ಟೋಕಿಯೊ: ಜಪಾನ್‌ನಲ್ಲಿ ವ್ಯಕ್ತಿಯೊಬ್ಬ 13.24 ಲಕ್ಷ ರೂಪಾಯಿ ಖರ್ಚು ಮಾಡಿ ನಾಯಿಯಾಗಿ ರೂಪಾಂತರವಾದ ವಿಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. ಶ್ವಾನಗಳ ಮೇಲಿನ ಪ್ರೀತಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ನಾಯಿಯಾಗಿ ಬದಲಾದವನ (Human Dog) ಕುರಿತು ಭಾರಿ ಚರ್ಚೆಯಾಗಿತ್ತು. ಹೀಗೆ ಮಾನವನಿಂದ ಶ್ವಾನವಾಗಿ ಬದಲಾದ ಟೋಕೊ ಈಗ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದು, ಆ ವಿಡಿಯೊ ಕೂಡ ವೈರಲ್ (Video Viral) ಆಗಿದೆ. “ನನ್ನ ಕನಸು ನನಸಾಗಿದೆ” ಎಂದು ಟೋಕೊ ಹೇಳಿದ್ದು ಗಮನ ಸೆಳೆದಿದೆ.
“ನನಗೆ ಶ್ವಾನಗಳ ಮೇಲೆ ತುಂಬ ಪ್ರೀತಿ ಇದೆ. ಇದೇ ಕಾರಣಕ್ಕಾಗಿ ನಾನು ನನ್ನ ಜೀವನದಲ್ಲಿ ಬದಲಾವಣೆ ಬಯಸುತ್ತಿದ್ದೆ. ನಾನು ನಾಯಿಯ ವೇಷ ಧರಿಸುತ್ತಲೇ ನನ್ನ ಕನಸು ನನಸಾದ ಅನುಭವ ಆಗುತ್ತದೆ. ಅಷ್ಟೇ ಅಲ್ಲ, ನನ್ನ ತೀರ್ಮಾನವನ್ನು ಜನ ಸ್ವಾಗತಿಸಿದ್ದಾರೆ. ತುಂಬ ಜನ ಮೆಸೇಜ್ ಮಾಡಿ, ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ. ಇದು ನನಗೆ ಮತ್ತಷ್ಟು ಸಕಾರಾತ್ಮಕ ಭಾವ ಮೂಡಿಸುತ್ತದೆ” ಎಂದು ಸಂದರ್ಶನದ ವೇಳೆ ಟೋಕೊ ಹೇಳಿದ್ದಾರೆ.
ಸಂದರ್ಶನದ ವಿಡಿಯೊ
ಜಪಾನ್‌ನ ಜೆಪೆಟ್ ಎಂಬ ಕಂಪನಿಯು ಇವರಿಗಾಗಿ ಕೊಲಿ ನಾಯಿಯ ಕಾಸ್ಟ್ಯೂಮ್ ತಯಾರಿಸಿದೆ. ಈಗ ಈತನು ನಾಲ್ಕು ಕಾಲಿನಿಂದ ಓಡಾಡಿಕೊಂಡಿದ್ದಾನೆ. ಯುವತಿಯೊಬ್ಬಳು ಕೊಲಿ ನಾಯಿಯನ್ನು ಹಿಡಿದುಕೊಂಡು ತಿರುಗಾಡುವ, ಆ ಕೃತಕ ನಾಯಿಯು ರಸ್ತೆ ಮೇಲೆ ಹೊರಳಾಡುವ ವಿಡಿಯೊ ಸಂಚಲನ ಮೂಡಿಸಿದೆ. ಕೆಲವರು ಇದೇನಿದು ಹುಚ್ಚಾಟ ಎಂದರೆ, ಮತ್ತೊಂದಿಷ್ಟು ಜನ ಟೋಕೊ ಅವರ ಶ್ವಾನಪ್ರೀತಿಯನ್ನು ಮೆಚ್ಚಿದ್ದಾರೆ.
ಶ್ವಾನವಾಗಿ ಬದಲಾಗಿರುವ ಟೋಕೊ
ಇದನ್ನೂ ಓದಿ: Human Dog Video : ಮಂಗನಿಂದ ಮಾನವ, ಮಾನವನಿಂದ ಶ್ವಾನ, 13 ಲಕ್ಷ ರೂ. ಖರ್ಚು ಮಾಡಿ ನಾಯಿಯಾದ!
ಟೋಕೊ ಅವರಿಗೆ ಮೊದಲಿನಿಂದಲೂ ಸಾಕು ಪ್ರಾಣಿಗಳು, ಅದರಲ್ಲೂ ನಾಯಿಗಳ ಮೇಲೆ ಎಲ್ಲಿಲ್ಲದ ಪ್ರೀತಿ ಇದೆಯಂತೆ. ಅಲ್ಲದೆ, ಕೆಲ ವರ್ಷಗಳ ಹಿಂದೆ ತಾನು ಕೂಡ ಶ್ವಾನವಾಗಿ ಬದಲಾಗಬೇಕು ಎಂಬ ಆಸೆ ಮೂಡಿದ್ದು, ಇದಕ್ಕಾಗಿ ಅವರು ಜೆಪೆಟ್ ಕಂಪನಿಯ ಮೊರೆಹೋಗಿದ್ದಾರೆ. ಅಲ್ಲಿ, ತಮಗೆ ಇಷ್ಟವಾದ ನಾಯಿಯ ಹಾಗೆ, ನಾಯಿಯನ್ನೇ ಹೋಲುವ ಹಾಗೆ ಕಾಸ್ಟ್ಯೂಮ್ ರೆಡಿ ಮಾಡಿಸಿಕೊಂಡಿದ್ದಾರೆ.