇಳಿದ್ದೆ. ತಪ್ಪು ಮಾಡಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದೆ. ಈಗ ಸ್ವತಂತ್ರ ತನಿಖೆಯು ತನ್ನ ವರದಿಯನ್ನು ಸಲ್ಲಿಸಿದೆ. ಮಾತು ಕೊಟ್ಟಂತೆ ರಾಜೀನಾಮೆ ನೀಡುತ್ತಿದ್ದೇನೆ. ಮಾತುಗಳನ್ನು ಉಳಿಸಿಕೊಳ್ಳುವುದು ಮುಖ್ಯ ಎಂದು ರಾಬ್ ಹೇಳಿದ್ದಾರೆ.
ಇದನ್ನೂ ಓದಿ: Infosys : ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿಗೆ ಇನ್ಫೋಸಿಸ್‌ನಿಂದ 68.17 ಕೋಟಿ ರೂ. ಡಿವಿಡೆಂಡ್ ಆದಾಯ
ಈ ಸ್ವತಂತ್ರ ತನಿಖೆಯ ಕೆಟ್ಟ ಸಂಪ್ರದಾಯಕ್ಕೆ ದಾರಿ ಮಾಡಿಕೊಟ್ಟಿದೆ. ಸಚಿವರ ವಿರುದ್ಧ ಸುಳ್ಳು ದೂರುಗಳಿಗೆ ಇದು ಪ್ರೋತ್ಸಾಹಿಸಲಿದೆ. ಸರ್ಕಾರದ ಪರವಾಗಿ ಅಂದರೆ ಅಂತಿಮವಾಗಿ ಬ್ರಿಟಿಷ್‌ರಿಗೆ ಒಳ್ಳೆಯವಾಗುವ ರೀತಿಯಲ್ಲಿ ಕೆಲಸ ಮಾಡುವುದಕ್ಕೆ ಅಡ್ಡಿಯುಂಟು ಮಾಡಲಿದೆ ಎಂದು ರಾಬ್ ಹೇಳಿದ್ದಾರೆ. ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾದ ನಂತರ ರಾಜೀನಾಮೆ ನೀಡುತ್ತಿರುವ ಮೂರನೇ ಸಚಿವ ರಾಬ್ ಆಗಿದ್ದಾರೆ.