Site icon Vistara News

Fire Accident: ಕುವೈತ್‌ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ದುರಂತ; ಕೇರಳದ ಒಂದೇ ಕುಟುಂಬದ ನಾಲ್ವರ ಸಾವು

Fire Accident

Family of 4 from Kerala killed in fire accident at their apartment in Kuwait

ಕುವೈತ್‌ ಸಿಟಿ: ಕುವೈತ್‌ ನಗರದಲ್ಲಿರುವ ಅಪಾರ್ಟ್‌ಮೆಂಟ್‌ ಒಂದರಲ್ಲಿ ಶುಕ್ರವಾರ (ಜುಲೈ 19) ರಾತ್ರಿ ಭೀಕರ ಅಗ್ನಿ ದುರಂತ (Fire Accident) ಸಂಭವಿಸಿದ್ದು, ಕೇರಳ ಮೂಲದ, ಒಂದೇ ಕುಟುಂಬದ (Kerala Family) ನಾಲ್ವರು ಸದಸ್ಯರು ಮೃತಪಟ್ಟಿದ್ದಾರೆ. ಕುವೈತ್‌ ರಾಜಧಾನಿಯಲ್ಲಿರುವ (Kuwait City) ಅಪಾರ್ಟ್‌ಮೆಂಟ್‌ನಲ್ಲಿ ಕೇರಳದ ಪತಿ, ಪತ್ನಿ ಹಾಗೂ ಆ ದಂಪತಿಯ ಇಬ್ಬರು ಮಕ್ಕಳು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಅಗ್ನಿ ದುರಂತದಲ್ಲಿ ಮ್ಯಾಥ್ಯೂಸ್‌ ಮುಳಕ್ಕಲ್‌, ಅವರ ಪತ್ನಿ ಲಿನಿ ಅಬ್ರಾಹಂ ಹಾಗೂ ಅವರ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇವರು ಕೇರಳದ ಆಲಪ್ಪುಳ ಜಿಲ್ಲೆಯ ನೀರಟ್ಟುಪುರಂ ನಿವಾಸಿಗಳಾಗಿದ್ದು, ಕುವೈತ್‌ ಸಿಟಿಯಲ್ಲಿ ವಾಸವಿದ್ದರು. ನಾಲ್ವರೂ ರಜೆಯ ಹಿನ್ನೆಲೆಯಲ್ಲಿ ಕೇರಳಕ್ಕೆ ಆಗಮಿಸಿದ್ದರು. ರಜೆ ಮುಗಿಸಿಕೊಂಡು ಕುವೈತ್‌ಗೆ ಹೋದ ದಿನವೇ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ದುರಂತ ಸಂಭವಿಸಿದೆ. ದುರಂತದಲ್ಲಿ ನಾಲ್ವರೂ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ.

ಅಬ್ಬಾಸಿಯಾ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯ ಫ್ಲ್ಯಾಟ್‌ನಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದೆ. ಏರ್‌ ಕಂಡಿಷನರ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌ ಆಗಿ ಬೆಂಕಿ ಹೊತ್ತಿಕೊಂಡಿದೆ. ಇದಾದ ಬಳಿಕ ಉಸಿರುಗಟ್ಟಿ ನಾಲ್ವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮ್ಯಾಥ್ಯೂಸ್‌ ಮುಳಕ್ಕಲ್‌ ಅವರು ರಾಯಿಟರ್ಸ್‌ ನ್ಯೂಸ್‌ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಅವರ ಪತ್ನಿಯು ಅದಾನ್‌ ಎಂಬ ಆಸ್ಪತ್ರೆಯಲ್ಲಿ ಸ್ಟಾಫ್‌ ನರ್ಸ್‌ ಆಗಿದ್ದರು. ಇಬ್ಬರು ಮಕ್ಕಳು ಶಾಲೆಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

ದುರಂತದ ಹಿನ್ನೆಲೆಯಲ್ಲಿ ಕುವೈತ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಯು ಸಂತಾಪ ವ್ಯಕ್ತಪಡಿಸಿದೆ. “ಕುವೈತ್‌ ನಗರದಲ್ಲಿ ಅಗ್ನಿ ದುರಂತದಿಂದ ಮ್ಯಾಥ್ಯೂಸ್‌ ಮುಳಕ್ಕಲ್‌, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿರುವ ಸುದ್ದಿಯು ಆಘಾತಕಾರಿಯಾಗಿದೆ. ನಾಲ್ವರ ಶವಗಳನ್ನು ಭಾರತಕ್ಕೆ ಕಳುಹಿಸುವ ದಿಸೆಯಲ್ಲಿ ರಾಯಭಾರ ಕಚೇರಿಯು ನಿರಂತರವಾಗಿ ಪ್ರಯತ್ನಿಸುತ್ತಿದೆ” ಎಂದು ರಾಯಭಾರ ಕಚೇರಿಯು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ.

ಕಳೆದ ತಿಂಗಳು 45 ಮಂದಿ ಸಾವು

ಕುವೈತ್‌ನ ಮಂಗಾಫ್ ನಗರದಲ್ಲಿರುವ ಆರು ಮಹಡಿಯ ಬೃಹತ್‌ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಭಾರತದ 45 ಮಂದಿ ಮೃತಪಟ್ಟಿದ್ದರು. ಆರು ಮಹಡಿಯ ಕಟ್ಟಡದ ಅಡುಗೆ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬಳಿಕ ಇಡೀ ಕಟ್ಟಡಕ್ಕೆ ಆವರಿಸಿದೆ. ಇದರಿಂದಾಗಿ 45 ಭಾರತೀಯರು ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದರು. ಇದಾದ ಬಳಿಕ ಭಾರತೀಯರ ಶವಗಳನ್ನು ಕುವೈತ್‌ನಿಂದ ಭಾರತಕ್ಕೆ ರವಾನಿಸಲಾಗಿತ್ತು.

ಇದನ್ನೂ ಓದಿ: Kuwait Emir : ಕೊಲ್ಲಿ ರಾಷ್ಟ್ರ ಕುವೈತ್ ಗೆ ಹೊಸ ರಾಜನ ನೇಮಕ

Exit mobile version