ಇಸ್ಲಾಮಾಬಾದ್: ಪಾಕಿಸ್ತಾನದ ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮಂಗಳವಾರ ತಮ್ಮ ಪತ್ನಿ ಬುಶ್ರಾ ಬೀಬಿ (Bushra Bibi) ಅವರನ್ನು ತಮ್ಮ ಖಾಸಗಿ ನಿವಾಸದಲ್ಲಿ ಬಂಧಿಸಿದ್ದಾಗ ವಿಷಪ್ರಾಶನ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 190 ಮಿಲಿಯನ್ ಪೌಂಡ್ ತೋಷಾಖಾನಾ ಭ್ರಷ್ಟಾಚಾರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ನಾಯಕರಾಗಿರುವ ಇಮ್ರಾನ್ ಖಾನ್, ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ಅವರ ಮುಂದೆ ತಮ್ಮ ಪತ್ನಿಗೆ ವಿಷ ನೀಡಲು ಪ್ರಯತ್ನಿಸಲಾಗಿದೆ ಎಂದು ಹೇಳಿದರು. ವಿಷದ ಅಡ್ಡಪರಿಣಾಮವಾಗಿ ಅವರ ಚರ್ಮ ಮತ್ತು ನಾಲಿಗೆಯ ಮೇಲೆ ಗುರುತುಗಳಿವೆ ಎಂದು ಹೇಳಿದ್ದಾರೆ.
ಇದರ ಹಿಂದೆ ಯಾರಿದ್ದಾರೆಂದು ನನಗೆ ತಿಳಿದಿದೆ ಎಂಬ 71 ವರ್ಷದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಸಂಸ್ಥಾಪಕ ಹೇಳಿಕೆ ಉಲ್ಲೇಖಿಸಿ ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ಬುಶ್ರಾ ಬೀಬಿಗೆ ಯಾವುದೇ ಹಾನಿ ಸಂಭವಿಸಿದರೆ ಪಾಕಿಸ್ತಾನ ಸೇನಾ ಮುಖ್ಯಸ್ಥ (ಜನರಲ್ ಅಸಿಮ್ ಮುನೀರ್) ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಏಕೆಂದರೆ ಗುಪ್ತಚರ ಸಂಸ್ಥೆಯ ಸದಸ್ಯರು ಇಸ್ಲಾಮಾಬಾದ್ನ ಬನಿ ಗಾಲಾ ನಿವಾಸ ಮತ್ತು ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
49 ವರ್ಷದ ಬುಶ್ರಾ ಬೀಬಿಯನ್ನು ಶೌಕತ್ ಖಾನುಮ್ ಆಸ್ಪತ್ರೆಯ ಡಾ.ಅಸೀಮ್ ಅವರಿಂದ ವೈದ್ಯಕೀಯ ಪರೀಕ್ಷೆಗೆ ಆದೇಶಿಸುವಂತೆ ಇಮ್ರಾನ್ ಖಾನ್ ನ್ಯಾಯಾಲಯವನ್ನು ಒತ್ತಾಯಿಸಿದರು.
ಇದನ್ನೂ ಓದಿ: Rajya Sabha : ಮನಮೋಹನ್ ಸಿಂಗ್ ಸೇರಿ 54 ಸದಸ್ಯರು ರಾಜ್ಯಸಭೆಯಿಂದ ನಿವೃತ್ತಿ, ಇನ್ಯಾರೆಲ್ಲ ಇದ್ದಾರೆ?
ಬುಶ್ರಾ ಬೀಬಿಯ ವಿಷಪ್ರಾಶನದ ವಿಷಯದ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು. ಮಾಜಿ ಪ್ರಧಾನಿಯ ಮನವಿಯ ನಂತರ, ಮಾಜಿ ಪ್ರಥಮ ಮಹಿಳೆಯ ವೈದ್ಯಕೀಯ ಪರೀಕ್ಷೆಯ ಬಗ್ಗೆ ವಿವರವಾದ ಅರ್ಜಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಇಮ್ರಾನ್ ಖಾನ್ ಅವರಿಗೆ ನಿರ್ದೇಶನ ನೀಡಿತು.
ವಿಚಾರಣೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬುಶ್ರಾ ಬೀಬಿ, ತಾನು “ಅಮೇರಿಕನ್ ಏಜೆಂಟ್” ಎಂಬ ವದಂತಿಗಳು ಪಕ್ಷದಲ್ಲಿ ಹರಿದಾಡುತ್ತಿವೆ. ಕ್ಲೀನರ್ ಮೂಲಕ ತನಗೆ ವಿಷ ನೀಡಲಾಗಿದೆ ಎಂದು ಹೇಳಿದರು.
ಟಾಯ್ಲೆಟ್ ಕ್ಲೀನರ್ನ “ಮೂರು ಹನಿಗಳನ್ನು” ತನ್ನ ಆಹಾರದಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿದರು. ಒಂದು ತಿಂಗಳ ಸೇವನೆಯ ನಂತರ ವ್ಯಕ್ತಿಯ ಆರೋಗ್ಯವು ಹದಗೆಡುತ್ತದೆ ಎಂದು ಹೇಳಿದ್ದಾರೆ.
ಉಬ್ಬಿಕೊಂಡ ಕಣ್ಣುಗಳು
ನನ್ನ ಕಣ್ಣುಗಳು ಉಬ್ಬಿಕೊಳ್ಳುತ್ತವೆ, ನನ್ನ ಎದೆ ಮತ್ತು ಹೊಟ್ಟೆಯಲ್ಲಿ ನೋವು ಅನುಭವಿಸುತ್ತೇನೆ. ಆಹಾರ ಮತ್ತು ನೀರು ಸಹ ಕಹಿಯಾಗುತ್ತಿದೆ. ಈ ಹಿಂದೆ ಜೇನುತುಪ್ಪದಲ್ಲಿ ಕೆಲವು ಅನುಮಾನಾಸ್ಪದ ವಸ್ತುವನ್ನು ಬೆರೆಸಲಾಗಿತ್ತು ಮತ್ತು ಈಗ ಟಾಯ್ಲೆಟ್ ಕ್ಲೀನರ್ ಅನ್ನು ನನ್ನ ಆಹಾರದಲ್ಲಿ ಬೆರೆಸಲಾಗಿದೆ ಎಂದು ಬೀಬಿ ಹೇಳಿದ್ದಾರೆ.
ಜೈಲಿನಲ್ಲಿ ಯಾರೋ ಒಬ್ಬರು ನನ್ನ ಆಹಾರದಲ್ಲಿ ಏನು ಸೇರಿಸಲಾಗಿದೆ ಎಂದು ನನಗೆ ಹೇಳಿದರು. ನಾನು ಯಾವುದೇ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಅವರು ಹೇಳಿದರು. ಬನಿ ಗಾಲಾ ಉಪ ಕಾರಾಗೃಹದಲ್ಲಿ ತನ್ನನ್ನು ಸಭ್ಯವಾಗಿ ಇರಿಸಲಾಗಿದೆ ಎಂದು ಬುಶ್ರಾ ಬೀಬಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು ಆದರೆ ಸ್ವಲ್ಪ ಸಮಯದವರೆಗೆ ಕಿಟಕಿಗಳನ್ನು ತೆರೆಯಲು ಅವಕಾಶ ನೀಡಲಿಲ್ಲ ಎಂದು ಹೇಳಿದರು.