ವಾಷಿಂಗ್ಟನ್: ಮಹತ್ವದ ಬೆಳವಣಿಗೆಯೊಂದರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ಭಾರೀ ಸಂಕಷ್ಟ ಎದುರಾಗಿದೆ. ನ್ಯಾಯಾರ್ಕ್‌ನ ನ್ಯಾಯಾಲಯ ಡೊನಾಲ್ಡ್ ಟ್ರಂಪ್ ಅವರು ʼಹಷ್ ಮನಿʼ (Hush Money) ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ. ಇದರೊಂದಿಗೆ ನೀಲಿಚಿತ್ರಗಳ ತಾರೆ ಸ್ಟಾರ್ಮಿ ಡೇನಿಯಲ್ಸ್ (Stormy Daniels) ಜತೆ ಲೈಂಗಿಕ ಸಂಪರ್ಕ ಬೆಳೆಸಿ, ಆಕೆಯ ಬಾಯಿ ಮುಚ್ಚಿಸಲು ಹಣ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಿದ 77 ವರ್ಷದ ಟ್ರಂಪ್ 34 ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಮತ್ತೊಮ್ಮೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಟ್ರಂಪ್‌ಗೆ ಇದು ಬಹು ದೊಡ್ಡ ಹಿನ್ನಡೆ ಎಂದೇ ವಿಶ್ಲೇಷಿಲಾಗುತ್ತಿದೆ. ನವೆಂಬರ್‌ನಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ತೀರ್ಪನ್ನು ʼಅವಮಾನʼ ಮತ್ತು ʼಮೋಸ” ಎಂದು ಕರೆದಿದ್ದಾರೆ. ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾರರಿಂದ ʼನಿಜವಾದ ತೀರ್ಪುʼ ಹೊರ ಬರಲಿದೆ ಎಂದು ಹೇಳಿದ್ದಾರೆ. ಅದಾಗ್ಯೂ ಈ ಪ್ರಕರಣದಲ್ಲಿ ಟ್ರಂಪ್ ಜೈಲು ಸೇರುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ. ವ್ಯವಹಾರ ದಾಖಲೆಗಳನ್ನು ತಿರುಚಿದ್ದಕ್ಕಾಗಿ ಟ್ರಂಪ್ ಅವರಿಗೆ ಜುಲೈ 11ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದು ಎಂದು ವಿಚಾರಣೆಯ ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶರು ತಿಳಿಸಿದ್ದಾರೆ. 12 ಸದಸ್ಯರ ತೀರ್ಪುಗಾರರು ಎರಡು ದಿನಗಳಲ್ಲಿ 11 ಗಂಟೆಗಳಿಗೂ ಹೆಚ್ಚು ಕಾಲ ಚರ್ಚಿಸಿ ಗುರುವಾರ ಟ್ರಂಪ್ ದೋಷಿ ಎಂದು ಘೋಷಿಸಿದ್ದರು.
Former US President Donald Trump found guilty on all 34 felony charges in hush money trial
— ANI Digital (@ani_digital) May 30, 2024
Read @ANI Story | https://t.co/u8P0JN50HT#Trump #HushMoneyTrial #US pic.twitter.com/35zuy7pQvc
ʼʼನಾನು ಮುಗ್ಧ ವ್ಯಕ್ತಿ, ಮತ್ತು ಯಾವುದೇ ತಪ್ಪು ಮಾಡಿಲ್ಲ. ನಾನು ನಮ್ಮ ದೇಶಕ್ಕಾಗಿ ಮತ್ತು ನಮ್ಮ ಸಂವಿಧಾನಕ್ಕಾಗಿ ಹೋರಾಡುತ್ತಿದ್ದೇನೆ. ಯಾವುದು ಸತ್ಯ, ಯಾವುದು ಸುಳ್ಳು ಎನ್ನುವುದು ಜನರಿಗೆ ಗೊತ್ತಿದೆ. ಹೀಗಾಗಿ ಅವರು ನನ್ನ ಕೈ ಬಿಡುವುದಿಲ್ಲʼʼ ಎಂದು ಟ್ರಂಪ್ ಹೇಳಿದ್ದಾರೆ.
ಏನಿದು ಪ್ರಕರಣ?
ಟ್ರಂಪ್ ಅವರು ನಟಿ ಸ್ಟ್ರಾಮಿ ಡೇನಿಯಲ್ಸ್‌ಗೆ ಹಣ ಪಾವತಿಸಿದ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಹಷ ಮನಿ ಪ್ರಕರಣ ದಾಖಲಾಗಿದೆ. ಗೋಪ್ಯತೆ ರಕ್ಷಿಸಲು ನೀಡುವ ಹಣಕ್ಕೆ ಹಷ್ ಮನಿ ಎಂದು ಕರೆಯಲಾಗುತ್ತದೆ. ಸ್ಟಾರ್ಮಿ ಡೇನಿಯಲ್ಸ್ ಜತೆಗೆ ಟ್ರಂಪ್ 2006ರಲ್ಲಿ ಲೈಂಗಿಕ ಸಂಬಂಧ ಹೊಂದಿದ್ದರು. 2011ರಲ್ಲಿ ಸ್ಟಾರ್ಮಿ ಈ ವಿಷಯವನ್ನು ಬಹಿರಂಗಪಡಿಸಿದ್ದರು.
2016ರಲ್ಲಿ ಟ್ರಂಪ್ ಚುನಾವಣಾ ಕಣಕ್ಕೆ ಇಳಿದ ವೇಳೆ ಲೈಂಗಿಕ ಸಂಪರ್ಕದ ವಿಷಯ ಬಹಿರಂಗ ಮಾಡದಂತೆ ತಮ್ಮ ವಕೀಲರ ಮೂಲಕ ಸ್ಟಾರ್ಮಿಗೆ 1 ಕೋಟಿ ರೂ. ಹಣ ನೀಡಿದ್ದರು. ಬಳಿಕ ಟ್ರಂಪ್ ಹಣ ನೀಡಿದ ವಿಷಯ ಬೆಳಕಿಗೆ ಬಂದು ಪ್ರಕರಣ ದಾಖಲಾಗಿತ್ತು. ಮೊದಲು ಹಣ ನೀಡಿದ ಆರೋಪವನ್ನು ನಿರಾಕರಿಸಿದ್ದ ಟ್ರಂಪ್ ಬಳಿಕ ಒಪ್ಪಿಕೊಂಡಿದ್ದರು. ಇದನ್ನು ಖಾಸಗಿ ವಹಿವಾಟು ಎಂದು ಕರೆದಿದ್ದರು. ಸದ್ಯ ಅವರ ಮುಂದಿನ ನಡೆ ಕುತೂಹಲ ಕೆರಳಿಸಿದೆ. ಚುನಾವಣಾ ಪ್ರಚಾರದ ವೇಳೆ ಎದುರಾಳಿಗಳು ಟ್ರಂಪ್ ವಿರುದ್ಧದ ವಿಚಾರದಲ್ಲಿ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ: Nikki Haley: ಅಮೆರಿಕ ಚುನಾವಣೆ ರೇಸ್‌ನಿಂದ ನಿಕ್ಕಿ ಹ್ಯಾಲೆ ಔಟ್; ಟ್ರಂಪ್ ಹಾದಿ ಸುಗಮ