Site icon Vistara News

Execution in US: ನೈಟ್ರೋಜನ್‌ ಅನಿಲ ಬಳಸಿ ಅಮೆರಿಕದಲ್ಲಿ ಮೊದಲ ಮರಣದಂಡನೆ

execution through nitrogen gas

ನ್ಯೂಯಾರ್ಕ್‌: ಅಮೆರಿಕದ ಅಲಬಾಮಾ ರಾಜ್ಯದಲ್ಲಿ ಗುರುವಾರ ನೈಟ್ರೋಜನ್ ಅನಿಲವನ್ನು ಬಳಸಿ ಒಬ್ಬ ಅಪರಾಧಿ ಕೊಲೆಗಾರನನ್ನು ಮೊದಲ ಬಾರಿಗೆ ಮರಣದಂಡನೆಗೆ (Nitrogen Gas Execution in US) ಒಳಪಡಿಸಲಾಗಿದೆ.

ಈಗ ಸಾಮಾನ್ಯವಾಗಿ ಅಮೆರಿಕದಲ್ಲಿ ಮರಣದಂಡನೆಗೆ ಬಳಸುವ ವಿಧಾನವೆಂದರೆ ಮಾರಣಾಂತಿಕ ವಿಷದ ಚುಚ್ಚುಮದ್ದು (Lethal Injection). ಇದೇ ಮೊದಲ ಬಾರಿಗೆ ಹೊಸ ವಿಧಾನ ಬಳಸಲಾಗಿದೆ. ಕೆನ್ನೆತ್ ಯುಜೀನ್ ಸ್ಮಿತ್ ಎಂಬ ಕೊಲೆ ಅಪರಾಧಿಯನ್ನು ಅಲಬಾಮಾದ ಹಾಲ್ಮನ್ ಜೈಲಿನಲ್ಲಿ ನೈಟ್ರೋಜನ್ ಹೈಪೋಕ್ಸಿಯಾದ (Nitrogen hypoxia) ಮೂಲಕ ಕೊಲ್ಲಲಾಗಿದೆ.

ಒಕ್ಲಹೋಮ, ಮಿಸ್ಸಿಸ್ಸಿಪ್ಪಿ ಮತ್ತು ಅಲಬಾಮಾಗಳು ಸಾರಜನಕ ಅನಿಲದಿಂದ ಮರಣದಂಡನೆಯ ವಿಧಾನವನ್ನು ಅನುಮೋದಿಸಿರುವ ಅಮೆರಿಕದ ಮೂರು ರಾಜ್ಯಗಳಾಗಿವೆ. 1999ರಲ್ಲಿ ಹೈಡ್ರೋಜನ್ ಸೈನೈಡ್ ಅನಿಲವನ್ನು ಬಳಸಿಕೊಂಡು ಒಬ್ಬ ಅಪರಾಧಿಗೆ ಮರಣದಂಡನೆ ವಿಧಿಸಲಾಗಿತ್ತು.

ಇದು ಹೇಗೆ ಕೆಲಸ ಮಾಡುತ್ತದೆ?

ʼನೈಟ್ರೋಜನ್ ಹೈಪೋಕ್ಸಿಯಾʼ ಎಂದರೆ ವ್ಯಕ್ತಿಯನ್ನು ಸಾರಜನಕ ಅನಿಲ ಬಳಸಿ ಉಸಿರುಗಟ್ಟುವಂತೆ ಮಾಡುವುದು. ಇದು ದೈಹಿಕ ಕಾರ್ಯಗಳನ್ನು ನಿರ್ವಹಿಸಲು ಅಗತ್ಯವಾದ ಆಮ್ಲಜನಕ ಸಂಪೂರ್ಣವಾಗಿ ವ್ಯಕ್ತಿಗೆ ಅಲಭ್ಯವಾಗುವಂತೆ ಮಾಡುತ್ತದೆ. ಈ ವಿಧಾನದಲ್ಲಿ ಕೈದಿಗಳ ಮುಖದ ಮೇಲೆ ನೈಟ್ರೋಜನ್‌ ಮಾಸ್ಕ್‌ ಅನ್ನು ಇರಿಸಲಾಗುತ್ತದೆ. ಆಮ್ಲಜನಕದ ಬದಲಿಗೆ ಶುದ್ಧ ಸಾರಜನಕವನ್ನು ವ್ಯಕ್ತಿಯ ಶ್ವಾಸಕೋಶಕ್ಕೆ ಪಂಪ್ ಮಾಡಲಾಗುತ್ತದೆ.

ಸ್ಮಿತ್‌ನ ಮರಣದಂಡನೆಯು ಸುಮಾರು 22 ನಿಮಿಷ ತೆಗೆದುಕೊಂಡಿತು. ಆತ ಹಲವಾರು ನಿಮಿಷ ಪ್ರಜ್ಞಾಪೂರ್ವಕವಾಗಿಯೇ ಇದ್ದ. ಎರಡರಿಂದ ನಾಲ್ಕು ನಿಮಿಷ ಕಾಲ ಆತ ಒದ್ದಾಡಿದ. ಸುಮಾರು ಐದು ನಿಮಿಷ ಭಾರವಾದ ಉಸಿರಾಟ ನಡೆಸಿದ. ಅವನ ಹೆಂಡತಿ, ಇತರ ಕೆಲವು ಸಂಬಂಧಿಕರು ಮತ್ತು ಐವರು ಪತ್ರಕರ್ತರು ಮರಣದಂಡನೆಗೆ ಸಾಕ್ಷಿಯಾಗಿದ್ದರು. “ಇಂದು ಅಲಬಾಮಾ ಮಾನವೀಯತೆಯಲ್ಲಿ ಒಂದು ಹೆಜ್ಜೆ ಹಿಂದಕ್ಕೆ ಇಟ್ಟಿದೆ” ಎಂದು ಅಪರಾಧಿ ಸ್ಮಿತ್‌ ತನ್ನ ಕೊನೆಯ ಸಂದೇಶದಲ್ಲಿ ಹೇಳಿದ್ದಾನೆ ಎಂದು ವರದಿಯಾಗಿದೆ.

ಅಪರಾಧ ಮತ್ತು ಶಿಕ್ಷೆಯ ತಜ್ಞರು ಮರಣದಂಡನೆಯ ಈ ವಿಧಾನವನ್ನು “ಮಾನವ ಪ್ರಯೋಗ” ಎಂದು ಕರೆದಿದ್ದಾರೆ. ವೈದ್ಯಕೀಯ ವೃತ್ತಿಪರರು ಮತ್ತು ಮಾನವ ಹಕ್ಕುಗಳ ವಕೀಲರು ಇದನ್ನು ವಿರೋಧಿಸಿದ್ದಾರೆ. ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯು ಈ ವಿಧಾನವನ್ನು ಕೈಬಿಡುವಂತೆ ಅಲಬಾಮಾವನ್ನು ಒತ್ತಾಯಿಸಿತ್ತು.

ಮಧ್ಯಪ್ರವೇಶಿಸಿ ಶಿಕ್ಷೆ ತಡೆಯುವಂತೆ ಸ್ಮಿತ್ ಮಾಡಿದ ಕೊನೆಯ ಮನವಿಯನ್ನು ಅಮೆರಿಕ ಉನ್ನತ ನ್ಯಾಯಾಲಯವು ತಿರಸ್ಕರಿಸಿತು. ನ್ಯಾಯಾಲಯದ ಮೂವರು ಉದಾರವಾದಿ ನ್ಯಾಯಮೂರ್ತಿಗಳು ಕೂಡ ನ್ಯಾಯಾಲಯದ ಆದೇಶದಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದರಾದರೂ, ಶಿಕ್ಷೆ ನಿರಾಕರಿಸುವಲ್ಲಿ ಬಹುಮತ ಹೊಂದಲಿಲ್ಲ. ಅಲಬಾಮಾ ರಾಜ್ಯಾಡಳಿತ ಮರಣದಂಡನೆಯ ಈ ವಿಧಾನವನ್ನು ಸಮರ್ಥಿಸಿಕೊಂಡಿದ್ದು, “ಇದು ಬಹುಶಃ ಇದುವರೆಗಿನ ಮರಣದಂಡನೆಗಳಲ್ಲಿ ಅತ್ಯಂತ ಮಾನವೀಯ ವಿಧಾನವಾಗಿದೆ” ಎಂದಿದೆ.

ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮಾನವರ ಮರಣದಂಡನೆಗೆ ನೈಟ್ರೋಜನ್ ಅನಿಲವನ್ನು ಹಿಂದೆಂದೂ ಬಳಸಿಲ್ಲ. ಆದರೆ ಕೆಲವೊಮ್ಮೆ ಪ್ರಾಣಿಗಳನ್ನು ಕೊಲ್ಲಲು ಬಳಸಲಾಗುತ್ತದೆ. ಆದರೆ ಈ ರೀತಿಯ ದಯಾಮರಣದ ಸಂದರ್ಭ ಅನಸ್ತೇಶಿಯಾ ಕೊಡಲು ಶಿಫಾರಸು ಮಾಡಲಾಗಿದೆ.

ಕೆನ್ನೆತ್ ಯುಜೀನ್ ಸ್ಮಿತ್ ಯಾರು?

58ರ ಹರೆಯದ ಕೆನ್ನೆತ್ ಯುಜೀನ್ ಸ್ಮಿತ್, 1988ರಲ್ಲಿ ಪಾದ್ರಿಯೊಬ್ಬರ ಪತ್ನಿಯನ್ನು ಕೊಂದಿದ್ದಕ್ಕಾಗಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ. ಮೂರು ದಶಕಗಳಿಂದಲೂ ಜೈಲಿನಲ್ಲಿದ್ದ. 2022ರಲ್ಲಿ ಒಮ್ಮೆ ಮಾರಣಾಂತಿಕ ವಿಷದ ಚುಚ್ಚುಮದ್ದನ್ನು ನೀಡುವ ಮೂಲಕ ಸ್ಮಿತ್‌ನನ್ನು ಮರಣದಂಡನೆಗೆ ಒಳಪಡಿಸಲು ಯತ್ನಿಸಲಾಗಿತ್ತು. ಆದರೆ ಅದಕ್ಕೆ ತಕ್ಕ ನರಕೋಶಗಳನ್ನು ಹೊಂದಿಸಲು ಸಾಧ್ಯವಾಗಿರಲಿಲ್ಲ. ಅಂದಿನಿಂದ ಆತ ತನ್ನ ಸಾವಿನ ಬಗ್ಗೆ ಸದಾ ಭಯಭೀತನಾಗಿದ್ದ.

1988ರಲ್ಲಿ ಎಲಿಜಬೆತ್ ಸೆನೆಟ್‌ ಎಂಬಾಕೆಯ ಕೊಲೆಗೆ ಸ್ಮಿತ್ ಮತ್ತು ಸಹಚರ ಜಾನ್ ಪಾರ್ಕರ್‌ ಶಿಕ್ಷೆಗೆ ಒಳಗಾಗಿದ್ದರು. ತನ್ನ ಹೆಂಡತಿಯ ಕೊಲೆಗೆ ಸುಪಾರಿ ನೀಡಿದ್ದ ಚಾರ್ಲ್ಸ್ ಸೆನೆಟ್ ಎಂಬಾತ, ಅವಳ ಮರಣದ ಒಂದು ವಾರದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಅಪರಾಧಿ ಪಾರ್ಕರ್‌ನನ್ನು 2010ರಲ್ಲಿ ಮಾರಕ ಚುಚ್ಚುಮದ್ದಿನ ಮೂಲಕ ಮರಣದಂಡನೆಗೆ ಒಳಪಡಿಸಲಾಗಿತ್ತು.

ಇದನ್ನೂ ಓದಿ: Murder Case : ಬೆಂಗಳೂರಿನಲ್ಲಿ ರೌಡಿ ಶೀಟರ್‌ ಕೊಲೆ; ಮನೆ ಹೊರಗಡೆ ಮಲಗಿದಲ್ಲೇ ಮರ್ಡರ್‌

Exit mobile version