Site icon Vistara News

Elon Musk: ಮೋದಿ ಭೇಟಿಗಾಗಿ ಈ ತಿಂಗಳು ಭಾರತಕ್ಕೆ ಬರಲ್ಲ ಎಲಾನ್‌ ಮಸ್ಕ್;‌ ಕೊಟ್ಟ ಕಾರಣ ಇದು

Elon Musk

Elon Musk postpones India visit, cites very heavy Tesla obligations

ವಾಷಿಂಗ್ಟನ್‌: ಎಲೆಕ್ಟ್ರಾನಿಕ್‌ ಕಾರುಗಳ ಉತ್ಪಾದನೆಯ ದೈತ್ಯ ಟೆಸ್ಲಾ ಕಂಪನಿ ಸಿಇಒ ಎಲಾನ್‌ ಮಸ್ಕ್‌ (Elon Musk) ಅವರು ಭಾರತಕ್ಕೆ ಭೇಟಿ ನೀಡುವುದನ್ನು ಮುಂದೂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಭೇಟಿಗಾಗಿ ಭಾರತಕ್ಕೆ ಎಲಾನ್‌ ಮಸ್ಕ್‌ ಅವರು ಏಪ್ರಿಲ್‌ 21 ಹಾಗೂ 22ರಂದು ಆಗಮಿಸಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಎಲಾನ್‌ ಮಸ್ಕ್‌ ಅವರು ಭಾರತದ ಭೇಟಿಯನ್ನು ಮುಂದೂಡಿಕೆ ಮಾಡಿದ್ದಾರೆ.

ಭಾರತದ ಭೇಟಿಯನ್ನು ಮುಂದೂಡಿರುವ ಕುರಿತು ಎಲಾನ್‌ ಮಸ್ಕ್‌ ಅವರೇ ಮಾಹಿತಿ ನೀಡಿದ್ದಾರೆ. “ಟೆಸ್ಲಾ ಕಂಪನಿಯ ಅತಿ ಹೆಚ್ಚು ಜವಾಬ್ದಾರಿಗಳಿರುವ ಕಾರಣ ಭಾರತದ ಭೇಟಿಯನ್ನು ಮುಂದೂಡಲು ಬೇಸರವಾಗುತ್ತಿದೆ. ಆದರೆ, ಇದೇ ವರ್ಷದಲ್ಲಿಯೇ ಭಾರತಕ್ಕೆ ನಾನು ಭೇಟಿ ನೀಡುವುದು ನಿಶ್ಚಿತ” ಎಂದು ಎಲಾನ್‌ ಮಸ್ಕ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

ಎಲಾನ್‌ ಮಸ್ಕ್‌ ಅವರು ಅಮೆರಿಕದಲ್ಲಿ ಏಪ್ರಿಲ್‌ 23ರಂದು ನಡೆಯುವ ಮಹತ್ವದ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲಿದ್ದಾರೆ. ಅವರು ಟೆಸ್ಲಾ ಕಂಪನಿಯ ಮೊದಲ ತ್ರೈಮಾಸಿದಲ್ಲಿ ನಡೆಸಿದ ವಹಿವಾಟು ಕುರಿತು ಮಾಹಿತಿ ಒದಗಿಸಲಿದ್ದಾರೆ. ಇದರ ಜತೆಗೆ ಹಲವು ಸಭೆಗಳು ಕೂಡ ಇರುವುದರಿಂದ ಅವರು ಭಾರತದ ಭೇಟಿಯನ್ನು ಮುಂದೂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮೋದಿ ಭೇಟಿಯ ಅಜೆಂಡಾ ಏನು?

ಭಾರತದಲ್ಲಿ ಟೆಸ್ಲಾ ಕಾರು ಉತ್ಪಾದನೆ ಘಟಕ ಸ್ಥಾಪಿಸಲು ಟೆಸ್ಲಾ ಕಂಪನಿಯು ಹಲವು ವರ್ಷಗಳಿಂದ ಮಾತುಕತೆ ನಡೆಸುತ್ತಲೇ ಇದೆ. ಭಾರತದ ಷರತ್ತುಗಳು, ಟೆಸ್ಲಾ ಘಟಕ ಸ್ಥಾಪಿಸಲು ಮಸ್ಕ್‌ ಹಾಕಿಕೊಂಡಿರುವ ನಿಯಮಗಳಿಂದಾಗಿ ಘಟಕ ಸ್ಥಾಪನೆ ಮುಂದೂಡಿಕೆಯಾಗುತ್ತಲೇ ಇದೆ. ಆದರೆ, ಈ ಬಾರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗುವ ಮೂಲಕ ಘಟಕ ಸ್ಥಾಪನೆಯ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದೇ ಹೇಳಲಾಗುತ್ತಿದೆ. ಹಾಗಾಗಿ, ಎಲಾನ್‌ ಮಸ್ಕ್‌ ಅವರು ಭಾರತಕ್ಕೆ ಭೇಟಿ ನೀಡುರುವುದು ಮಹತ್ವ ಪಡೆದಿದೆ.

ಎಲಾನ್‌ ಮಸ್ಕ್‌ ಅವರು ಕೆಲ ತಿಂಗಳ ಹಿಂದಷ್ಟೇ ಭಾರತದ ಪರವಾಗಿ ಮಾತನಾಡಿದ್ದರು. “ವಿಶ್ವಸಂಸ್ಥೆಯು ಬದಲಾವಣೆ ತರಲು ಹಿಂಜರಿಯುತ್ತಿದೆ. ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವ ಪಡೆದಿರುವ ಬಲಿಷ್ಠ ರಾಷ್ಟ್ರಗಳು ತಾವು ಹೊಂದಿರುವ ಹೆಚ್ಚಿನ ಅಧಿಕಾರವನ್ನು ಬಳಸಿಕೊಳ್ಳಲು ಬಯಸುತ್ತಿವೆ. ಇದೇ ಕಾರಣಕ್ಕಾಗಿ ಆಫ್ರಿಕಾ ಹಾಗೂ ಭಾರತಕ್ಕೆ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಕ್ಕಿಲ್ಲ. ಹಾಗಾಗಿ, ವಿಶ್ವಸಂಸ್ಥೆಯು ನಿಯಮಗಳನ್ನು ಬದಲಿಸಬೇಕು. ಜಗತ್ತಿನಲ್ಲೇ ಭಾರತ ಜನಪ್ರಿಯ ದೇಶವಾದರೂ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಗದಿರುವುದು ಅಸಂಬದ್ಧವಾಗಿದೆ. ಭಾರತ ಹಾಗೂ ಆಫ್ರಿಕಾಗೆ ಕಾಯಂ ಸದಸ್ಯತ್ವ ನೀಡಬೇಕು” ಎಂದು ಎಲಾನ್‌ ಮಸ್ಕ್‌ ಅವರು ಕಳೆದ ಜನವರಿಯಲ್ಲಿ ಆಗ್ರಹಿಸಿದ್ದರು.

ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಿ ಎಂಬ ಮಸ್ಕ್‌ ಆಗ್ರಹಕ್ಕೆ ಅಮೆರಿಕವೂ ಸಾಥ್, ಶೀಘ್ರವೇ ಗುಡ್‌ ನ್ಯೂಸ್?

Exit mobile version