Site icon Vistara News

Elon Musk: ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್ ಪುತ್ರನ ಹೆಸರಿಗೂ, ಭಾರತಕ್ಕೂ ಇದೆ ನಂಟು

musk

musk

ನವ ದೆಹಲಿ: ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್‌ ಮಸ್ಕ್‌ (Elon Musk) ತಮ್ಮ ಪುತ್ರನಿಗೆ ಭಾರತದ ಜತೆಗಿರುವ ನಂಟಿನ ಬಗ್ಗೆ ಮಾತನಾಡಿದ್ದಾರೆ. ಈ ವಿಷಯವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar) ಬಹಿರಂಗಪಡಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ರಾಜೀವ್ ಚಂದ್ರಶೇಖರ್ ಜತೆ ನಡೆದ ಸಭೆಯಲ್ಲಿ ಎಲಾನ್‌ ಮಸ್ಕ್‌ ತಮ್ಮ ಭಾರತೀಯ ಸಂಪರ್ಕದ ಬಗ್ಗೆ ಆಸಕ್ತಿದಾಯಕ ವಿಚಾರಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಭೇಟಿಯ ಚಿತ್ರವನ್ನು ರಾಜೀವ್‌ ಚಂದ್ರಶೇಖರ್‌ ಹಂಚಿಕೊಂಡಿದ್ದಾರೆ. ಎಲಾನ್‌ ಮಸ್ಕ್‌ ತಮ್ಮ ಪುತ್ರನ ಮಧ್ಯದ ಹೆಸರು ಭಾರತೀಯ ಸಂಪರ್ಕವನ್ನು ಹೊಂದಿದೆ ಎಂದು ಬಹಿರಂಗಪಡಿಸಿದ್ದಾರೆ.

ಎಲಾನ್‌ ಮಸ್ಕ್ ಮತ್ತು ಶಿವೋನ್ ಜಿಲಿಸ್ ಅವರ ಪುತ್ರ ‘ಚಂದ್ರಶೇಖರ್’ ಎಂಬ ಮಧ್ಯದ ಹೆಸರನ್ನು ಹೊಂದಿದ್ದಾರೆ. ಇದು 1983ರಲ್ಲಿ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಗಳಿಸಿದ ಪ್ರಸಿದ್ಧ ಭಾರತೀಯ ಭೌತಶಾಸ್ತ್ರಜ್ಞ ಪ್ರೊಫೆಸರ್ ಎಸ್. ಚಂದ್ರಶೇಖರ್ ಅವರಿಗೆ ಸಲ್ಲಿಸಿದ ಗೌರವಾರ್ಪಣೆ ಎಂದು ಮಸ್ಕ್‌ ಹೇಳಿದ್ದಾರೆ. ಶಿವೋನ್ ಜಿಲಿಸ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಪರಿಣತಿ ಹೊಂದಿರುವ ಕೆನಡಾ ಮೂಲದವರು.

ಚಂದ್ರಶೇಖರ್ ಅವರ ಪೋಸ್ಟ್‌ ಅನ್ನು ದೃಢಪಡಿಸಿದ ಜಿಲಿಸ್, “ಹೌದು, ಅದು ನಿಜ. ನಾವು ಅವನನ್ನು ಪ್ರೀತಿಯಿಂದ ಶೇಖರ್ ಎಂದು ಕರೆಯುತ್ತೇವೆ. ಅದ್ಭುತ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಗೌರವಾರ್ಥವಾಗಿ ಈ ಹೆಸರನ್ನು ಆಯ್ಕೆ ಮಾಡಲಾಗಿದೆʼʼ ಎಂದು ತಿಳಿಸಿದ್ದಾರೆ.

ಎಐ(Artificial Intelligence)ನ ಪ್ರಸ್ತುತ ಸ್ಥಿತಿ, ಹೂಡಿಕೆಯ ನಿರೀಕ್ಷೆಗಳು, ಬದ್ಧತೆಗಳು ಮತ್ತು ಆಡಳಿತದ ಬಗ್ಗೆ ಚರ್ಚಿಸಲು ನೀತಿ ನಿರೂಪಕರು, ಹೂಡಿಕೆದಾರರನ್ನು ಒಗ್ಗೂಡಿಸುವ ಗ್ಲೋಬಲ್ ಎಐ ಶೃಂಗಸಭೆಯನ್ನು ಇಂಗ್ಲೆಂಡ್‌ನಲ್ಲಿ ಆಯೋಜಿಸಲಾಗಿದ್ದು, ರಾಜೀವ್ ಚಂದ್ರಶೇಖರ್ ಭಾಗವಹಿಸಿದ್ದರು. ಶೃಂಗಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ, ರಾಜೀವ್‌ ಚಂದ್ರಶೇಖರ್ ಡಿಜಿಟಲ್ ಆರ್ಥಿಕತೆಯಲ್ಲಿ ಭಾರತದ ಗಮನಾರ್ಹ ಪ್ರಗತಿಯ ಬಗ್ಗೆ ಮಾಹಿತಿ ನೀಡಿದರು. ದೇಶವು ತನ್ನ ಡಿಜಿಟಲ್ ಆರ್ಥಿಕತೆಯನ್ನು ಒಟ್ಟು ಜಿಡಿಪಿಯ ಶೇ. 4.5ರಿಂದ ಶೇ. 11ಕ್ಕೆ ವಿಸ್ತರಿಸಿದೆ. 2025-26ರ ವೇಳೆಗೆ ಶೇ. 20ಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ಸ್ಪೇಸ್ ಎಕ್ಸ್ ಮತ್ತು ಟೆಸ್ಲಾ ಸಿಇಒ ಎಲಾನ್‌ ಮಸ್ಕ್ ಎರಡೂ ದಿನಗಳ ಸಭೆಯಲ್ಲಿ ಭಾಗವಹಿಸಿದ್ದರು. ಎಐ ಸುರಕ್ಷತೆಯ ಮಹತ್ವವನ್ನು ಒತ್ತಿ ಹೇಳಿದ ಮಸ್ಕ್, ತಾಂತ್ರಿಕ ಪ್ರಗತಿಯ ತ್ವರಿತ ವೇಗದಿಂದಾಗಿ ಇದು ನಿರೀಕ್ಷಿಸಬಹುದಾದ ಅಪಾಯಗಳಲ್ಲಿ ಒಂದಾಗಿದೆ. ಹೀಗಾಗಿ ಇದರತ್ತ ಗಮನ ಹರಿಸಬೇಕು ಎಂದು ಹೇಳಿದರು. ಇದಲ್ಲದೆ ಶೃಂಗಸಭೆಯ ಮುಕ್ತಾಯದ ನಂತರ ಮಸ್ಕ್ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ನಡುವಿನ ಪ್ರಶ್ನೋತ್ತರ ಅಧಿವೇಶನವನ್ನು ಲಂಡನ್‌ನಲ್ಲಿ ನಿಗದಿಪಡಿಸಲಾಗಿತ್ತು.

ಇದನ್ನೂ ಓದಿ: Assault in US: ಅಮೆರಿಕದಲ್ಲಿ ಚೂರಿ ಇರಿತ, ಭಾರತೀಯ ವಿದ್ಯಾರ್ಥಿ ಗಂಭೀರ

ಆಫ್ರಿಕಾದಿಂದ ಪ್ರಾರಂಭಿಸಿ ವಿಶ್ವಾದ್ಯಂತ ಕೃತಕ ಬುದ್ಧಿಮತ್ತೆ ಉಪಕ್ರಮಗಳಿಗೆ ಧನಸಹಾಯವನ್ನು ಇಂಗ್ಲೆಂಡ್‌ ಮತ್ತು ಅದರ ಪಾಲುದಾರ ಕಂಪನಿಗಳು ಘೋಷಿಸಿದವು. ಬ್ರಿಟನ್, ಕೆನಡಾ ಮತ್ತು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಒಳಗೊಂಡ ಈ ಸಹಯೋಗದ ಪ್ರಯತ್ನವು ʼಸುರಕ್ಷಿತ ಮತ್ತು ಜವಾಬ್ದಾರಿಯುತʼ ಎಐ ಪ್ರೋಗ್ರಾಮಿಂಗ್ ಅನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version