ನವದೆಹಲಿ: ಬ್ರಿಟನ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರಾನ್ (UK former PM David Cameron) ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಹಿಂದಿರುಗುತ್ತಿದ್ದಾರೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್ (UK PM Rishi Sunak) ಅವರು, ಡೇವಿಡ್ ಕ್ಯಾಮರಾನ್ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ (Foreign Secretary) ನೇಮಕ ಮಾಡಿದ್ದಾರೆ. ಕ್ಯಾಮರಾನ್ ಅವರು 2010ರಿಂದ 2016ರವರೆಗೆ ಬ್ರಿಟನ್ ನಾಯಕರಾಗಿದ್ದರು. ಬ್ರೆಕ್ಸಿಟ್ ಜನಾಭಿಪ್ರಾಯದ ಗದ್ದಲದ ನಡುವೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜೇಮ್ಸ್ ಕ್ಲೇವರ್ಲೀ ಜಾಗಕ್ಕೆ ಕ್ಯಾಮರಾನ್ ಅವರನ್ನು ನೇಮಕ ಮಾಡಲಾಗಿದೆ.
ಈ ಮಧ್ಯೆ, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಸಂಪುಟದ ಸದಸ್ಯೆ ಸುವೆಲ್ಲಾ ಬ್ರೇವರ್‌ಮನ್ (Suella Braverman) ಅವರನ್ನು ವಜಾಗೊಳಿಸಿದ್ದಾರೆ. ಸುವೆಲ್ಲಾ ಬ್ರೇವರ್‌ಮನ್ ಅವರು ಸುನಕ್ ಸಂಪುಟದ ಹಿರಿಯ ಸಚಿವೆಯಾಗಿದ್ದರು. ರಿಷಿ ಸುನಕ್ (Rishi Sunak) ಹಾಗೂ ಸುವೆಲ್ಲಾ ಬ್ರೇವರ್‌ಮನ್ ಅವರು ಭಾರತ ಮೂಲದವರಾಗಿದ್ದು, ಇಬ್ಬರ ಮಧ್ಯೆ ಆತ್ಮೀಯತೆ ಇತ್ತು. ಆದರೀಗ, ಸುವೆಲ್ಲಾ ಬ್ರೇವರ್‌ಮನ್ ವಿರುದ್ಧ ಬ್ರಿಟನ್‌ನಲ್ಲಿ ಪ್ರತಿಭಟನೆ ನಡೆಯುತ್ತಿರುವ ಕಾರಣ ಸಂಪುಟದಿಂದ ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಬ್ರಿಟನ್‌ನ ಹಲವೆಡೆ ಪ್ಯಾಲೆಸ್ತೀನ್ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಸುವೆಲ್ಲಾ ಬ್ರೇವರ್‌ಮನ್ ಅವರು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ, ಸುವೆಲ್ಲಾ ಬ್ರೇವರ್‌ಮನ್ ವಿರುದ್ಧ ಬ್ರಿಟನ್‌ನ ಕೆಲವೆಡೆ ಭಾರಿ ಪ್ರಮಾಣದಲ್ಲಿ ಪ್ರತಿಭಟನೆಗಳು ಕೂಡ ನಡೆದಿದ್ದವು. ರಿಷಿ ಸುನಕ್ ಅವರ ಮೇಲೆ ಒತ್ತಡ ಹೇರಲಾಗಿತ್ತು. ಹಾಗಾಗಿ ರಿಷಿ ಸುನಕ್ ಅವರು ಸುವೆಲ್ಲಾ ಬ್ರೇವರ್‌ಮನ್ ಅವರನ್ನು ವಜಾಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸುವೆಲ್ಲಾ ಬ್ರೇವರ್‌ಮನ್ ಹೇಳಿದ್ದೇನು?
ಆರ್ಮಿಸ್ಟೈಸ್ ಡೇ ಹಿನ್ನೆಲೆಯಲ್ಲಿ ಶನಿವಾರ (ನವೆಂಬರ್ 11) ಪ್ಯಾಲೆಸ್ತೀನ್ ಪರವಾಗಿ ಲಂಡನ್ ಸೇರಿ ಹಲವೆಡೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇದರ ಕುರಿತು ಪತ್ರಿಕೆಯಲ್ಲಿ ಲೇಖನ ಬರೆದಿದ್ದ ಸುವೆಲ್ಲಾ ಬ್ರೇವರ್‌ಮನ್ ಅವರು ಪೊಲೀಸರ ನಡೆಯನ್ನು ಟೀಕಿಸಿದ್ದರು. “ಲಂಡನ್ ಸೇರಿ ಹಲವೆಡೆ ಬಲಪಂಥೀಯ ಪ್ರತಿಭಟನೆಗಳು ತೀವ್ರಗೊಂಡಿವೆ. ಪ್ರತಿಭಟನಾಕಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗುತ್ತಿಲ್ಲ. ಲಂಡನ್ ಪೊಲೀಸರು ಕೂಡ ಪ್ರತಿಭಟನಾಕಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಧೈರ್ಯ ಮಾಡುತ್ತಿಲ್ಲ” ಎಂದು ಬರೆದಿದ್ದರು. ಆ ಮೂಲಕ ಕ್ರಮ ತೆಗೆದುಕೊಳ್ಳುವಂತೆ ರಿಷಿ ಸುನಕ್ ಅವರ ಮೇಲೆ ಒತ್ತಡ ಹೇರಿದ್ದರು.
ಲಂಡನ್ ಪೊಲೀಸರ ದಕ್ಷತೆ ಕುರಿತು ಸುವೆಲ್ಲಾ ಬ್ರೇವರ್‌ಮನ್ ಅವರ ಲೇಖನ ಪ್ರಕಟವಾದ ಬಳಿಕ ಭಾರಿ ವಿವಾದ ಸೃಷ್ಟಿಯಾಗಿತ್ತು. ಪ್ರತಿಭಟನೆಗಳಿಗೆ ಜಗ್ಗದ ರಿಷಿ ಸುನಕ್ ಅವರು, “ಸುವೆಲ್ಲಾ ಬ್ರೇವರ್‌ಮನ್ ಮೇಲೆ ನಮಗೆ ವಿಶ್ವಾಸವಿದೆ” ಎಂದಿದ್ದರು. ಆದರೆ, ಪ್ರತಿಭಟನೆ ಹಾಗೂ ಒತ್ತಡಗಳಿಂದಾಗಿ ಸುವೆಲ್ಲಾ ಬ್ರೇವರ್‌ಮನ್ ಅವರನ್ನು ಸಂಪುಟದಿಂದ ವಜಾಗೊಳಿಸಲಾಗಿದೆ. ಬ್ರಿಟನ್ ರಾಜಕೀಯದಲ್ಲಿ ಕಳೆದ ವರ್ಷ ಏರುಪೇರಾದಾಗ ಸುವೆಲ್ಲಾ ಬ್ರೇವರ್‌ಮನ್ ಅವರು ಕೂಡ ಪ್ರಧಾನಿ ಹುದ್ದೆಯ ರೇಸ್‌ನಲ್ಲಿದ್ದರು.
ಈ ಸುದ್ದಿಯನ್ನೂ ಓದಿ: Deepavali 2023: ಮೋದಿ ಪರವಾಗಿ ರಿಷಿ ಸುನಕ್‌ಗೆ ದೀಪಾವಳಿ ಶುಭಾಶಯ ಕೋರಿದ ಜೈಶಂಕರ್