ನವದೆಹಲಿ: ದಕ್ಷಿಣ ಆಫ್ರಿಕಾದ ಈಕ್ವೇಡಾರ್ ಮತ್ತು ಪೆರು ದೇಶಗಳಲ್ಲಿ ಪ್ರಬಲ ಭೂಕಂಪನವಾಗಿದ್ದು (Ecuador Earthquake), 14 ಮಂದಿ ಮೃತಪಟ್ಟಿದ್ದಾರೆ. ಈಕ್ವೇಡಾರ್ನ ಕರಾವಳಿ ತೀರದಲ್ಲಿ ಮತ್ತು ಪೆರು ದೇಶದ ಉತ್ತರ ಭಾಗದಲ್ಲಿ ಶನಿವಾರ ಮಧ್ಯಾಹ್ನದ ಹೊತ್ತಿಗೆ ಭೂಮಿ ನಡುಗಿದೆ. ಯುಎಸ್ನ ಭೂವೈಜ್ಞಾನಿಕ ಸಮೀಕ್ಷೆ ಪ್ರಕಾರ, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.8 ಮ್ಯಾಗ್ನಿಟ್ಯೂಡ್ಗಳಷ್ಟು ದಾಖಲಾಗಿದೆ. ಗುವಾಯಾಸ್ ಪ್ರಾಂತ್ಯದ ಬಾಲಾವೊ ನಗರದಿಂದ 10 ಕಿಮೀ ದೂರದಲ್ಲಿ ಭೂ ಮೇಲ್ಮೈಯಿಂದ 66.4 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ. ಹಲವು ಮನೆಗಳು, ಶಾಲೆಗಳು, ಆಸ್ಪತ್ರೆಗಳು ಸೇರಿ, ಚಿಕ್ಕಪುಟ್ಟ ಅಂಗಡಿಗಳೆಲ್ಲ ಭೂಕಂಪನದ ಹೊಡೆತಕ್ಕೆ ಕುಸಿದುಬಿದ್ದಿವೆ. ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ಯುವ ಕಾರ್ಯಾಚರಣೆ ನಡೆಯುತ್ತಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.
ಈಕ್ವೆಡಾರ್ ಅಧ್ಯಕ್ಷರಾದ ಗಿಲ್ಲೆರ್ಮೊ ಲಾಸ್ಸೊ ಟ್ವೀಟ್ ಮಾಡಿ ‘ಭೂಕಂಪನದಿಂದ ಆದ ಹಾನಿಯನ್ನು ಪರಿಶೀಲನೆ ಮಾಡುತ್ತಿದ್ದೇವೆ. ಸಂತ್ರಸ್ತರಿಗೆ ಎಲ್ಲ ರೀತಿಯ ನೆರವು ನೀಡುತ್ತೇವೆ. ಯಾರೂ ಹೆದರಬೇಕಿಲ್ಲ. ಅವರ ಜತೆ ನಾನಿದ್ದೇನೆ’ ಎಂದಿದ್ದಾರೆ. ಇನ್ನು ಒಂದು ಅಂದಾಜಿನ ಪ್ರಕಾರ 380ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 44 ಮನೆಗಳು ಸಂಪೂರ್ಣವಾಗಿ ಕುಸಿದುಬಿದ್ದಿವೆ. 90ಕ್ಕೂ ಹೆಚ್ಚು ಮನೆಗಳು ಹಾನಿಗೆ ಒಳಗಾಗಿವೆ. 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು, 30ಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳು ಕೂಡ ಭೂಕಂಪದಿಂದ ಕುಸಿದಿವೆ. ಭೂಕುಸಿತ ಉಂಟಾಗಿದ್ದು, ಹಲವು ರಸ್ತೆಗಳಲ್ಲಿ ಸಂಚಾರ ತೊಡಕಾಗಿದೆ. ಸಂತಾ ರೋಸಾ ಏರ್ಪೋರ್ಟ್ಗೆ ಕೂಡ ಹಾನಿಯಾಗಿದ್ದು, ಹಾಗಂತ ವಿಮಾನ ಸಂಚಾರಕ್ಕೆ ಏನೂ ಸಮಸ್ಯೆಯಾಗಿಲ್ಲ ಎಂದು ವರದಿಯಾಗಿದೆ.
ಶನಿವಾರ ಮಧ್ಯಾಹ್ನದ ಹೊತ್ತಲ್ಲಿ ಮೊದಲು ಕಡಿಮೆ ಮಟ್ಟದಲ್ಲಿ ಒಮ್ಮೆ ಭೂಮಿ ನಡುಗಿತು. ಆದರೆ ಒಂದು ತಾಸಿನ ಬಳಿಕ ಅತ್ಯಂತ ಪ್ರಬಲವಾದ ಕಂಪನ ಉಂಟಾಗಿದೆ. ಈಕ್ವೇಡಾರ್ಗೆ ಹೋಲಿಸಿದರೆ ಪೆರುವಿನಲ್ಲಿ ಹಾನಿ ಪ್ರಮಾಣ ಕಡಿಮೆ ಇದೆ ಎಂದು ಹೇಳಲಾಗಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ತಂಡಗಳು ಭರದಿಂದ ಕಾರ್ಯಾಚರಣೆ ನಡೆಸುತ್ತಿವೆ.
ಇದನ್ನೂ ಓದಿ: Turkey Earthquake: ಟರ್ಕಿ ಭೂಕಂಪ; 178 ತಾಸು ಕಟ್ಟಡದ ಅವಶೇಷಗಳಲ್ಲಿ ಸಿಲುಕಿಯೂ ಬದುಕಿ ಬಂದ 6 ವರ್ಷದ ಬಾಲಕಿ