ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ (US Presidential Election)ಗೆ ಇನ್ನು ಕೆಲವೇ ದಿನಗಳಿದ್ದು, ಪ್ರಚಾರದ ಕಾವು ಏರತೊಡಗಿದೆ. ಜತೆಗೆ ಜುಲೈ 13ರಂದು ಪ್ರಚಾರದಲ್ಲಿ ಭಾಗಿಯಾಗಿದ್ದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮೇಲೆ ಗುಂಡಿನ ದಾಳಿಯೂ ನಡೆದಿದೆ. ಅವರು ಕೂದಲೆಳೆ ಅಂತರದಿಂದ ಪಾರಾಗಿದ್ದು, ಈ ಬಗ್ಗೆ ಜಗತ್ತಿನಾದ್ಯಂತ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಡೊನಾಲ್ಡ್ ಟ್ರಂಪ್ ಹತ್ಯೆ ಯತ್ನದ ಬಗೆಗಿನ ಮಾಹಿತಿಯನ್ನು ಸರ್ಚ್ ಎಂಜಿನ್ ದೈತ್ಯ ಗೂಗಲ್ (Google) ಮರೆ ಮಾಡಿದೆ ಎನ್ನಲಾಗಿದೆ. ಈ ಬಗ್ಗೆ ವ್ಯಾಪಕ ಟೀಕೆ ಕೇಳಿ ಬಂದಿದೆ.
ಗೂಗಲ್‌ನಲ್ಲಿ ʼಹತ್ಯೆ ಪ್ರಯತ್ನʼ (the assassination attempt of) ಎಂದು ಟೈಪ್ ಮಾಡಿದಾಗ ಅಮೆರಿಕ ಪೆನ್ಸಿಲ್ವೇನಿಯಾದ ಬಟ್ಲರ್ನ್‌ನಲ್ಲಿ ಜುಲೈ 13ರಂದು ಟ್ರಂಪ್ ವಿರುದ್ಧ ನಡೆದ ದಾಳಿಗೆ ಸಂಬಂಧಿಸಿದ ಯಾವುದೇ ಸಲಹೆಗಳನ್ನು ನೀಡುತ್ತಿಲ್ಲ ಎಂದು ಹಲವರು ದೂರಿದ್ದಾರೆ. ಸುಂದರ್ ಪಿಚೈ ನೇತೃತ್ವದ ಟೆಕ್ ಕಂಪನಿ ಉದ್ದೇಶಪೂರ್ವಕವಾಗಿ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು ರಿಪಬ್ಲಿಕನ್ ಪಕ್ಷದವರು ಆರೋಪಿಸಿದ್ದಾರೆ.
Big Tech is trying to interfere in the election AGAIN to help Kamala Harris. We all know this is intentional election interference from Google. Truly despicable. https://t.co/gWDbFGaHI7
— Donald Trump Jr. (@DonaldJTrumpJr) July 28, 2024
ಬೃಹತ್ ಟೆಕ್ ಕಂಪನಿ ಗೂಗಲ್ ಕಮಲಾ ಹ್ಯಾರಿಸ್‌ಗೆ ಸಹಾಯ ಮಾಡಲು ಚುನಾವಣಾ ಹಸ್ತಕ್ಷೇಪ ಮಾಡುತ್ತಿದೆ ಎಂದು ಅನೇಕರು ಆರೋಪಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. “ಟೆಕ್ ಕಂಪನಿ ಕಮಲಾ ಹ್ಯಾರಿಸ್ ಅವರಿಗೆ ಸಹಾಯ ಮಾಡಲು ಮತ್ತೆ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸುತ್ತಿದೆ. ಇದು ಗೂಗಲ್‌ನ ಉದ್ದೇಶಪೂರ್ವಕ ಚುನಾವಣಾ ಹಸ್ತಕ್ಷೇಪ ಎಂದು ನಮಗೆಲ್ಲರಿಗೂ ತಿಳಿದಿದೆ. ನಿಜವಾಗಿಯೂ ಇದು ಖಂಡನೀಯʼʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫಾಕ್ಸ್ ನ್ಯೂಸ್ ಜಾಗತಿಕ ಬಳಕೆದಾರ ಅನೇಕ ಸ್ಕ್ರೀನ್‌ಶಾಟ್‌ಗಳನ್ನು ಪರಿಶೀಲಿಸಿದೆ. ಗೂಗಲ್‌ನ ಹುಡುಕಾಟದ ಸಲಹೆಗಳು (Google’s search suggestions) ಡೊನಾಲ್ಡ್ ಟ್ರಂಪ್ ಅವರ ಮೇಲೆ ನಡೆದ ಇತ್ತೀಚಿನ ದಾಳಿಯ ಬದಲು ರೊನಾಲ್ಡ್ ರೇಗನ್ ಅವರ ವಿಫಲ ಹತ್ಯೆ ಪ್ರಯತ್ನ, ಆರ್ಚ್ಡ್ಯೂಕ್ ಫರ್ಡಿನಾಂಡ್ ಹತ್ಯೆ, ಬಾಬ್ ಮಾರ್ಲಿಯ ಶೂಟಿಂಗ್ ಮತ್ತು ಮಾಜಿ ಅಧ್ಯಕ್ಷ ಜೆರಾಲ್ಡ್ ಫೋರ್ಡ್ ವಿರುದ್ಧದ ವಿಫಲ ಸಂಚಿನಂತಹ ವಿವಿಧ ಘಟನೆಗಳನ್ನು ತೋರಿಸುತ್ತದೆ. ಅಮೆರಿಕ ಉಪಾಧ್ಯಕ್ಷೆ, ಭಾರತ ಮೂಲದ ಕಮಲಾ ಹ್ಯಾರಿಸ್ (Kamala Harris) ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಟ್ರಂಪ್ ವಿರುದ್ದ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ. ಇದೇ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಜೂನಿಯರ್ ಗೂಗಲ್ ವಿರುದ್ಧ ಆರೋಪ ಹೊರಿಸಿದ್ದಾರೆ.
ಇದನ್ನೂ ಓದಿ: Kamala Harris: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಕಮಲಾ ಹ್ಯಾರಿಸ್ ಪರ ನಿಂತ ಬರಾಕ್ ಒಬಾಮಾ
ಗೂಗಲ್ ಪ್ರತಿಕ್ರಿಯೆ
ತನ್ನ ವಿರುದ್ಧ ಕೇಳಿ ಬಂದ ಆರೋಪಕ್ಕೆ ಗೂಗಲ್ ಪ್ರತಿಕ್ರಿಯಸಿ, ಸರ್ಚ್ ವಿಚಾರರಕ್ಕೆ ಸಂಬಂಧಿಸಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ತಿಳಿಸಿದೆ. ರಾಜಕೀಯ ಹಿಂಸಾಚಾರಕ್ಕೆ ಸಂಬಂಧಿಸಿದ ಸಲಹೆಗಳನ್ನು ನಿಯಂತ್ರಿಸಲು ತಮ್ಮ ವ್ಯವಸ್ಥೆಗಳು ಸುರಕ್ಷತಾ ಕ್ರಮಗಳನ್ನು ಹೊಂದಿವೆ ಎಂದಿದೆ. ಆದಾಗ್ಯೂ, ಜಾನ್ ಎಫ್ ಕೆನಡಿ, ಅಬ್ರಹಾಂ ಲಿಂಕನ್, ರೊನಾಲ್ಡ್ ರೇಗನ್ ಮತ್ತು ಟೆಡ್ಡಿ ರೂಸ್ವೆಲ್ಟ್ ಅವರಂತಹ ಇತರ ರಾಜಕಾರಣಿಗಳ ಮೇಲೆ ಹತ್ಯೆ ಪ್ರಯತ್ನಗಳನ್ನು ಹುಡುಕುವಾಗ ಈ ನೀತಿ ಯಾಕೆ ಅನ್ವಯಿಸುವುದಿಲ್ಲ ಎಂದು ಬಳಕೆದಾರರು ಗಮನ ಸೆಳೆದಿದ್ದಾರೆ.