2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹೊತ್ತಲ್ಲಿ, ನೀಲಿ ಚಿತ್ರತಾರೆಗೆ ಗುಟ್ಟಾಗಿ ಹಣ ಸಂದಾಯ ಮಾಡಿದ್ದ ಆರೋಪದಡಿ ಮಂಗಳವಾರ ಬಂಧನವಾಗಿದ್ದ ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕೆಲವೇ ಹೊತ್ತಲ್ಲಿ ಬಿಡುಗಡೆಯಾದರು. ಲೋವರ್ ಮ್ಯಾನ್‌ಹ್ಯಾಟನ್‌ನಲ್ಲಿರುವ ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಟ್ರಂಪ್ ವಿಚಾರಣೆ ನಡೆದಿತ್ತು. ಅವರ ವಿಚಾರಣೆ ಸಂದರ್ಭದಲ್ಲಿ ಕೋರ್ಟ್ ಸುತ್ತ, ಒಳಗೆ ಎಲ್ಲ ಕಡೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಹೀಗೆ ಒಂದು ಕ್ರಿಮಿನಲ್ ಕೇಸ್ಗೆ ಗುರಿಯಾಗಿ, ವಿಚಾರಣೆ ಎದುರಿಸಿದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂದಬ ಕುಖ್ಯಾತಿ ಟ್ರಂಪ್ರದ್ದರು.
ಡೊನಾಲ್ಡ್ ಟ್ರಂಪ್ ಅವರು 2006ರಲ್ಲಿ ಸ್ಟಾರ್ಮಿ ಡೇನಿಯಲ್ಸ್ ಎಂಬ ನೀಲಿ ಚಿತ್ರತಾರೆಯನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ನಂತರ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದರು. ಆದರೆ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು, ತಾವು ಸ್ಟಾರ್ಮಿ ಜತೆ ಹೊಂದಿದ್ದ ಸಂಬಂಧ ಬಹಿರಂಗವಾಗದೆ ಇರಲಿ ಎಂಬ ಕಾರಣಕ್ಕೆ ಅವರಿಗೆ ಹಣ ನೀಡಿದ್ದರು. ವಿವಿಧ ಆಯಾಮಗಳ ತನಿಖೆಯ ಬಳಿಕ, ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿ ಟ್ರಂಪ್ ವಿರುದ್ಧ ಕ್ರಿಮಿನಲ್ ದೋಷಾರೋಪ ಹೊರೆಸಿತ್ತು. ಇದೆಲ್ಲ ನನ್ನ ವಿರುದ್ಧದ ರಾಜಕೀಯ ಹುನ್ನಾರ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ತನ್ಮಧ್ಯೆ ಏಪ್ರಿಲ್ 4ಕ್ಕೆ ವಿಚಾರಣೆಗೆ ಹಾಜರಾಗಿದ್ದರು.
ಇದನ್ನೂ ಓದಿ: Donald Trump: ನೀಲಿ ಚಿತ್ರತಾರೆಗೆ ಹಣ ಪಾವತಿ; ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಕ್ರಿಮಿನಲ್ ಆರೋಪ
ನ್ಯಾಯಾಲಯಕ್ಕೆ ಬರುತ್ತಿದ್ದಂತೆ ಅವರನ್ನು ಪೊಲೀಸರು ಬಂಧಿಸಿದರು. ಡೊನಾಲ್ಡ್ ಟ್ರಂಪ್ ಬೆಂಬಲಿಗರು ದೊಡ್ಡಮಟ್ಟದ ಪ್ರತಿಭಟನಾ ಮೆರವಣಿಗೆಯನ್ನೂ ಹಮ್ಮಿಕೊಂಡಿದ್ದರು. ಸುಮಾರು 1 ತಾಸು ವಿಚಾರಣೆ ನಡೆಸಿದ ಬಳಿಕ ಡೊನಾಲ್ಡ್ ಟ್ರಂಪ್ರನ್ನು ಬಿಡುಗಡೆ ಮಾಡಲಾಗಿದೆ. ಅವರು ಕೋರ್ಟ್ನಿಂದ ನೇರವಾಗಿ ತಮ್ಮ ಕಾರು ಹತ್ತಿದರು. ಅಲ್ಲಿಂದ ಏರ್ಪೋರ್ಟ್ಗೆ ಹೋಗಿ, ಮತ್ತಲ್ಲಿಂದ ಲಾ ಗಾರ್ಡಿಯಾ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿದ್ದ ತಮ್ಮ ಖಾಸಗಿ ಜೆಟ್ ಹತ್ತಿ ಫ್ಲೋರಿಡಾದ ಪಾಮ್ ಬೀಚ್‌ನಲ್ಲಿರುವ ತಮ್ಮ ಮನೆ ಮಾರ್-ಎ-ಲಾಗೊಗೆ ತೆರಳಿದ್ದಾರೆ. ಮೊದಲ ಹಂತದ ವಿಚಾರಣೆಯಲ್ಲಿ ಅವರ ಮೇಲಿನ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಟ್ರಂಪ್ರನ್ನು ಬಿಟ್ಟುಕಳಿಸಲಾಗಿದೆ.