ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಬಹುತೇಕ ಸಂದರ್ಭಗಳಲ್ಲಿ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಆದರೀಗ, ಅವರು ಬಂಧನದ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ. ಅದರಲ್ಲೂ, “ಮಂಗಳವಾರ ನನ್ನನ್ನು ಬಂಧಿಸಲಾಗುತ್ತದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್ ಅವರೇ ಮಾಹಿತಿ ನೀಡಿದ್ದಾರೆ. ಹಾಗೆಯೇ, ದೇಶಾದ್ಯಂತ ಪ್ರತಿಭಟನೆ ನಡೆಸುವಂತೆ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ನ್ಯೂಯಾರ್ಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸುವ ಸಾಧ್ಯತೆ ಇದೆ. ಟ್ರಂಪ್ ಅವರು 2016ರ ಅಧ್ಯಕ್ಷೀಯ ಚುನಾವಣೆಗೆ ಮುಂಚೆ ಅಡಲ್ಟ್ ಫಿಲಂ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್ ಅವರಿಗೆ 1.3 ಲಕ್ಷ ಡಾಲರ್‌ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆದಿದ್ದು, 2019ರಲ್ಲಿಯೇ ತನಿಖೆ ಮುಗಿದಿದೆ.
ಟ್ರಂಪ್ ಶೇರ್ ಮಾಡಿದ ಪೋಸ್ಟ್ ಇಲ್ಲಿದೆ
ಆದಾಗ್ಯೂ, ಅಪಾರ ಪ್ರಮಾಣದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್‌ನ ಮ್ಯಾನ್ಹಟನ್ ಜಿಲ್ಲಾ ಅಟಾರ್ನಿ ಅಲ್ವಿನ್ ಬ್ರ್ಯಾಗ್ ಅವರ ತಂಡ ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ. ಮುಂದಿನ ವಾರ ಪ್ರಕರಣದ ವಿಚಾರಣೆ ನಡೆದು, ಡೊನಾಲ್ಡ್ ಟ್ರಂಪ್ ಅವರ ಬಂಧನಕ್ಕೆ ಆದೇಶಿಸುವ ಸಾಧ್ಯತೆ ಇದೆ. ಇದನ್ನು ಮೊದಲೇ ಅರಿತ ಟ್ರಂಪ್, ನನ್ನನ್ನು ಮುಂದಿನ ಮಂಗಳವಾರ ಬಂಧಿಸಲಾಗುತ್ತದೆ ಎಂದು ಹೇಳಿದ್ದಾರೆ.
ಬಂಧನದ ಕುರಿತು ಟ್ರಂಪ್ ಅವರು ತಮ್ಮದೇ ಸ್ವಂತ ಸಾಮಾಜಿಕ ಜಾಲತಾಣವಾದ ಟ್ರುತ್ ಸೋಷಿಯಲ್ (Truth Social)ನಲ್ಲಿ ಮಾಹಿತಿ ನೀಡಿದ್ದಾರೆ. “ರಿಪಬ್ಲಿಕನ್ ಪಕ್ಷದ ಮುಂಚೂಣಿ ಅಭ್ಯರ್ಥಿ, ಅಮೆರಿಕದ ಮಾಜಿ ಅಧ್ಯಕ್ಷನನ್ನು ಮುಂದಿನ ಮಂಗಳವಾರ ಬಂಧಿಸಲಾಗುತ್ತಿದೆ. ಪ್ರತಿಭಟನೆ ನಡೆಸಿ, ನಿಮ್ಮ ದೇಶವನ್ನು ನೀವು ಕಾಪಾಡಿಕೊಳ್ಳಿ” ಎಂಬುದಾಗಿ ಅವರು ಕರೆ ನೀಡಿದ್ದಾರೆ. ಆದಾಗ್ಯೂ, ಬಂಧನದ ಕುರಿತು ಟ್ರಂಪ್ ಹೆಚ್ಚಿನ ಮಾಹಿತಿ ನೀಡಿಲ್ಲ.
ಟ್ರಂಪ್ ಅವರ ಮತ್ತೊಂದು ಪೋಸ್ಟ್
ಆಡಳಿತಾರೂಢ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, “ನಮ್ಮ ದೇಶವು ಮೂರನೇ ಮಹಾಯುದ್ಧವನ್ನು ಕಾಣುತ್ತಿದೆ. ಅಮೆರಿಕದ ಕನಸೇ ಸತ್ತುಹೋಗಿದೆ. ಅರಾಜಕೀಯ ಮನಸ್ಥಿತಿ ಹೊಂದಿರುವ ಎಡಪಂಥೀಯರು (ಆಡಳಿತಾರೂಢ ಸರ್ಕಾರ) ಚುನಾವಣೆಯಲ್ಲಿ ಮೋಸ ಮಾಡಿದ್ದಲ್ಲದೆ, ಈಗ ದೇಶಪ್ರೇಮಿಗಳನ್ನು ಬಂಧಿಸುತ್ತಿದ್ದಾರೆ. ಅಪರಾಧಿಗಳು ಎಂಬಂತೆ ದೇಶಪ್ರೇಮಿಗಳ ವಿರುದ್ಧ ದೌರ್ಜನ್ಯ ಎಸಗುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯೂಯಾರ್ಕ್‌ನ ಮ್ಯಾನ್ಹಟನ್ ಜಿಲ್ಲಾ ಅಟಾರ್ನಿ ಅಲ್ವಿನ್ ಬ್ರ್ಯಾಗ್ ಅವರನ್ನು ಭ್ರಷ್ಟರು ಎಂದು ಜರಿದಿದ್ದಾರೆ. ಮುಂದಿನ ವರ್ಷ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಟ್ರಂಪ್ ಅವರು ನಾನೇ ಪಕ್ಷದ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಿದ್ದಾರೆ.
ಇದನ್ನೂ ಓದಿ: Donald Trump: ಎರಡು ವರ್ಷಗಳ ನಂತರ ವಾಪಸ್ ಫೇಸ್ಬುಕ್ಗೆ ಬಂದ ಡೊನಾಲ್ಡ್ ಟ್ರಂಪ್; ’ಐ ಆ್ಯಮ್ ಬ್ಯಾಕ್’ ಪೋಸ್ಟ್