Site icon Vistara News

Jacinda Ardern: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನ್ಯೂಜಿಲ್ಯಾಂಡ್‌ ಮಾಜಿ ಪ್ರಧಾನಿ ಜಸಿಂಡಾ ಆರ್ಡರ್ನ್‌

Jacinda Ardern Marriage

Ex New Zealand PM Jacinda Ardern Marries Partner Clarke Gayford

ವೆಲ್ಲಿಂಗ್ಟನ್:‌ ನ್ಯೂಜಿಲ್ಯಾಂಡ್‌ ಮಾಜಿ ಪ್ರಧಾನಿ ಜಸಿಂಡಾ ಆರ್ಡರ್ನ್‌ (43) (Jacinda Ardern) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ದೀರ್ಘ ಕಾಲದ ಪಾರ್ಟ್‌ನರ್‌ ಕ್ಲಾರ್ಕ್‌ ಗೇಫೋರ್ಡ್‌ (48) (Clarke Gayford) ಅವರೊಂದಿಗೆ ಶನಿವಾರ (ಜನವರಿ 13) ವಿವಾಹವಾಗಿದ್ದಾರೆ. ನ್ಯೂಜಿಲ್ಯಾಂಡ್‌ ರಾಜಧಾನಿ ವೆಲ್ಲಿಂಗ್ಟನ್‌ನಿಂದ 310 ಕಿ.ಮೀ. ದೂರದಲ್ಲಿರುವ ಉತ್ತರ ಐಲ್ಯಾಂಡ್‌ನ (North Island) ಹಾಕೇಸ್‌ ಬೇ ಪ್ರದೇಶದಲ್ಲಿ ನಡೆದ ಸರಳ ಸಮಾರಂಭದಲ್ಲಿ ಜಸಿಂಡಾ ಆರ್ಡರ್ನ್‌ ಹಾಗೂ ಕ್ಲಾರ್ಕ್‌ ಗೇಫೋರ್ಡ್‌ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಜಸಿಂಡಾ ಆರ್ಡರ್ನ್‌ ಹಾಗೂ ಕ್ಲಾರ್ಕ್‌ ಗೇಫೋರ್ಡ್‌ ಅವರು ಕಳೆದ 10 ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ. ಇವರ ಪ್ರೀತಿಗೆ ಸಾಕ್ಷಿಯಾಗಿ ನೇವ್‌ ಎಂಬ ಐದು ವರ್ಷದ ಮಗಳಿದ್ದಾಳೆ. ಭರ್ಜರಿಯಾಗಿಯೇ ಡ್ರೆಸ್‌ ಮಾಡಿಕೊಂಡ ನೇವ್‌, ತಂದೆಯ ಜತೆ ಸಮಾರಂಭಕ್ಕೆ ಆಗಮಿಸಿ, ಮದುವೆಯಲ್ಲಿ ಪಾಲ್ಗೊಂಡಳು. ಹಾಗೆ ನೋಡಿದರೆ, ಜಸಿಂಡಾ ಆರ್ಡರ್ನ್‌ ಹಾಗೂ ಕ್ಲಾರ್ಕ್‌ ಗೇಫೋರ್ಡ್‌ ಅವರು 2022ರಲ್ಲಿಯೇ ಮದುವೆಯಾಗಬೇಕಿತ್ತು. ಆದರೆ, ಆಗ ಜಸಿಂಡಾ ಆರ್ಡರ್ನ್‌ ಅವರು ನ್ಯೂಜಿಲ್ಯಾಂಡ್‌ ಪ್ರಧಾನಿಯಾಗಿದ್ದರು ಹಾಗೂ ಕೊರೊನಾ ನಿರ್ಬಂಧ ವಿಧಿಸಿದ ಕಾರಣ ಮದುವೆಯನ್ನು ಮುಂದೂಡಲಾಗಿತ್ತು.

ಜಸಿಂಡಾ ಆರ್ಡರ್ನ್‌ ಅವರು 2017ರಲ್ಲಿ ನ್ಯೂಜಿಲ್ಯಾಂಡ್‌ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಕೇವಲ 37ನೇ ವಯಸ್ಸಿಗೆ ಪ್ರಧಾನಿ ಹುದ್ದೆಗೇರಿದ ಅವರು, ಇಂತಹ ಸಾಧನೆ ಮಾಡಿದ ವಿಶ್ವದ ಕಿರಿಯ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ, ಜಸಿಂಡಾ ಆರ್ಡರ್ನ್‌ ಅವರು 2023ರ ಜನವರಿಯಲ್ಲಿ ದಿಢೀರನೆ ಪ್ರಧಾನಿ ಹುದ್ದೆಗೆ ರಾಜೀನಾಮೆ ಘೋಷಿಸಿದ್ದರು. “ನಾನು ಇದುವರೆಗೆ ಉತ್ತಮ ಆಡಳಿತ ನೀಡಿದ್ದೇನೆ ಎಂಬ ಸಂತೋಷ ಇದೆ. ಆದರೆ, ಇನ್ನು ಮುಂದೆ ನನ್ನಿಂದ ಉತ್ತಮ ಆಡಳಿತ ನೀಡಲು ಆಗುವುದಿಲ್ಲ ಎಂಬ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದೇನೆ” ಎಂದು ಹೇಳಿದ್ದರು.

ಇದನ್ನೂ ಓದಿ: Ira Khan and Nupur Wedding: ಮಗಳ ಮದುವೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ ಆಮೀರ್ ಖಾನ್

“ನಾನು ರಾಜೀನಾಮೆ ನೀಡಿದ ಬಳಿಕ ನಿಜವಾದ ಕಾರಣ ಏನು ಎಂಬುದರ ಕುರಿತು ತುಂಬ ಚರ್ಚೆ ಆಗುತ್ತದೆ ಎನ್ನುವುದು ಗೊತ್ತು. ಆದರೆ, ನಾನು ಆಡಳಿತ ಮುಂದುವರಿಸಿಕೊಂಡು ಹೋಗಲು ಶಕ್ತಳಲ್ಲ ಎಂದು ಎನಿಸಿದ ಒಂದೇ ಕಾರಣಕ್ಕಾಗಿ ಹುದ್ದೆ ತೊರೆಯುತ್ತೇನೆ” ಎಂಬುದಾಗಿ ಸ್ಪಷ್ಟನೆ ನೀಡಿದ್ದರು. ಕ್ರೈಸ್ಟ್‌ಚರ್ಚ್‌ನಲ್ಲಿರುವ ಎರಡು ಮಸೀದಿಗಳ ಮೇಲೆ 2019ರಲ್ಲಿ ಭೀಕರ ಗುಂಡಿನ ದಾಳಿ ನಡೆದಾಗ ಜಸಿಂಡಾ ಆರ್ಡರ್ನ್‌ ಅವರು ಆ ಪ್ರಕರಣವನ್ನು ನಿಭಾಯಿಸಿದ ರೀತಿಗೆ ಜಾಗತಿಕ ಮಾನ್ಯತೆ ಗಳಿಸಿದ್ದರು. ಇವರ ಪತಿ ಕ್ಲಾರ್ಕ್‌ ಗೇಫೋರ್ಡ್‌ ಅವರು ಟಿವಿ ನಿರೂಪಕರಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version