Site icon Vistara News

Drowned: ಪ್ರವಾಸದ ವೇಳೆ ಧಾರುಣ ಘಟನೆ; ಈಜಲು ತೆರಳಿದ ನಾಲ್ವರು ಜಲ ಸಮಾಧಿ

Kolar News Youth dies while swimming in farm pond

Drowned

ಮೆಲ್ಬೋರ್ನ್‌: ಆಸ್ಟ್ರೇಲಿಯಾದ ಮೆಲ್ಬೋರ್ನ್ ಬಳಿಯ ವಿಕ್ಟೋರಿಯಾದ ಫಿಲಿಪ್ ದ್ವೀಪದಲ್ಲಿ (Victoria’s Philip Island) ಈಜಲು ತೆರಳಿದ್ದ ನಾಲ್ವರು ಭಾರತೀಯರು ಮುಳುಗಿ ಮೃತಪಟ್ಟಿದ್ದಾರೆ (Drowned). ಮೃತರ ಪೈಕಿ ಪಂಜಾಬ್‌ನ ಫಗ್ವಾರಾದ ಮಹಿಳೆ ಸೇರಿದಂತೆ ಇತರ ಮೂವರನ್ನು ಗುರುತಿಸಲಾಗಿದೆ. ಗುಹೆಯ ಬಳಿ ಗಸ್ತು ಇಲ್ಲದ ಸ್ಥಳದಲ್ಲಿ ಈ ನಾಲ್ವರು ಈಜುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

“ಆಸ್ಟ್ರೇಲಿಯಾದಲ್ಲಿ ಹೃದಯ ವಿದ್ರಾವಕ ಘಟನೆ: ವಿಕ್ಟೋರಿಯಾದ ಫಿಲಿಪ್ ದ್ವೀಪದಲ್ಲಿ ಮುಳುಗಿ ನಾಲ್ವರು ಭಾರತೀಯರು ಪ್ರಾಣ ಕಳೆದುಕೊಂಡಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪಗಳು. ಎಲ್ಲ ಅಗತ್ಯ ಸಹಾಯಕ್ಕಾಗಿ ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆʼʼ ಎಂದು ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಹೈಕಮಿಷನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದೆ.

ಮೃತ ಮಹಿಳೆಯನ್ನು ಫಗ್ವಾರಾದ ಉದ್ಯಮಿ ಓಂ ಸೋಂಧಿ ಅವರ ಸೊಸೆ ರೀಮಾ ಎಂದು ಗುರುತಿಸಲಾಗಿದೆ. ʼʼರೀಮಾ ಅವರ ಸಾವಿನ ಬಗ್ಗೆ ಮಾಹಿತಿ ನೀಡಿದಾಗಿನಿಂದ ಓಂ ಸೋಂಧಿ ಶಾಕ್‌ನಲ್ಲಿದ್ದಾರೆʼʼ ಎಂದು ಅವರ ಹಿರಿಯ ಸಹೋದರ, ಮಾಜಿ ಕೌನ್ಸಿಲರ್ ವಿಜಯ್ ಸೋಂಧಿ ತಿಳಿಸಿದ್ದಾರೆ. ರೀಮಾ ತಮ್ಮ ಪತಿ ಸಂಜೀವ್ ಮತ್ತು ಅವರ ಸಹೋದರರೊಂದಿಗೆ ರಜೆ ಕಳೆಯಲು ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಹಿಮಾಚಲ ಪ್ರದೇಶದ ಸೋಲನ್ ನಿವಾಸಿಗಳಾದ ರೀಮಾ ಅವರ ಸಹೋದರಿ ಸುಹಾನಿ (22) ಮತ್ತು ಸಹೋದರ ಕೂಡ ಅಪಘಾತದಲ್ಲಿ ಅಸುನೀಗಿದ್ದಾರೆ. ಈ ವೇಳೆ ಸ್ಥಳೀಯ ಪೊಲೀಸರು ಸಂಜೀವ್ ಅವರನ್ನು ರಕ್ಷಿಸಿದ್ದಾರೆ.

ʼʼಬುಧವಾರ (ಜನವರಿ 24) ಅಪರಾಹ್ನ 3:30ರ ಸುಮಾರಿಗೆ (ಆಸ್ಟ್ರೇಲಿಯಾದ ಸಮಯ) ನ್ಯೂ ಹೇವನ್ ಬೀಚ್‌ನಲ್ಲಿ ನಾಲ್ಕು ಮಂದಿ ನೀರಿನಲ್ಲಿ ಮುಳುಗುತ್ತಿದ್ದಾರೆ ಎನ್ನುವ ತುರ್ತು ಕರೆಗೆ ಕೂಡಲೆ ಸ್ಪಂದಿಸಿದ್ದೆವು. ಆದರೆ ಎಲ್ಲರನ್ನೂ ರಕ್ಷಿಸಲು ಸಾಧ್ಯವಾಗಿಲ್ಲʼʼ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 10 ಜನರ ಗುಂಪು ಬೀಚ್‌ಗೆ ತೆರಳಿತ್ತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Viral Video: ನೆಲಕ್ಕೆ ಅಪ್ಪಳಿಸಿದ ರಷ್ಯಾ ವಿಮಾನ, 65 ಉಕ್ರೇನ್ ಯುದ್ಧ ಕೈದಿಗಳ ದಾರುಣ ಸಾವು

ಘಟನೆಯಲ್ಲಿ ಓರ್ವ ಪುರುಷ ಮತ್ತು ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮೂರನೇ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮೆಲ್ಬೋರ್ನ್‌ ಆಲ್ಫ್ರೆಡ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version