ಸಾಮಾಜಿಕ ಜಾಲತಾಣಗಳಲ್ಲಿ ದಿನವೂ ಒಂದಿಲ್ಲೊಂದು ಪ್ರಾಣಿಗಳ ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಇದೂ ಅಂಥವುಗಳಲ್ಲಿ ಒಂದು. ನೀರು ಕುಡಿಯಲು ಬಂದಿದ್ದೇ ಈ ಎರಡು ಹೆಣ್ಣಾನೆಗಳ ಪ್ರಾಣಕ್ಕೆ ಸಂಚಕಾರ ಬಂದಿದ್ದು, ಕೆಸರಿನಾಳದಲ್ಲಿ ಹೂತುಹೋಗಿವೆ.
ಕೀನ್ಯಾದ ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್ ಪೋಸ್ಟ್ ಮಾಡಿದ ಈ ವಿಡಿಯೋನಲ್ಲಿ ಎರಡು ಹೆಣ್ಣಾನೆಗಳು ಕೆಸರಿನಲ್ಲಿ ಹೂತುಹೋಗಿರುವ ದೃಶ್ಯ ಮನ ಮಿಡಿಯುವಂತಿದೆ. ಬೇಸಗೆ ಬಿಸಿಲಿನ ಝಳಕ್ಕೆ ದಾಹ ತೀರಿಸಲು, ನೀರಿನ ಆಸರೆಯನ್ನು ಹುಡುಕಿಕೊಂಡು ಬಂದ ಎರಡು ಹೆಣ್ಣಾನೆಗಳಿಗೆ ತಮ್ಮ ದಾಹವೇ ಪ್ರಾಣಕ್ಕೆ ಕುತ್ತಾಗಿದೆ. ಬಹುಶಃ ಎರಡು ದಿನಗಳಿಂದ ಕೆಸರಿನೊಳಗೆ ಹೂತುಹೋಗಿ ಹೊರಗಡೆ ಬರಲು ಗೊತ್ತಾಗದೆ, ಕಷ್ಟಪಟ್ಟಷ್ಟೂ ಆಳಕ್ಕೆ ಹೂತುಹೋಗುತ್ತಿದ್ದ ಈ ಎರಡು ಆನೆಗಳು ಕೊನೆಗೂ ಸಾವಿನ ದವಡೆಯಿಂದ ಬದುಕಿ ಬಂದಿದೆ. ಇದಕ್ಕೆ ಸತತವಾಗಿ ಶ್ರಮಿಸಿದ ಕೆಡಬ್ಲ್ಯುಎಸ್ ಹಾಗೂ ವೈಲ್ಡ್‌ಲೈಫ್ ವರ್ಕ್ಸ್ ಕೊನೆಗೂ ಆನೆಗಳನ್ನು ಸುರಕ್ಷಿತವಾಗಿ ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದೆ.
ವಿಡಿಯೋ ನೋಡಿದರೆ ಎಂಥವರ ಮನವೂ ಮಿಡಿಯದೆ ಇರದು. ಕೇವಲ ಮುಖದ ಒಂದು ಬದಿಯ ಕಣ್ಣು ಮಾತ್ರ ಕಾಣುವಷ್ಟು ಕೆಸರಿನಲ್ಲಿ ಹೂತು ಹೋದ ಸ್ಥಿತಿಯಲ್ಲಿದ್ದ ಈ ಆನೆಗಳು, ದೇಹವನ್ನು ಅಲ್ಲಾಡಿಸಲಾಗದಷ್ಟು ಹೂತು ಹೋಗಿರುವುದು ಎರಡು ದಿನಗಳ ಕಾಲ ಅವುಗಳು ಹೊರಗೆದ್ದು ಬರಲು ಎಷ್ಟು ಹೋರಾಟ ನಡೆಸಿವೆಯೆಂದಬುದನ್ನು ಕಣ್ಣಿಗೆ ಕಟ್ಟುತ್ತವೆ. ಹೊರಬರಲು ಪ್ರಯತ್ನಿಸಿದಷ್ಟೂ ಇಲ್ಲಿ ಅವುಗಳು ಹೂತುಹೋಗಿವೆ ಎಂಬುದು ಸ್ಪಷ್ಟವಾಗುತ್ತದೆ.
ಒಂದು ಬದಿಯಿಂದ ಕೆಸರಿನಾಳದಿಂದ ಸೊಂಡಿಲನ್ನು ಕೆಸರಿನಿಂದ ಮೇಲೆತ್ತುತ್ತಾ ಅವು ತೋರುವ ಬದುಕಿ ಬರಲು ಪ್ರಯತ್ನಿಸುವ ಅವುಗಳ ಕಷ್ಟ ಎಂಥವರ ಮನವನ್ನೂ ಕಲಕಿಸುವಂತಿದೆ. ಈ ವಿಚಾರ ತಿಳಿದ ತಕ್ಷಣ, ಸ್ಥಳೀಯ ಕೆಡಬ್ಲ್ಯುಎಸ್ ಹಾಗೂ ವೈಲ್ಡ್‌ಲೈಫ್ ವರ್ಕ್ಸ್ ಸದಸ್ಯರು, ತಮ್ಮ ಪ್ರಾಣದ ಹಂಗು ತೊರೆದು ಆನೆಗಳನ್ನು ಮೇಲೆತ್ತಿಸುವಲ್ಲಿ ಯಶಸ್ವಿಯಾಗಿವೆ.
ಇದನ್ನೂ ಓದಿ | Chamarajanagar News | ತಾಯಿಯಿಂದ ಬೇರ್ಪಟ್ಟು ಪುರಾಣಿಪೋಡಿ ಶಾಲೆಗೆ ಬಂದ ಪುಟಾಣಿ ಆನೆ!
ಖಂಡಿತವಾಗಿಯೂ ಈ ರಕ್ಷಣಾಕಾರ್ಯ ನಡೆಸದಿದ್ದರೆ, ಈ ಎರಡೂ ಆನೆಗಳು ಬದುಕುತ್ತಿರಲಿಲ್ಲ. ವಿಪರೀತ ಕಣ್ಣು ಕೋರೈಸುವ ಬಿಸಿಲು, ಹೊರಗೆ ಬರಲು ಕಷ್ಟಪಟ್ಟಷ್ಟೂ ಒಳಗೆ ಹೂತುಹೋಗುವ ಕೆಸರಿನಲ್ಲಿ ಖಂಡಿತ ಆನೆಗಳು ಸತ್ತು ಹೋಗುತ್ತಿದ್ದವು. ಸದ್ಯ ಕೀನ್ಯಾದಲ್ಲಿ ಬೇಸಗೆ ಹೇಗಿದೆಯೆಂದರೆ, ನೀರಿನ ಆಸರೆಗಳೆಲ್ಲವೂ ಬತ್ತಿ ಹೋಗಿವೆ. ಈ ಆನೆಗಳೂ ನೀರು ಸಿಗದೆ, ಇಲ್ಲಿ ಕಂಡ ಕೊಂಚ ನೀರಿಗಾಗಿ ಹತ್ತಿರ ಬಂದಿರಬಹುದು. ಆದರೆ, ಆನೆಗಳು ಹೂತು ಹೋದ ಸ್ಥಳ ಎಂಥದ್ದಾಗಿತ್ತೆಂದರೆ, ಇದು ರಕ್ಷಣಾ ತಂಡಕ್ಕೂ ಬಹಳ ಕಷ್ಟವಾಯಿತು. ಆದರೂ ಛಲ ಬಿಡದಂತೆ ಪ್ರಯತ್ನಿಸಿ ಸಫಲರಾಗಿದ್ದಾರೆ. ಆನೆಗಳೆರಡೂ ಸಂತೋಷದಿಂದ ತಮ್ಮ ಬೆಂಗಾಡಿಗೆ ಮರಳಿವೆ ಎಂದು ಅವರು ತಿಳಿಸಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಹೆಲಿಕಾಪ್ಟರಿನಲ್ಲಿ ಬಂದಿಳಿದ ತಂಡ, ಬುಲ್ಡೋಜರ್, ಎರಡು ಜೀಪುಗಳೂ ಸೇರಿದಂತೆ ವಾಹನಗಳ ಸಹಕಾರದಿಂದ ಆನೆಗಳನ್ನು ಹೊರಗೆಳೆದಿವೆ. ಕೆಸರಿಗೆ ಅಂಟಿಕೊಂಡಿದ್ದ ಎರಡು ಬೃಹತ್ ಜೀವಗಳನ್ನು ಈ ಸದಸ್ಯರು ಸ್ವಪರಿಶ್ರಮದಿಂದ ಏಳಿಸಿ, ಹಗ್ಗವನ್ನು ಜೀಪಿಗೆ ಕಟ್ಟಿ ಎಳೆಯುವ ಮೂಲಕ ಕೊನೆಗೂ ಯಶಸ್ವಿಯಾಗಿವೆ. ಈ ದೃಶ್ಯ ನೋಡಲು ಹಲವಾರು ಜನ ಸ್ಥಳಕ್ಕೆ ನೆರೆದಿದ್ದನ್ನೂ ಕಾಣಬಹುದು.
ಹಲವರು ಈ ತಂಡದ ಶ್ರಮಕ್ಕೆ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ʻನೀವು ಆನೆಗಳ ಪಾಲಿಗೆ ಬಂದ ದೇವರುಗಳುʼ ಎಂದು ಬಣ್ಣಿಸಿದ್ದಾರೆ. ಹಲವರು, ʻನಿಮ್ಮ ಕಾರ್ಯ ನೋಡಿ ನಮ್ಮ ಕಣ್ಣಾಲಿಗಳು ತುಂಬಿಕೊಂಡವು, ಗ್ರೇಟ್ ಜಾಬ್ʼ ಎಂದು ಕಮೆಂಟಿಸಿದ್ದಾರೆ. ಇನ್ನೂ ಕೆಲವರು, ʻಕೀನ್ಯಾದ ಒಣ ಭೂಮಿಯ ಮೇಲೆ ಬೇಗ ಮಳೆರಾಯ ಕೃಪೆ ತೋರಲಿ. ಇಂತಹ ಕೆರೆಕಟ್ಟೆಗಳಲ್ಲಿ ನೀರು ಜಿನುಗಲಿ. ಎಲ್ಲರೂ ಸಂತೋಷದಿಂದ ಜೀವಿಸುವಂತಾಗಲಿʼ ಎಂದಿದ್ದಾರೆ.
ಇದನ್ನೂ ಓದಿ | Ramanagara News | ತಾಯಿ ಕಳೆದುಕೊಂಡು ನಿತ್ರಾಣಗೊಂಡ ಆನೆಮರಿಗೆ ಗ್ರಾಮಸ್ಥರ ಆಶ್ರಯ