Site icon Vistara News

Donald Trump Arrest : ಚುನಾವಣಾ ಅಕ್ರಮ ಆರೋಪ; ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಂಧನ

Donald trump

ಜಾರ್ಜಿಯಾ: 2020ರ ಚುನಾವಣಾ ಫಲಿತಾಂಶಗಳನ್ನು (American Election results) ಬುಡಮೇಲು ಮಾಡಲು ಯತ್ನಿಸಿದ ಗಂಭೀರ ಆರೋಪ ಎದುರಿಸುತ್ತಿರುವ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (77) (Donald trump Arrest) ಅವರನ್ನು ಬಂಧಿಸಲಾಗಿದೆ. ಟ್ರಂಪ್‌ ಅವರ ಮೇಲೆ ಒಟ್ಟು 12 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇದೀಗ ಅವರನ್ನು ಅಟ್ಲಾಂಟದ ಫುಲ್ಟನ್‌ ಕೌಂಟಿ ಜೈಲಿನಲ್ಲಿ (Fulton jail in Atlanta) ಇರಿಸಲಾಗಿದೆ.

ಈ ಪ್ರಕರಣದ ಇತರ ಆರೋಪಿಗಳು ಈಗಾಗಲೇ ಕೋರ್ಟ್‌ಗೆ ಹಾಜರಾಗಿ ಶರಣಾಗತರಾಗಿದ್ದಾರೆ. ಹೀಗಾಗಿ ಡೊನಾಲ್ಡ್‌ ಟ್ರಂಪ್‌ ಅವರ ಬಂಧನವೂ ಖಚಿತವಾಗಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರು ಹಲವು ಕ್ರಿಮಿನಲ್‌ ಮೊಕದ್ದಮೆಗಳನ್ನು ಎದುರಿಸುತ್ತಾ ಹಲವು ಬಾರಿ ಕೋರ್ಟ್‌ಗೆ ಹಾಜರಾಗಿದ್ದರು. ಇದೀಗ ಅಂತಿಮವಾಗಿ ಅವರು ಜೈಲುಪಾಲಾದಂತಾಗಿದೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಸ್ಪರ್ಧಿಸುತ್ತಿದ್ದಾರೆ. ಅದರ ನಡುವೆಯೇ ಚುನಾವಣಾ ಅಕ್ರಮದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಅಷ್ಟಾದರೂ ಅವರು ಸ್ಪರ್ಧೆ ನಡೆಸಲು ಕಾನೂನಿನ ಅಡ್ಡಿಯೇನೂ ಎದುರಾಗುವುದಿಲ್ಲ ಎಂದು ಕಾನೂನು ತಜ್ಞರು ತಿಳಿಸಿದ್ದಾರೆ.

ಟ್ರಂಪ್‌ ಕೂಡಾ ಶರಣಾಗತಿ?

ಈ ಪ್ರಕರಣದಲ್ಲಿ ತನ್ನ ಬಂಧನ ಖಚಿತ ಎಂದು ತಿಳಿಯುತ್ತಲೇ ಡೊನಾಲ್ಡ್‌ ಟ್ರಂಪ್‌ ಅವರು ಕೋರ್ಟ್‌ಗೆ ಶರಣಾದರು ಎಂದು ತಿಳಿದುಬಂದಿದೆ. ‘ನಾನು ಗುರುವಾರ ಜಾರ್ಜಿಯಾದ ಅಟ್ಲಾಂಟಾಗೆ ಹೋಗುತ್ತೇನೆ’ ಎಂದು ಡೊನಾಲ್ಡ್ ಟ್ರಂಪ್‌ ಹೇಳಿಕೊಂಡಿದ್ದರು. ಹೀಗಾಗಿ ಕೌಂಟಿ ಜೈಲಿನ ಸುತ್ತಲೂ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು.

ಏನಿದು ಟ್ರಂಪ್‌ ಬಂಧನಕ್ಕೆ ಕಾರಣವಾದ ಪ್ರಕರಣ?

2020ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆ ಸಂದರ್ಭ ಜಾರ್ಜಿಯಾ ರಾಜ್ಯದ ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ. ಫಲಿತಾಂಶವನ್ನು ಉದ್ದೇಶಪೂರ್ವಕವಾಗಿ ಬದಲಿಸಲು ಪಿತೂರಿ ನಡೆಸಲಾಗಿದೆ ಎಂದು ಟ್ರಂಪ್‌ ಸೇರಿ 18 ಜನರ ವಿರುದ್ಧ ಫುಲ್ಟನ್ ಕೌಂಟಿ ಕೋರ್ಟ್‌ನಲ್ಲಿ ಜಾರ್ಜ್‌ಶೀಟ್‌ ಸಲ್ಲಿಸಲಾಗಿತ್ತು.

ಇದೀಗ ಟ್ರಂಪ್‌ ಜೈಲು ಸೇರಿರುವುದರಿಂದ ಅವರ ಚುನಾವಣೆ ಸ್ಪರ್ಧೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿವೆ. ಇದೀಗ ಅವರು ಅವರ ಪಕ್ಷದಲ್ಲಿ ಮುಂಚೂಣಿ ಅಭ್ಯರ್ಥಿಯಾಗಿದ್ದಾರೆ. ಹಾಗಂತ ಜೈಲಿಗೆ ಹೋಗಿರುವ ಕಾರಣ ಕಾನೂನಾತ್ಮಕವಾಗಿ ಸ್ಪರ್ಧೆಗೆ ಅವಕಾಶವಿದೆಯೇ ಎಂಬ ಪ್ರಶ್ನೆಗೆ ಹೌದು ಎಂಬ ಉತ್ತರ ಸಿಗುತ್ತದೆ. ಆದರೆ, ಅಮೆರಿಕದಲ್ಲಿ ನೈತಿಕತೆ ವಿಚಾರಕ್ಕೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಡುವುದರಿಂದ ಅವರಿಗೆ ಸ್ಪರ್ಧಿಸಲು ಅವಕಾಶ ಸಿಗುತ್ತದೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಹೀಗಾಗಿ 2024ರ ಅಧ್ಯಕ್ಷೀಯ ಚುನಾವಣೆ ವಿಚಾರದಲ್ಲಿ ಭಾರಿ ಕುತೂಹಲಗಳು ಮೂಡುವಂತಾಗಿದೆ.

ಅಮೆರಿಕದ ಇತಿಹಾಸದಲ್ಲಿ ಮಾಜಿ ಅಧ್ಯಕ್ಷರೊಬ್ಬರು ಚುನಾವಣಾ ಅಕ್ರಮದಲ್ಲಿ ಬಂಧನವಾಗುತ್ತಿರುವುದು ಇದು ಮೊದಲು ಎನ್ನಲಾಗಿದೆ.

Exit mobile version