ನ್ಯೂಯಾರ್ಕ್: 1962ರಲ್ಲಿ ತಯಾರಾದ ಕೆಂಪು ಬಣ್ಣದ ಫೆರಾರಿ 250 ಜಿಟಿಒ (Ferrari 250 GTO) ಕಾರು ಹರಾಜಿನಲ್ಲಿ ಬರೋಬ್ಬರಿ 51.7 ಮಿಲಿಯನ್ ಡಾಲರ್ ಅಂದರೆ ಸುಮಾರು 430 ಕೋಟಿ ರೂ.ಗೆ ಮಾರಾಟವಾಗಿದೆ. ನ್ಯೂಯಾರ್ಕ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಇಷ್ಟು ದುಬಾರಿ ಮೊತ್ತ ಕೂಗುವ ಮೂಲಕ ಅಪರೂಪದ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.
ಎರಡನೇ ದುಬಾರಿ ಹರಾಜು
ವಿಶೇಷ ಎಂದರೆ ಎರಡನೇ ಅತೀ ದುಬಾರಿ ಮೊತ್ತಕ್ಕೆ ಮಾರಾಟವಾದ ಕಾರು ಇದು ಎನ್ನುವ ಅಪರೂಪದ ದಾಖಲೆಗೆ ಪಾತ್ರವಾಗಿದೆ. ಐಷಾರಾಮಿ ಕಾರುಗಳ ಅಂಗಸಂಸ್ಥೆಯಾದ ಆರ್.ಎಂ. ಸೋಥೆಬಿಸ್ 250 ಜಿಟಿಒಗೆ 60 ಮಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೊತ್ತವನ್ನು ಸಿಗುವ ನಿರೀಕ್ಷೆ ಇಟ್ಟುಕೊಂಡಿತ್ತು. ಸ್ವಲ್ಪ ಕಡಿಮೆ ಮೊತ್ತಕ್ಕೆ ಮಾರಾಟವಾದರೂ ದೊಡ್ಡ ವ್ಯತ್ಯಾಸ ಇಲ್ಲದಿರುವುದು ಸಮಾಧಾನ ತಂದಿದೆ ಎಂದು ಮೂಲಗಳು ತಿಳಿಸಿವೆ.
ಇಟಲಿ ಮತ್ತು ಸಿಸಿಲಿಯಲ್ಲಿ ಟ್ರ್ಯಾಕ್‌ಗಳನ್ನು ಅಲಂಕರಿಸಿದ ನಂತರ ಈ ಕಾರು 1960ರ ದಶಕದ ಉತ್ತರಾರ್ಧದಲ್ಲಿ ಅಟ್ಲಾಂಟಿಕ್ ಪ್ರಯಾಣವನ್ನು ಪ್ರಾರಂಭಿಸಿತ್ತು. ಬಳಿಕ ಬದಲಾವಣೆಗೆ ಒಳಗಾದ 250 ಜಿಟಿಒ 1985ರಲ್ಲಿ ಓಹಿಯೋ ಮೂಲದ ಸಂಗ್ರಾಹಕರ ಕೈ ಸೇರುವ ಮುನ್ನ ಹಲವು ಅಮೆರಿಕನ್ ಮಾಲಕರ ಒಡೆತನದಲ್ಲಿತ್ತು. ಸುಮಾರು ನಾಲ್ಕು ದಶಕಗಳ ನಂತರ ಅದನ್ನು ಸೋಮವಾರ (ನವೆಂಬರ್ 13) ಮತ್ತೆ ಮಾರುಕಟ್ಟೆಗೆ ತರಲಾಗಿತ್ತು.
ಕಾರಿಗಿಂತ ಹೆಚ್ಚು
ಫೆರಾರಿ 250 ಜಿಟಿಒ ಕಾರಿಗಿಂತ ವಿಶೇಷವಾದುದು ಎಂದು ಸೋಥೆಬಿಸ್ ಹರಾಜು ಸಂಸ್ಥೆ ವಿವರಿಸಿದೆ. ಇದು ಶ್ರೀಮಂತ ಮತ್ತು ಅಂತಸ್ತಿನ ಇತಿಹಾಸದ ಮತ್ತೊಂದು ಅಧ್ಯಾಯ ಎಂದು ಕರೆದಿದೆ. 2022ರಲ್ಲಿ 135 ಮಿಲಿಯನ್ ಡಾಲರ್ (ಸಾವಿರದ ನೂರ ಇಪ್ಪತ್ತೊಂದು ಕೋಟಿ ರೂ.)ಗೆ ಹರಾಜಾದ ಮರ್ಸಿಡಿಸ್ 300 ಎಸ್.ಎಲ್.ಆರ್.ಉಹ್ಲೆನ್ ಹೌಟ್ ಕೂಪೆ ಅತ್ಯಂತ ಹೆಚ್ಚಿನ ಮೌಲ್ಯಕ್ಕೆ ಮಾರಾಟವಾದ ಕಾರು ಎನ್ನುವ ಹೆಗ್ಗಳಿಕೆ ಪಡೆದಿದೆ ಎಂದು ಹರಾಜು ಸಂಸ್ಥೆ ತಿಳಿಸಿದೆ. ಜರ್ಮನ್ ತಯಾರಕರ ವಸ್ತು ಸಂಗ್ರಹಾಲಯದಲ್ಲಿ ನಡೆದ ಗೌಪ್ಯ ಹರಾಜಿನಲ್ಲಿ ಇದು ಮಾರಾಟವಾಗಿತ್ತು. ಇದು ಹರಾಜಿನಲ್ಲಿ ಅಥವಾ ಖಾಸಗಿಯಾಗಿ ಜಾಗತಿಕವಾಗಿ ಮಾರಾಟವಾದ ಅತ್ಯಂತ ದುಬಾರಿ ಕಾರು ಎಂದು ಮೂಲಗಳು ತಿಳಿಸಿವೆ.
ಇಟಾಲಿಯನ್ ಮುಖ್ಯಭೂಮಿ ಮತ್ತು ಸಿಸಿಲಿಯಲ್ಲಿ ಹಲವಾರು ವರ್ಷಗಳ ಸ್ಪರ್ಧೆಯ ನಂತರ, ಈ ಕಾರನ್ನು 1960ರ ದಶಕದ ಉತ್ತರಾರ್ಧದಲ್ಲಿ ಅಮೆರಿಕಾಕ್ಕೆ ಮಾರಾಟ ಮತ್ತು ರಫ್ತು ಮಾಡಲಾಯಿತು. ಈ ಹರಾಜು ಮಾರುಕಟ್ಟೆಯು ಚೀನಾ ಮತ್ತು ಏಷ್ಯಾದಿಂದ ನಡೆಸಲ್ಪಡುತ್ತದೆ ಮತ್ತು ಉದ್ವಿಗ್ನ ಅಂತಾರಾಷ್ಟ್ರೀಯ ಸನ್ನಿವೇಶದ ಇದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Titanic: ಬರೋಬ್ಬರಿ 84.5 ಲಕ್ಷ ರೂ.ಗೆ ಹರಾಜಾಯ್ತು ಟೈಟಾನಿಕ್‌ನ ಅಂತಿಮ ಭೋಜನ ಮೆನು!
“ಹಣಕಾಸು ಮಾರುಕಟ್ಟೆಗಳಲ್ಲಿ ಏನೇ ಆಗಲಿ; ಇಲ್ಲಿ ಸಮಸ್ಯೆಯಾಗುವುದಿಲ್ಲ. ಇದೀಗ ಈ ಕಾರು ಸಂಗ್ರಾಹಕರ ಕೈ ಸೇರಲಿದೆ. ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ದೊರೆಯುವ ಅವಕಾಶ ಇದಾಗಿದೆ” ಎಂದು ಆರ್.ಎಂ.ಸೋಥೆಬಿಸ್‌ನ ಮೈಕೆಲ್ ಕೈಮಾನೊ ಮಾರಾಟಕ್ಕೆ ಮೊದಲು ತಿಳಿಸಿದ್ದರು. ಫೆರಾರಿ ಕಾರನ್ನು “ಸ್ಪರ್ಶಿಸಬಹುದಾದ, ಅನುಭವಿಸಬಹುದಾದ ಮತ್ತು ಕೇಳಬಹುದಾದ ಕಲಾಕೃತಿ”ಗೆ ಅವರು ಹೋಲಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ