Site icon Vistara News

Flight Turbulence: ನೀವಿದ್ದ ವಿಮಾನ ಪ್ರಕ್ಷುಬ್ಧತೆಗೊಳಗಾದರೆ ಏನು ಮಾಡುತ್ತೀರಿ? ಇಲ್ಲಿದೆ ಪೈಲಟ್‌ಗಳ ಸಲಹೆ

Flight Turbulence

ವಿಮಾನ (flight) ಹಾರುವಾಗ ವಾಯು ಒತ್ತಡದಿಂದ ಕೆಲವೊಮ್ಮೆ ಪ್ರಕ್ಷುಬ್ಧತೆ (Flight Turbulence) ಉಂಟಾಗುತ್ತದೆ. ವಿಮಾನ ನಡುಗುತ್ತದೆ. ಈ ಸಂದರ್ಭದಲ್ಲಿ ಹಠಾತ್ ಆಘಾತಗಳು ಸಂಭವಿಸಿ ಸಾವು ನೋವು ಉಂಟಾಗುವುದೂ ಇದೆ. ಇಂಥ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಬೇಕಾಗುತ್ತದೆ. ಇತ್ತೀಚೆಗೆ ಸಿಂಗಾಪುರ ಏರ್‌ಲೈನ್ಸ್ (singapore airlines) ವಿಮಾನ ಇಂಥದ್ದೇ ಪರಿಸ್ಥಿತಿಗೆ ಒಳಗಾಗಿ ಪ್ರಯಾಣಿಕರೊಬ್ಬರು ಸಾವಿಗೀಡಾಗಿ, ಹಲವರು ಪ್ರಯಾಣಿಕರು ಗಾಯಗೊಂಡಿದ್ದರು. ಲಂಡನ್‌ನಿಂದ ಸಿಂಗಾಪುರಕ್ಕೆ ಹಾರುತ್ತಿದ್ದ ಬೋಯಿಂಗ್ 777-312ER ವಿಮಾನ 321ರಲ್ಲಿದ್ದ ಪ್ರಯಾಣಿಕರು ವಾಯು ಪ್ರಕ್ಷುಬ್ಧತೆಯ ಭಯಾನಕತೆಯನ್ನು ಅನುಭವಿಸಬೇಕಾಯಿತು.

ವಾಯು ಪ್ರಕ್ಷುಬ್ಧತೆ ಎಂದರೇನು?

ವಾಯು ಪ್ರಕ್ಷುಬ್ಧತೆಯು ಭೂಮಿಯ ವಾತಾವರಣದಲ್ಲಿ ಗಾಳಿಯ ಅನಿಯಮಿತ ಮತ್ತು ಅನಿರೀಕ್ಷಿತ ಚಲನೆಯಿಂದ ಉಂಟಾಗುತ್ತದೆ. ಇದು ವಿಮಾನ ಹಾರಾಟದ ಸಮಯದಲ್ಲಿ ಅಪಘಾತಕ್ಕೆ ಕಾರಣವಾಗುತ್ತದೆ. ವೇಗವಾಗಿ ವಾಹನ ಓಡಿಸುತ್ತಿದ್ದಾಗ ಯಾವ ಸೂಚನಾ ಫಲಕ ಇಲ್ಲದೆ ಹಠಾತ್‌ ಹಂಪ್‌ ಎದುರಾದಾಗ ಏನಾಗುತ್ತದೋ ವಿಮಾನದೊಳಗೆ ಹಾಗೆಯೇ ಆಗುತ್ತದೆ. ವಿಮಾನವು ಚಾಲಕನ ನಿಯಂತ್ರಣ ಕಳೆದುಕೊಂಡು ಪತನಗೊಳ್ಳುವಂತಾಗುತ್ತದೆ.

ಆಗ ಏನು ಮಾಡಬೇಕು?

ಯಾವಾಗಲೂ ಸೀಟ್ ಬೆಲ್ಟ್ ಧರಿಸಿ ಸುರಕ್ಷಿತವಾಗಿ ಕುಳಿತಿರಬೇಕು. ಸೈನ್ ಆಫ್ ಆಗಿದ್ದರೂ, ಅದನ್ನು ಬಿಗಿಯಾಗಿ ಇರಿಸಬೇಕು.
ಸಿಬ್ಬಂದಿಯ ಸೂಚನೆಗಳನ್ನು ಅನುಸರಿಸಿ. ಅವರ ಮಾತನ್ನು ಕೇಳಿ. ಪ್ರಕ್ಷುಬ್ಧತೆಯನ್ನು ನಿಭಾಯಿಸಲು ಅವರಿಗೆ ತರಬೇತಿ ನೀಡಲಾಗಿರುತ್ತದೆ. ಪ್ರಕ್ಷುಬ್ಧತೆಯ ಸಮಯದಲ್ಲಿ ಕ್ಯಾಬಿನ್ ಸುತ್ತಲೂ ಚಲಿಸುವುದನ್ನು ತಪ್ಪಿಸಿ ಮತ್ತು ಆತಂಕದಿಂದ ಕಿರುಚದೇ ಮೌನವಾಗಿ ಕುಳಿತುಕೊಳ್ಳಿ.

ಕ್ಯಾಬಿನ್‌ನಲ್ಲಿ ಇಟ್ಟಿರುವ ವಸ್ತುಗಳು ಮೈಮೇಲೆ ಬೀಳದಂತೆ ಸುರಕ್ಷಿತವಾಗಿರಿಸಿ. ಸೋರಿಕೆ ಅಥವಾ ಬೀಳುವಿಕೆಯನ್ನು ತಪ್ಪಿಸಲು ವಸ್ತುಗಳನ್ನು ಓವರ್ ಹೆಡ್ ವಿಭಾಗಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿ.
ಪ್ರಕ್ಷುಬ್ಧತೆ ಸಾಮಾನ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಶಾಂತವಾಗಿರಿ ಮತ್ತು ಭಯಭೀತರಾಗಬೇಡಿ. ರೆಸ್ಟ್ ರೂಮ್‌ ಅನ್ನು ಬಳಸಬೇಕಾದರೆ ಎದ್ದೇಳುವ ಮೊದಲು ಶಾಂತ ಕ್ಷಣಕ್ಕಾಗಿ ಕಾಯಿರಿ. ಸ್ಥಿರತೆಗಾಗಿ ಹ್ಯಾಂಡ್ರೈಲ್‌ಗಳನ್ನು ಬಳಸಿ.

ವಾಯು ಪ್ರಕ್ಷುಬ್ಧತೆಗೆ ಕಾರಣಗಳೇನು?

ಚಂಡಮಾರುತ, ಜೆಟ್ ಸ್ಟ್ರೀಮ್‌ ಅಥವಾ ಗಾಳಿಯ ಒತ್ತಡದಲ್ಲಿನ ಬದಲಾವಣೆಗಳಿಂದ ವಾಯು ಪ್ರಕ್ಷುಬ್ಧತೆ ಉಂಟಾಗಬಹುದು. ಹವಾಮಾನ ಬದಲಾವಣೆಗಳಿಂದಾಗಿ ಗಾಳಿಯ ಪ್ರಕ್ಷುಬ್ಧತೆಯು ಆಗಾಗ ಸಂಭವಿಸುತ್ತದೆ ಎನ್ನುತ್ತಾರೆ ತಜ್ಞರು. ತೀವ್ರವಾದ ಪ್ರಕ್ಷುಬ್ಧ ಘಟನೆಗಳು ಅಪರೂಪ. ಪೈಲಟ್‌ಗಳು ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತರಬೇತಿ ಪಡೆದಿರುತ್ತಾರೆ.

ಇದನ್ನೂ ಓದಿ: Viral Video: ರಣ ಭೀಕರ ಬಿರುಗಾಳಿ..! ಆಘಾತಕಾರಿ ವಿಡಿಯೋ ಎಲ್ಲೆಡೆ ವೈರಲ್‌

ಮಾಜಿ ಪೈಲೆಟ್ ಹೇಳಿದ್ದೇನು?

43 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಪೈಲಟ್ ಕ್ಯಾಪ್ಟನ್ ಕ್ರಿಸ್ ಹ್ಯಾಮಂಡ್ ಅವರು ಈ ಪರಿಸ್ಥಿತಿಯನ್ನು ಹೀಗೆ ವಿವರಿಸುತ್ತಾರೆ: ಇಂಥ ಸಂದರ್ಭದಲ್ಲಿ ಪ್ರಯಾಣಿಕರನ್ನು ಹೆಚ್ಚು ಸಮಾಧಾನದಿಂದ ಇರಿಸುವಂತೆ ಮಾಡುವ ಜವಾಬ್ದಾರಿ ಪೈಲಟ್‌ನದ್ದಾಗಿದೆ. ಎಲ್ಲಕ್ಕಿಂತ ಪೈಲಟ್‌ ತಾನು ಸಮಾಧಾನದಿಂದ ಇದ್ದು, ವಿವೇಚನೆ ಮತ್ತು ಅನುಭವ ಬಳಸಿ ವಿಮಾನವನ್ನು ನಿಯಂತ್ರಿಸಬೇಕಾಗುತ್ತದೆ. ಅನುಭವಿ ಚಾಲಕರು ಇಂಥ ಸನ್ನಿವೇಶವನ್ನು ಯಶಸ್ವಿಯಾಗಿ ನಿಭಾಯಿಸಿ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡುತ್ತಾರೆ.

Exit mobile version