Site icon Vistara News

Henry Kissinger: 2ನೇ ಮಹಾಯುದ್ಧದ ಸೈನಿಕ, ನೊಬೆಲ್‌ ಪುರಸ್ಕೃತ ಹೆನ್ರಿ ಕಿಸ್ಸಿಂಜರ್‌ ಇನ್ನಿಲ್ಲ

Henry Kissinger

Former US Secretary of State Henry Kissinger dies aged 100

ವಾಷಿಂಗ್ಟನ್:‌ ಅಮೆರಿಕದ ವಿದೇಶಾಂಗ ವ್ಯವಹಾರಗಳ ಖಾತೆ ಮಾಜಿ ಸಚಿವ, ಜಾಗತಿಕ ಖ್ಯಾತಿ ರಾಜತಾಂತ್ರಿಕ, ನೊಬೆಲ್‌ ಶಾಂತಿ ಪುರಸ್ಕೃತ ಹೆನ್ರಿ ಕಿಸ್ಸಿಂಜರ್‌ (100) (Henry Kissinger) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹೆನ್ರಿ ಕಿಸ್ಸಿಂಜರ್‌ ಅವರು ಕನೆಕ್ಟಿಕಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ (ನವೆಂಬರ್‌ 30) ನಿಧನರಾಗಿದ್ದಾರೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ. ಇವರ ನಿಧನಕ್ಕೆ ಜಾಗತಿಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಅಮೆರಿಕದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಹೆನ್ರಿ ಕಿಸ್ಸಿಂಜರ್‌ ಅವರು ಎರಡನೇ ಮಹಾಯುದ್ಧದ ನಂತರ ಜಾಗತಿಕ ಬೆಳವಣಿಗೆಗಳ ಮೇಲೆ ಭಾರಿ ಪ್ರಭಾವ ಬೀರಿದ್ದಾರೆ. ಅದರಲ್ಲೂ, ಅಮೆರಿಕದ ರಾಜತಾಂತ್ರಿಕರಾಗಿ ವಿದೇಶಾಂಗ ನೀತಿಯಲ್ಲಿ ಕ್ರಾಂತಿಕಾರ ಬದಲಾವಣೆಗಳನ್ನು ತಂದ ಖ್ಯಾತಿ ಹೊಂದಿದ್ದಾರೆ. 100 ವರ್ಷ ತುಂಬಿದರೂ ಸಕ್ರಿಯರಾಗಿದ್ದ ಹೆನ್ರಿ ಕಿಸ್ಸಿಂಜರ್‌, ಶ್ವೇತಭವನದ ಮೇಲೆ ಪ್ರಭಾವ ಬೀರುವಷ್ಟು ಹಿಡಿತ ಸಾಧಿಸಿದ್ದರು. ಕಳೆದ ಜುಲೈನಲ್ಲಷ್ಟೇ ಅವರು ಅವರು ಚೀನಾಗೆ ತೆರಳಿ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದರು.

ವಿವಾದಗಳಿಂದಲೇ ಸುದ್ದಿ

ವಿವಾದಗಳಿಗೂ, ಹೆನ್ರಿ ಕಿಸ್ಸಿಂಜರ್‌ ಅವರಿಗೂ ಎಲ್ಲಿಲ್ಲದ ನಂಟಿತ್ತು. ಅವರಿಗೆ 1973ರಲ್ಲಿ ವಿಯೇಟ್ನಾಂನ ಲೆ ಡುಕ್‌ ಥೋ ಅವರೊಂದಿಗೆ ಜಂಟಿಯಾಗಿ ನೊಬೆಲ್‌ ಶಾಂತಿ ಪ್ರಶಸ್ತಿ ಘೋಷಣೆಯಾದಾಗ ಭಾರಿ ವಿವಾದ ಸೃಷ್ಟಿಯಾಗಿತ್ತು. ಅಷ್ಟಲ್ಲೇ ಅಲ್ಲ, ಕಾಂಬೋಡಿಯಾದಲ್ಲಿ ಗೌಪ್ಯವಾಗಿ ಬಾಂಬ್‌ ದಾಳಿ ನಡೆಸಿದ್ದರ ಹಿಂದೆ ಹೆನ್ರಿ ಕಿಸ್ಸಿಂಜರ್‌ ಅವರ ಕೈವಾಡವಿದೆ ಎಂದು ನೊಬೆಲ್‌ ಸಮಿತಿಯ ಇಬ್ಬರು ಸದಸ್ಯರು ರಾಜೀನಾಮೆ ನೀಡಿದ್ದರು. ಅಷ್ಟರಮಟ್ಟಿಗೆ ಹೆನ್ರಿ ಕಿಸ್ಸಿಂಜರ್‌ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಘೋಷಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: Last Elephant: ವಿಶ್ವದ ‘ಅತ್ಯಂತ ಒಂಟಿ ಆನೆ’, ಫಿಲಿಪ್ಪೀನ್ಸ್‌ನ ‘ಮಾಲಿ’ ಇನ್ನಿಲ್ಲ

ಜರ್ಮನಿಯ ಫರ್ತ್‌ನಲ್ಲಿ 1923ರ ಮೇ 27ರಂದು ಜನಿಸಿದ ಹೆನ್ರಿ ಕಿಸ್ಸಿಂಜರ್‌ ಅವರು ಕುಟುಂಬದೊಂದಿಗೆ ಅಮೆರಿಕಕ್ಕೆ ಬಂದು ನೆಲೆಸಿದರು. ಎರಡನೇ ಮಹಾಯುದ್ಧದಲ್ಲಿ ಯುರೋಪ್‌ ಸೇನೆಯಲ್ಲಿ ಭಾಗವಹಿಸಿದ ಇವರು ಅಮೆರಿಕದ ರಾಜತಾಂತ್ರಿಕರಾಗಿ, ಸಚಿವರಾಗಿ, ಲೇಖಕರಾಗಿ, ಪ್ರಭಾವಿ ವ್ಯಕ್ತಿಯಾಗಿ, ಜಾಗತಿಕ ಸಮಸ್ಯೆಗಳನ್ನು ನಿವಾರಿಸಲು ಮಧ್ಯಸ್ಥಿಕೆ ವಹಿಸುವುದು ಸೇರಿ ಹಲವು ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅದರಲ್ಲೂ, ಜಾಗತಿಕ ರಾಜಕೀಯದ ಬಗ್ಗೆ ಇವರು ಹೊಂದಿದ್ದ ಜ್ಞಾನ ಅಪಾರವಾದುದು ಎಂದೇ ಹೇಳಲಾಗುತ್ತಿದೆ. 1971ರಲ್ಲಿ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಅಮೆರಿಕ ಮಧ್ಯಸ್ಥಿಕೆಗೆ ಹೆನ್ರಿ ಕಿಸ್ಸಿಂಜರ್‌ ಪಾತ್ರ ದೊಡ್ಡಿದೆ.

Exit mobile version