Site icon Vistara News

Ebrahim Raisi: ಹೆಲಿಕಾಫ್ಟರ್‌ ಪತನದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮೃತ್ಯು; ವಿಧ್ವಂಸಕ ಕೃತ್ಯವೇ?

Ebrahim Raisi

Ebrahim Raisi

ಬಾಕು: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ (Helicopter Crash) ಅಜರ್‌ಬೈಜಾನ್‌ನಲ್ಲಿ (Azerbaijan) ಪತನಗೊಂಡಿದ್ದು, ಘಟನೆಯಲ್ಲಿ ಅವರು ಮೃತಪಟ್ಟಿದ್ದಾರೆ. ಅವರೊಂದಿಗೆ ಪ್ರಯಾಣಿಸುತ್ತಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಹುಸೇನ್‌ ಅಮೀರಬ್ದೊಲ್ಲೈ ಸೇರಿ ಇತರರೂ ನಿಧನ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ರಕ್ಷಣಾ ತಂಡ ಕಾರ್ಯಾಚರಣೆಯಲ್ಲಿ ನಿರತವಾಗಿದೆ.

“ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಅಪಘಾತದಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ದುರದೃಷ್ಟವಶಾತ್ ಅದರಲ್ಲಿದ್ದ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಕರ್ತವ್ಯ ನಿರ್ವಹಿಸುವಾಗ ಅಪಘಾತಕ್ಕೀಡಾಗಿ ಹುತಾತ್ಮರಾದರು” ಎಂದು ಇರಾನ್‌ ಮೆಹರ್ ಏಜೆನ್ಸಿ ವರದಿ ಮಾಡಿದೆ.

ಹೆಲಿಕಾಪ್ಟರ್‌ನಲ್ಲಿ ಯಾರಿದ್ದರು?

ಹೆಲಿಕಾಪ್ಟರ್‌ನಲ್ಲಿ ಅಧ್ಯಕ್ಷ ಇಬ್ರಾಹಿಂ ರೈಸಿ ಜತೆಗೆ ವಿದೇಶಾಂಗ ವ್ಯವಹಾರಗಳ ಸಚಿವ ಹುಸೇನ್‌ ಅಮೀರಬ್ದೊಲ್ಲೈ, ಪೂರ್ವ ಅಜರ್‌ಬೈಜಾನ್‌ ಗವರ್ನರ್‌ ಮಲೇಕ್‌ ರಹಮತಿ ಹಾಗೂ ಪೂರ್ವ ಅಜರ್‌ಬೈಜಾನ್‌ನಲ್ಲಿರುವ ಇರಾನ್‌ ಸುಪ್ರೀಂ ಲೀಡರ್‌ನ ಪ್ರತಿನಿಧಿ ಅಯೊತೊಲ್ಲಾ ಮೊಹಮ್ಮದ್‌ ಅಲಿ ಅಲೆ-ಹಶೇಮ್‌ ಕೂಡ ಇದ್ದರು. ಮಂಜು ಕವಿದ ವಾತಾವರಣದ ಕಾರಣ ಪೈಲೆಟ್ ತುರ್ತು ಲ್ಯಾಂಡಿಂಗ್ ಮಾಡಲು ಮುಂದಾಗಿದ್ದರು. ಆದರೆ ಲ್ಯಾಂಡಿಂಗ್ ವೇಳೆಯೇ ಹೆಲಿಕಾಪ್ಟರ್ ಅಪಘಾತವಾಗಿದೆ ಎಂದು ಇರಾನ್ ಸುದ್ದಿ ಮಾಧ್ಯಮಗಳು ವರದಿ ಮಾಡಿದೆ. ಅರಸ್‌ ನದಿಗೆ ಇರಾನ್‌ ಹಾಗೂ ಅಜರ್‌ಬೈಜಾನ್‌ ಸೇರಿ ಅಣೆಕಟ್ಟು ಕಟ್ಟಿದ್ದು, ಅದನ್ನು ಉದ್ಘಾಟಿಸಲು ಇಬ್ರಾಹಿಂ ರೈಸಿ ಮತ್ತು ಇತರ ಗಣ್ಯರು ಅಜರ್‌ಬೈಜಾನ್‌ಗೆ ತೆರಳಿದ್ದರು. 

ಕವಿದ ದಟ್ಟ ಮಂಜು ಮತ್ತು ಹವಾಮಾನ ವೈಪರೀತ್ಯ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಹೆಲಿಕಾಪ್ಟರ್‌ ಹುಡುಕಾಟ ಕಾರ್ಯಾಚರಣೆಯಲ್ಲಿ ತೊಡಗಿದ್ದ ಮಾನವ ರಹಿತ ವೈಮಾನಿಕ ವಾಹನ(UAV)ಹೆಲಿಕಾಪ್ಟರ್‌ ಪತನಗೊಂಡಿರುವ ಸ್ಥಳವನ್ನು ಪತ್ತೆ ಹಚ್ಚಿದ್ದು, ಸದ್ಯ ಅದರ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ವಿಡಿಯೋವನ್ನು ಇರಾನಿಯನ್‌ ಸುದ್ದಿ ವಾಹಿನಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶೇರ್‌ ಮಾಡಿದ್ದು, ರೆಡ್ ಕ್ರೆಸೆಂಟ್ ಶೋಧ ಮತ್ತು ಪಾರುಗಾಣಿಕಾ ತಂಡಗಳು ಅಧ್ಯಕ್ಷರನ್ನು ಹೊತ್ತ ಹೆಲಿಕಾಪ್ಟರ್ ಅಪಘಾತದ ಸ್ಥಳಕ್ಕೆ ತಲುಪಿವೆ. ರೆಡ್ ಕ್ರೆಸೆಂಟ್ ಸದ್ಯದಲ್ಲೇ ವಿವರವಾದ ಮಾಹಿತಿಯನ್ನು ನೀಡಲಿದೆ ಎಂದು ಹೇಳಿದೆ. ಸದ್ಯ ಇದು ಅಪಘಾತವೇ, ವಿಧ್ವಂಸಕ ಕೃತ್ಯವೇ ಎನ್ನುವ ಅನುಮಾನ ಮೂಡಿದೆ.

ಇಬ್ರಾಹಿಂ ರೈಸಿಗಾಗಿ ಮೋದಿ ಪ್ರಾರ್ಥನೆ

ಇರಾನ್‌ ಅಧ್ಯಕ್ಷರಿದ್ದ ಹೆಲಿಕಾಪ್ಟರ್‌ ಪತನಗೊಂಡಿರುವ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳವಳ ವ್ಯಕ್ತಪಡಿಸಿದ್ದರು. “ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್‌ ಪತನದ ಸುದ್ದಿ ತಿಳಿದು ಆತಂಕವಾಗಿದೆ. ಇರಾನ್‌ ಜನರ ಭಾವನೆಗಳ ಜತೆ ನಾವಿದ್ದೇವೆ. ಇಬ್ರಾಹಿಂ ರೈಸಿ ಹಾಗೂ ಅವರ ಜತೆಗಿದ್ದ ಎಲ್ಲರೂ ಸುರಕ್ಷಿತವಾಗಿರಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಮೋದಿ ಪೋಸ್ಟ್‌ ಮಾಡಿದ್ದರು. ಜತೆಗೆ ವಿಶ್ವದ ನಾನಾ ದೇಶಗಳ ನಾಯಕರೂ ರೈಸಿ ಅವರು ಸುರಕ್ಷಿರತಾಗಿ ಪತ್ತೆಯಾಗಲಿ ಎಂದು ಪ್ರಾರ್ಥಿಸಿದ್ದರು.

ಇದನ್ನೂ ಓದಿ: Ebrahim Raisi: ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ

Exit mobile version