ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ಅವರು ತಮ್ಮ 58ನೇ ವಯಸ್ಸಿನಲ್ಲಿ ಮತ್ತೊಮ್ಮೆ ‘ಅಪ್ಪ’ನಾಗುತ್ತಿದ್ದಾರೆ. ಅವರ ಪತ್ನಿ ಕ್ಯಾರಿ ಮೂರನೇ ಬಾರಿಗೆ ಗರ್ಭ ಧರಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಕ್ಯಾರಿ ಅವರು ಈ ಬಗ್ಗೆ ಒಂದು ಪೋಸ್ಟ್ ಹಾಕಿದ್ದಾರೆ.‘
ಕೆಲವೇ ವಾರಗಳಲ್ಲಿ ನಮ್ಮ ಟೀಮ್ಗೆ ಇನ್ನೊಬ್ಬ ಸದಸ್ಯನ ಆಗಮನ ಆಗುತ್ತದೆ. ಕಳೆದ ಎಂಟು ತಿಂಗಳಿಂದ ನಾನು ಸಾಕಷ್ಟು ದಣಿದಿದ್ದೇನೆ. ಆದರೂ ಆಗಮಿಸಲಿರುವ ಚಿಕ್ಕ ಮಗುವನ್ನು ಯಾವಾಗ ಭೇಟಿಯಾಗುತ್ತೇನೋ ಎಂಬಂತಾಗಿದೆ. ವಿಲ್ಫ್ (ಹಿರಿಯ ಮಗ) ತಾನು ಅಣ್ಣನಾಗುತ್ತಿರುವ ಬಗ್ಗೆ ಅತ್ಯಂತ ಉತ್ಸುಕನಾಗಿದ್ದಾನೆ ಮತ್ತು ಯಾವಾಗಲೂ ಅದರ ಬಗ್ಗೆಯೇ ಮಾತಾಡುತ್ತಿದ್ದಾನೆ. ರೋಮಿಗೆ ಈ ಬಗ್ಗೆ ಗೊತ್ತಿದೆಯಾ ಎಂದು ಕೇಳಬೇಡಿ, ಆಕೆಯೂ ಸ್ವಲ್ಪ ದಿನದಲ್ಲೇ ಅರ್ಥ ಮಾಡಿಕೊಳ್ಳುತ್ತಾಳೆ’ ಎಂದು ಬರೆದಿದ್ದಾರೆ. ಹಾಗೇ, ತಮ್ಮ ಇಬ್ಬರು ಮಕ್ಕಳಾದ ವಿಲ್ಫ್ ಮತ್ತು ರೋಮಿಯ ಕೈಗಳನ್ನು ತಾವು ಹಿಡಿದಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಬೋರಿಸ್ ಜಾನ್ಸನ್ ಮತ್ತು ಕ್ಯಾರಿ 2021ರಲ್ಲಿ ವಿವಾಹವಾಗಿದ್ದಾರೆ. ಬೋರಿಸ್ ಜಾನ್ಸನ್ಗೆ ಕ್ಯಾರಿ ಜಾನ್ಸನ್ ಮೂರನೇ ಪತ್ನಿ. ಅಲ್ಲೆಗ್ರಾ ಮೊಸ್ಟಿನ್-ಓವನ್ ಎಂಬುವರನ್ನು 1987ರಲ್ಲಿ ವಿವಾಹವಾಗಿ, 1993ರವರೆಗೆ ಆಕೆಯೊಂದಿಗೆ ಇದ್ದರು. ಆದರೆ ಮಕ್ಕಳಾಗಿರಲಿಲ್ಲ. ಅದಾದ ಮೇಲೆ ಮರೀನಾ ವೀಲರ್ ಎಂಬುವರನ್ನು ಮದುವೆಯಾಗಿ 2020ರವರೆಗೆ ಸಂಸಾರ ಮಾಡಿದ್ದಾರೆ. ಒಟ್ಟು 4 ಮಕ್ಕಳನ್ನು ದಂಪತಿ ಹೊಂದಿದ್ದಾರೆ. ಹೀಗಿರುವಾಗಲೇ 2019ರಿಂದ ಅವರು ಕ್ಯಾರಿ ಸೈಮಂಡ್ಸ್ರೊಂದಿಗೆ ಸಂಬಂಧ ಹೊಂದಿದ್ದರು. 2020ರಲ್ಲಿ ಇದೇ ಕಾರಣಕ್ಕೆ ಎರಡನೇ ಪತ್ನಿಗೆ ವಿಚ್ಛೇದನ ನೀಡಿದ್ದರು.
ಇದನ್ನೂ ಓದಿ: ರಿಷಿ ಸುನಕ್‌ರನ್ನು ಪ್ರಧಾನಿಯಾಗಿ ಆರಿಸಲೇಬೇಡಿ: ಬೋರಿಸ್ ಜಾನ್ಸನ್ ಪ್ರಚಾರ!
2019ರಲ್ಲಿಯೇ ಬ್ರಿಟನ್ ಪ್ರಧಾನಿಯಾದ ಬೋರಿಸ್ ಜಾನ್ಸನ್ 2021ರಲ್ಲಿ ಪ್ರಧಾನಿ ಹುದ್ದೆಯಲ್ಲಿ ಇರುವಾಗಲೇ ಕ್ಯಾರಿಯನ್ನು ಗುಟ್ಟಾಗಿ ವಿವಾಹವಾಗಿದ್ದರು. ಅಷ್ಟರಲ್ಲಿ ಕ್ಯಾರಿ ಒಂದು ಮಗು (ವಿಲ್ಫ್) ವಿಗೆ ಜನ್ಮ ನೀಡಿಯಾಗಿತ್ತು. ಅಷ್ಟೇ ಅಲ್ಲದೆ, ಬ್ರಿಟನ್ನಲ್ಲಿ 200ವರ್ಷಗಳಿಂದ ಈಚೆಗೆ ಹೀಗೆ ಪ್ರಧಾನಿ ಹುದ್ದೆಯಲ್ಲಿ ಇದ್ದಾಗಲೇ ಮದುವೆಯಾದವರು ಯಾರೂ ಇರಲಿಲ್ಲ. ಬಳಿಕ ಕ್ಯಾರಿ 2021ರಲ್ಲಿ ರೋಮಿಗೆ ಜನ್ಮ ನೀಡಿದ್ದಾರೆ. ಇದೀಗ ಬೋರಿಸ್ ಜಾನ್ಸನ್ ಪ್ರಧಾನಿ ಹುದ್ದೆ ತೊರೆದ ಬಳಿಕ ಇನ್ನೊಂದು ಮಗುವಿಗೆ ತಂದೆಯಾಗುತ್ತಿದ್ದಾರೆ. ಇಷ್ಟರ ಆಚೆ ಮಹಿಳೆಯೊಬ್ಬರೊಂದಿಗೆ ಇಟ್ಟುಕೊಂಡಿದ್ದ ಅಕ್ರಮ ಸಂಬಂಧದಿಂದ ಒಂದು ಮಗು ಹುಟ್ಟಿದೆ ಎಂದೂ ಬಿಬಿಸಿ ವರದಿ ಮಾಡಿದೆ. ಎರಡನೇ ಪತ್ನಿಯಿಂದ 4, ಮೂರನೇ ಪತ್ನಿಯಿಂದ ಎರಡು ಮತ್ತು ಅನೈತಿಕ ಸಂಬಂಧದಿಂದ ಒಂದು ಅಂದರೆ ಒಟ್ಟು ಏಳು ಮಕ್ಕಳಿಗೆ ತಂದೆಯಾಗಿ ಬೋರಿಸ್ ಇದೀಗ 8ನೇ ಮಗುವಿನ ಸ್ವಾಗತಕ್ಕೆ ಸಜ್ಜಾಗಿದ್ದಾರೆ.
ಇನ್ನು ಬೋರಿಸ್ ಜಾನ್ಸನ್ ಅವರು ಬ್ರಿಟನ್ನಲ್ಲಿ ಜನರ ಮತ್ತು ಅವರದ್ದೇ ಸರ್ಕಾರದ ಜನಪ್ರತಿನಿಧಿಗಳ ವಿಶ್ವಾಸ ಕಳೆದುಕೊಂಡು ಹುದ್ದೆಯನ್ನು ತ್ಯಜಿಸಬೇಕಿತ್ತು. ಬೋರಿಸ್ ಕೆಳಗೆ ಇಳಿಯುತ್ತಿದ್ದಂತೆ ಭಾರತ ಮೂಲದ ರಿಷಿ ಸುನಕ್ ಆ ಹುದ್ದೆಗೆ ಏರಿದ್ದಾರೆ.