ನವ ದೆಹಲಿ: 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುತ್ತೇನೆ ಎಂದು ಹೇಳಿರುವ ಅಮೆರಿಕ ರಿಪಬ್ಲಿಕನ್ ಪಕ್ಷದ ನಾಯಕ, ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಪ್ರಚಾರದ ಭರಾಟೆಯಲ್ಲಿದ್ದಾರೆ. ಅದರ ಮಧ್ಯೆ ಈಗ ಅವರ ಫೇಸ್ಬುಕ್ ಮತ್ತು ಯೂಟ್ಯೂಬ್ಗಳೂ ಸಕ್ರಿಯಗೊಂಡಿವೆ. 2021ರಲ್ಲಿ ಅಧ್ಯಕ್ಷ ಸ್ಥಾನ ಕಳೆದುಕೊಂಡ ಬಳಿಕ ಟ್ರಂಪ್ ಅವ್ಯವಸ್ಥೆ ಸೃಷ್ಟಿಸಿದ್ದರು. ಅವರ ಬೆಂಬಲಿಗರು ಅಮೆರಿಕ ಕ್ಯಾಪಿಟಲ್ ಕಟ್ಟಡದ ಮೇಲೆ ದಾಳಿ ಮಾಡಿದ್ದರು. ಅದಕ್ಕೆ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದ ಪೋಸ್ಟ್ಗಳೇ ಕಾರಣ. ಇದರಿಂದಲೇ ಪ್ರಚೋದನೆ ಪಡೆದು ಬೆಂಬಲಿಗರು ದಾಳಿ ಮಾಡಿದ್ದಾರೆ ಎನ್ನಲಾಗಿತ್ತು. ಹೀಗಾಗಿ 2021ರ ಜನವರಿ 6ರಿಂದಲೇ ಟ್ರಂಪ್ ಅವರ ಫೇಸ್ಬುಕ್ ಮತ್ತು ಯೂಟ್ಯೂಬ್ಗಳನ್ನು ನಿರ್ಬಂಧಿಸಲಾಗಿತ್ತು. 2023ರವರೆಗೆ ಈ ನಿಷೇಧ ಮುಂದುವರಿಯುವುದಾಗಿ ಹೇಳಿತ್ತು. ಅದೀಗ ಮತ್ತೆ ಸಕ್ರಿಯಗೊಂಡಿದೆ.
ಫೇಸ್ಬುಕ್ ಮತ್ತು ಯೂಟ್ಯೂಬ್ಗಳು ಸಕ್ರಿಯಗೊಂಡ ಬೆನ್ನಲ್ಲೇ ಟ್ರಂಪ್ ಅದರಲ್ಲಿ ಪೋಸ್ಟ್/ವಿಡಿಯೊಗಳನ್ನು ಹಾಕಿದ್ದಾರೆ. ಫೇಸ್ಬುಕ್ನಲ್ಲಿ “I’M BACK!” ಎಂದು ಪೋಸ್ಟ್ ಹಾಕಿದ್ದರೆ, ಯೂಟ್ಯೂಬ್ನಲ್ಲಿ ಒಂದು ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಹಾಗೇ, 2016ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಹಿಲರಿ ಕ್ಲಿಂಟನ್ ವಿರುದ್ಧ ತಾವು ಗೆದ್ದಿದ್ದನ್ನು ತೋರಿಸುವ ವಿಡಿಯೊವೊಂದನ್ನು ಅವರು ಯೂಟ್ಯೂಬ್ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಮತ್ತು ಇನ್ಸ್ಟಾಗ್ರಾಂ ಖಾತೆಗಳೂ ನಿರ್ಬಂಧಗೊಂಡಿದ್ದವು. ಅದರಲ್ಲಿ ಟ್ವಿಟರ್ ಖಾತೆ ಕಳೆದ ವರ್ಷ ನವೆಂಬರ್ನಲ್ಲಿಯೇ ಮರುಸ್ಥಾಪನೆಗೊಂಡಿದೆ. ಎಲಾನ್ ಮಸ್ಕ್ ಟ್ವಿಟರ್ ಖರೀದಿ ಮಾಡಿದ ತಕ್ಷಣವೇ ಟ್ರಂಪ್ ಖಾತೆ ಚಾಲ್ತಿಗೆ ಬಂದಿತ್ತು. ಇನ್ಸ್ಟಾಗ್ರಾಂ ಅಕೌಂಟ್ ಈ ವರ್ಷದ ಪ್ರಾರಂಭದಲ್ಲಿಯೇ ಮರುಸ್ಥಾಪನೆಗೊಂಡಿದೆ.
2016ರಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೋಷಿಯಲ್ ಮೀಡಿಯಾಗಳನ್ನು ಅದ್ಭುತವಾಗಿ ಸದ್ಬಳಕೆ ಮಾಡಿಕೊಂಡಿದ್ದರು. ಅವರ ಬೆಂಬಲಿಗರು, ಅನುಯಾಯಿಗಳನ್ನು ತಲುಪಲು ಇದನ್ನು ಯಶಸ್ವಿಯಾಗಿ ಬಳಸಿಕೊಂಡಿದ್ದರು. ಈಗ 2024ರ ಚುನಾವಣೆಯಲ್ಲಿ ಮತ್ತೆ ಅಧ್ಯಕ್ಷೀಯ ಸ್ಥಾನಕ್ಕೆ ಅಭ್ಯರ್ಥಿಯಾಗಿದ್ದಾರೆ. ಮತ್ತೀಗ ಅವರ ಸೋಷಿಯಲ್ ಮೀಡಿಯಾಗಳೂ ಮರುಸ್ಥಾಪನೆಗೊಂಡಿದೆ. ಇದು ಟ್ರಂಪ್ಗೆ ಚುನಾವಣಾ ಪ್ರಚಾರಕ್ಕೆ ಮತ್ತೊಂದು ಕೈ ಬಲ ಸಿಕ್ಕಂತಾಗಿದೆ.
ತಮ್ಮ ಸೋಷಿಯಲ್ ಮೀಡಿಯಾಗಳೆಲ್ಲ ನಿರ್ಬಂಧಗೊಂಡಾಕ್ಷಣ ಡೊನಾಲ್ಡ್ ಟ್ರಂಪ್ ಸುಮ್ಮನೆ ಕುಳಿತಿರಲಿಲ್ಲ. 2021ರ ವರ್ಷಾಂತ್ಯದಲ್ಲಿ ಅವರು ತಮ್ಮದೇ ಆದ ಒಂದು ಸಾಮಾಜಿಕ ಮಾಧ್ಯಮವನ್ನು ಸೃಷ್ಟಿಸಿಕೊಂಡಿದ್ದರು. ಅದಕ್ಕೆ Truth Social ಎಂದು ಹೆಸರಿಡಲಾಗಿತ್ತು. ಅವರು ಈ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಬೆಂಬಲಿಗರು, ಅಭಿಮಾನಿ/ಅನುಯಾಯಿಗಳೊಟ್ಟಿಗೆ ಸಂವಹನ ನಡೆಸುತ್ತಿದ್ದರು. ಅವರೊಂದಿಗೆ ಸಂಪರ್ಕದಲ್ಲಿದ್ದರು.
ಯೂಟ್ಯೂಬ್ ಪ್ರತಿಕ್ರಿಯೆ ಏನು?
ಡೊನಾಲ್ಡ್ ಟ್ರಂಪ್ ಅವರ ಯೂಟ್ಯೂಬ್ ಅಕೌಂಟ್ ಮರುಸ್ಥಾಪಿಸಿದ ಬಗ್ಗೆ ಟ್ವೀಟ್ ಮಾಡಿರುವ ಯೂಟ್ಯೂಬ್, ‘ಹಿಂಸಾತ್ಮಕ, ಪ್ರಚೋದನಾತ್ಮಕ ವಿಡಿಯೊಗಳನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ನಾವು ಎಚ್ಚರಿಕೆ ವಹಿಸುತ್ತಿದ್ದೇವೆ. ಇದೇ ಕಾರಣಕ್ಕೆ ಟ್ರಂಪ್ ಅಕೌಂಟ್ ನಿರ್ಬಂಧಿಸಲಾಗಿತ್ತು. ಆದರೆ ಯಾವುದೇ ಮಹತ್ವದ ಚುನಾವಣೆ ಪೂರ್ವದಲ್ಲಿ ಪ್ರಮುಖ ಅಭ್ಯರ್ಥಿಗಳಿಗೆ ಸೋಷಿಯಲ್ ಮೀಡಿಯಾ ಬಳಕೆ ಮಾಡಲು ಸಮತೋಲಿತವಾಗಿ ಅವಕಾಶ ನೀಡುವ ಸಲುವಾಗಿ ನಿರ್ಬಂಧ ತೆರವುಗೊಳಿಸಲಾಗಿದೆ’ ಎಂದು ಹೇಳಿದೆ.
ಇದನ್ನೂ ಓದಿ: Donald Trump: ಮೂರನೇ ಮಹಾಯುದ್ಧ ತಡೆಯುವ ಶಕ್ತಿ ಇರುವುದು ನನಗೆ ಮಾತ್ರ ಎಂದ ಡೊನಾಲ್ಡ್ ಟ್ರಂಪ್!