ಟೆಹ್ರಾನ್: ಇರಾನ್‌ನಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ (Public Hanging In Iran) ಹೀನ ಕೃತ್ಯ ಮುಂದುವರಿದಿದೆ. ಮೊಹ್ಸೆನ್ ಶೆಕಾರಿ ೨೩ ಎಂಬ ಯುವಕನನ್ನು ಗಲ್ಲಿಗೇರಿಸಿದ ಬೆನ್ನಲ್ಲೇ ಈಗ ಮಜಿದ್ರೆಜಾ ರಹ್ನಾವರ್ದ್ (೨೩) ಎಂಬ ಮತ್ತೊಬ್ಬ ಯುವಕನನ್ನು ಬಹಿರಂಗವಾಗಿ ಗಲ್ಲಿಗೇರಿಸಲಾಗಿದೆ. ಕುಣಿಕೆಗೆ ಕೊರಳೊಡ್ಡುವ ಮೊದಲು ಮಾತನಾಡಿರುವ ಮಜಿದ್ರೆಜಾ, “ನನ್ನ ಗೋರಿಯ ಎದುರು ನಿಂತು ಯಾರೂ ಕುರಾನ್ ಪಠಿಸಬಾರದು” ಎಂದು ಹೇಳಿದ್ದಾನೆ. ಈ ವಿಡಿಯೊ ಈಗ ವೈರಲ್ ಆಗಿದೆ.
“ನನ್ನ ಗೋರಿ ಎದುರು ನಿಂತು ಯಾರೂ ಕಣ್ಣೀರು ಸುರಿಸಬಾರದು, ಕುರಾನ್ ಓದಬಾರದು. ಪ್ರಾರ್ಥನೆ ಕೂಡ ಮಾಡದೆ, ಒಳ್ಳೆಯ ಮ್ಯೂಸಿಕ್ ಹಾಕಿ ಕುಣಿಯಬೇಕು, ಸಂಭ್ರಮಿಸಬೇಕು” ಎಂಬ ಹತಾಶೆಯ ಮಾತುಗಳನ್ನಾಡಿದ್ದಾನೆ. ಇಬ್ಬರು ಗಾರ್ಡ್‌ಗಳು ವ್ಯಕ್ತಿಯ ಸುತ್ತುವರಿದಿದ್ದು, ಮಜಿದ್ರೆಜಾ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ. ಇಂತಹ ಸ್ಥಿತಿಯಲ್ಲಿಯೇ ಆತ ಸುದ್ದಿಗಾರರೊಂದಿಗೆ ಮಾತನಾಡಿದ್ದಾನೆ.
ಕೆಲ ತಿಂಗಳ ಹಿಂದೆ ಬುರ್ಖಾವನ್ನು ಸರಿಯಾಗಿ ಧರಿಸದ ಕಾರಣ ಮಹ್ಸಾ ಅಮಿನಿ ಎಂಬ ಯುವತಿಯನ್ನು ನೈತಿಕ ಪೊಲೀಸರು ಹತ್ಯೆ ಮಾಡಿದ್ದರು. ಇದಾದ ಬಳಿಕ ದೇಶಾದ್ಯಂತ ಸರ್ಕಾರದ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ ನಡೆದವು. ಮಜಿದ್ರೆಜಾ ರಹ್ನಾವರ್ದ್ ಕೂಡ ಪ್ರತಿಭಟನೆ ನಡೆಸಿದ್ದು, ಹಲ್ಲೆ ಮಾಡಲು ಬಂದ ಪೊಲೀಸ್ ಸಿಬ್ಬಂದಿಯನ್ನು ಥಳಿಸಿದ ಆರೋಪ ಇತ್ತು. ಹಾಗಾಗಿ, ಈತನಿಗೆ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. ಅದರಂತೆ, ಸಾರ್ವಜನಿವಾಗಿ ಗಲ್ಲಿಗೇರಿಸಲಾಗಿದೆ.
ಇದನ್ನೂ ಓದಿ | Iran Punishment | 2022ರಲ್ಲಿ 500ಕ್ಕೂ ಅಧಿಕ ಮಂದಿಯನ್ನು ಗಲ್ಲಿಗೇರಿಸಿದ ಇರಾನ್ ಸರ್ಕಾರ