ಕೈರೋ: ಈಜಿಪ್ಟ್ನ ಕಾಪ್ಟಿಕ್ ಸಮುದಾಯಕ್ಕೆ ಸೇರಿದ ಚರ್ಚ್ನಲ್ಲಿ ಭೀಕರ ಬೆಂಕಿ ದುರಂತ (Egyptian Church Fire) ನಡೆದಿದ್ದು, 41 ಮಂದಿ ದುರ್ಮರಣ ಹೊಂದಿದ್ದಾರೆ. ಕೈರೋದ ವಾಯುವ್ಯದಲ್ಲಿರುವ ಅಬು ಸೈಫೈನ್ ಚರ್ಚ್ನಲ್ಲಿ ಈ ಅವಘಡವಾಗಿದ್ದು, ಬೆಂಕಿ ಹೊತ್ತಿಕೊಳ್ಳಲು ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ.
ಬೆಂಕಿಯಿಂದ ನರಳಾಡುತ್ತಿರುವವರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಲು ಅಲ್ಲಿಗೆ ವೈದ್ಯಕೀಯ ತಂಡವನ್ನೂ ನಿಯೋಜಿಸಲಾಗಿತ್ತು. ಆರೋಗ್ಯ ಸಚಿವ ಖಲೀದ್ ಅಬ್ದೆಲ್-ಗಫರ್ ಅವರು ಎಲ್ಲ ವಿವರಗಳನ್ನೂ ಪಡೆದು, ಎಲ್ಲ ರೀತಿಯ ಮೆಡಿಕಲ್ ಸರ್ವೀಸ್ ಕ್ಷಿಪ್ರಗತಿಯಲ್ಲಿ ಸಿಗುವಂತೆ ಮಾಡಿದ್ದಾರೆ ಎಂದು ಈಜಿಪ್ಟ್ ಮಾಧ್ಯಮಗಳು ವರದಿ ಮಾಡಿವೆ. ಗಾಯಗೊಂಡವರನ್ನು, ಮೃತದೇಹಗಳನ್ನೆಲ್ಲ ಸಾಗಿಸಲು ಸುಮಾರು 30 ಆ್ಯಂಬುಲೆನ್ಸ್ಗಳು ಕಾರ್ಯಾಚರಣೆ ನಡೆಸಿದವು ಎಂದು ಆರೋಗ್ಯ ಸಚಿವಾಲಯದ ಹೊಸಾಮ್ ಅಬ್ದೆಲ್ ಗಫರ್ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ರಕ್ಷಣಾ ಕಾರ್ಯಾಚರಣೆಗಾಗಿ ಸಿವಿಲ್ ರಕ್ಷಣಾ ಪಡೆಗಳೂ ಸ್ಥಳದಲ್ಲಿ ಬೀಡುಬಿಟ್ಟಿವೆ.
ಕೈರೋ ಮತ್ತು ಗಿಝಾ ಆಡಳಿತ ಪ್ರದೇಶಗಳ ಎಲ್ಲ ಆಸ್ಪತ್ರೆಗಳಲ್ಲೂ ತುರ್ತು ಅಲರ್ಟ್ ಘೋಷಿಸಲಾಗಿದೆ. ಯಾವುದೇ ವೈದ್ಯಕೀಯ ಸೇವೆಗೂ ತಡೆಯುಂಟಾಗದೆ ವ್ಯವಸ್ಥೆ ಮಾಡಲಾಗಿದೆ. ಗಾಯಗೊಂಡವರಿಗೆ ಸಮರೋಪಾದಿಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದೂ ವಿವರಿಸಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಂಕಿಗೆ ಕಾರಣವನ್ನು ಪತ್ತೆ ಹಚ್ಚಿ, ವರದಿ ನೀಡಲು ಒಂದು ತಂಡವನ್ನೂ ರಚಿಸಲಾಗಿದೆ.
ಇದನ್ನೂ ಓದಿ: ದೆಹಲಿ ಅಗ್ನಿ ದುರಂತ: 4 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ; 27 ಸಾವು, 19 ಜನ ನಾಪತ್ತೆ