2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ತಾನು ಅಭ್ಯರ್ಥಿ ಎಂದು ಘೋಷಿಸಿಕೊಂಡು, ಪ್ರಚಾರದ ಸಿದ್ಧತೆಯಲ್ಲಿರುವ ಅಲ್ಲಿನ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump)ಗೆ ಒಂದರ ಬೆನ್ನಿಗೆ ಒಂದಂತೆ ಸಂಕಷ್ಟ ಎದುರಾಗುತ್ತಿದೆ. ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ಗೆ 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗುಟ್ಟಾಗಿ ಹಣ ಸಂದಾಯ ಮಾಡಿದ ಆರೋಪದಡಿ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ವಿಚಾರಣೆ ಎದುರಿಸಿದ್ದರು. ಆಕೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿ, ಬಳಿಕ 2016ರಲ್ಲಿ ಅಧ್ಯಕ್ಷೀಯ ಚುನಾವಣೆ ವೇಳೆ ಆಕೆ ಈ ಬಗ್ಗೆ ಬಾಯ್ಬಿಡದೆ ಇರಲಿ ಎಂಬ ಕಾರಣಕ್ಕೆ ಹಣ ಕೊಟ್ಟಿದ್ದರು ಎಂಬುದು ಆರೋಪವಾಗಿತ್ತು. ಆದರೆ ಟ್ರಂಪ್ ತಾನು ಅವಳೊಂದಿಗೆ ಸೆಕ್ಸ್ ನಡೆಸಿಯೇ ಇಲ್ಲ ಎಂದೇ ವಾದಿಸಿದ್ದಾರೆ.
ಇಷ್ಟರ ಮಧ್ಯೆ ಡೊನಾಲ್ಡ್ ಟ್ರಂಪ್ಗೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅಮೆರಿಕದ ಲೇಖಕಿಯೊಬ್ಬರು ಟ್ರಂಪ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾರೆ. 30ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ನನ್ನ ಮೇಲೆ ರೇಪ್ ಮಾಡಿದ್ದರು ಎಂದು ಬರಹಗಾರ್ತಿ ಕ್ಯಾರೊಲ್ (79) ಎಂಬುವರು ಯುಎಸ್ನ ಮ್ಯಾನಹಟ್ಟನ್ನಲ್ಲಿರುವ ಸಿವಿಲ್ ಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದು, ಅದರ ವಿಚಾರಣೆ ನಡೆಯುತ್ತಿದೆ. ಟ್ರಂಪ್ ಅತ್ಯಾಚಾರ ಎಸಗಿರುವ ಬಗ್ಗೆ ಕೋರ್ಟ್ನಲ್ಲಿ ವಿವರಣೆ ನೀಡಿದ ಕ್ಯಾರೋಲ್ ‘ಟ್ರಂಪ್ ನನ್ನ ಮೇಲೆ ಅತ್ಯಾಚಾರ ಮಾಡಿದ್ದರು. ಈ ಬಗ್ಗೆ ನಾನು ಬರೆದಿದ್ದೆ. ಆಗ ಡೊನಾಲ್ಡ್ ಟ್ರಂಪ್ ಅದನ್ನು ಒಪ್ಪಲಿಲ್ಲ. ನಾನು ರೇಪ್ ಮಾಡಿಯೇ ಇಲ್ಲ ಎಂದು ಅವರು ಹೇಳಿದರು. ನನ್ನ ಗೌರವವನ್ನೇ ನಾಶ ಮಾಡಿದರು. ಹಾಳಾದ ನನ್ನ ಜೀವನವನ್ನು ವಾಪಸ್ ಪಡೆಯುವುದಕ್ಕೋಸ್ಕರ ನಾನಿಲ್ಲಿ (ಕೋರ್ಟ್ಗೆ) ಬಂದಿದ್ದೇನೆ’ ಎಂದು ಹೇಳಿದ್ದಾರೆ.
‘1995-1996ರ ನಡುವೆ, ಮ್ಯಾನ್ಹಟ್ಟನ್ನಲ್ಲಿರುವ ಬರ್ಗ್‌ಡಾರ್ಫ್ ಗುಡ್‌ಮ್ಯಾನ್ ಡಿಪಾರ್ಟ್ಮೆಂಟ್ ಸ್ಟೋರ್ನ (Bergdorf Goodman Departmen) ಡೆಸ್ಸಿಂಗ್ ರೂಮ್ನಲ್ಲಿ ಟ್ರಂಪ್ ನನ್ನ ಮೇಲೆ ರೇಪ್ ಮಾಡಿದರು. ನಾನು ಅಂದು ತಪ್ಪಿಸಿಕೊಂಡು ಓಡಲು ಪ್ರಯತ್ನಪಟ್ಟೆ. ಅದು ವಿಫಲವಾಯಿತು. ಅದೇ ವರ್ಷ ನಾನು ಈ ವಿಷಯವನ್ನು ಬಹಿರಂಗಗೊಳಿಸಿದೆ. ಆದರೆ ಡೊನಾಲ್ಡ್ ಟ್ರಂಪ್ ಅದನ್ನು ನಿರಾಕರಿಸಿದರು. ಸುಳ್ಳು ಹೇಳಿದರು’ ಎಂದು ಕೋರ್ಟ್ನಲ್ಲಿ ಕ್ಯಾರೊಲ್ ಹೇಳಿಕೊಂಡಿದ್ದಾರೆ. ಈ ಲೇಖಕಿಯ ಮನವಿ ಕೇಳಲು ಸಿವಿಲ್ ಕೋರ್ಟ್ನಲ್ಲಿ ಆರು ಪುರುಷರು, ಮೂವರು ಮಹಿಳಾ ನ್ಯಾಯಾಧೀಶರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: Donald Trump: ನೀಲಿ ಚಿತ್ರ ತಾರೆಗೆ ಹಣ ನೀಡಿದ ಕೇಸ್; ಬಂಧನವಾಗಿ ಕೆಲವೇ ಕ್ಷಣದಲ್ಲಿ ಬಿಡುಗಡೆಯಾದ ಡೊನಾಲ್ಡ್ ಟ್ರಂಪ್
ನನ್ನನ್ನು ಅತ್ಯಾಚಾರ ಮಾಡಿದ್ದಲ್ಲದೆ, ನಾನು ಸುಖಾಸುಮ್ಮನೆ ಸುಳ್ಳು ಆರೋಪ ಮಾಡುತ್ತಿದ್ದೇನೆ ಎಂದು ಟ್ರಂಪ್ ವ್ಯಂಗ್ಯ ಮಾಡಿದ್ದಾರೆ. ತಮ್ಮ ಟ್ರುತ್ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ಅವರು ಹೀಗೆ ಬರೆದುಕೊಂಡಿದ್ದಾರೆ. ಆದರೆ ನಾನು ಇಂಥ ವಿಚಾರದಲ್ಲೆಲ್ಲ ಸುಳ್ಳು ಹೇಳುವ ಮಹಿಳೆಯಲ್ಲ, ನನಗೆ ನಾನು ಆತ್ಮವಂಚನೆ ಮಾಡಿಕೊಳ್ಳುವವಳೂ ಅಲ್ಲ ಎಂದು ಕ್ಯಾರೊಲ್ ಹೇಳಿದ್ದಾರೆ. ಈ ಆರೋಪ ಸಾಬೀತಾದರೆ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಡೊನಾಲ್ಡ್ ಟ್ರಂಪ್ಗೆ ತೊಡಕಾಗುವುದು ನಿಶ್ಚಿತವಾಗಲಿದೆ.