ಪ್ಯಾರಿಸ್, ಫ್ರಾನ್ಸ್: 1789 ಕ್ರಾಂತಿಯ ಮೂಲಕ ಇಡೀ ಜಗತ್ತಿಗೆ ಜನರ ಶಕ್ತಿಯನ್ನು ಅನಾವರಣ ಮಾಡಿದ್ದ ಫ್ರಾನ್ಸ್‌ನಲ್ಲಿ ಮತ್ತೆ ಅಂಥದ್ದೇ ಸ್ಥಿತಿ ನಿರ್ಮಾಣವಾದಂತಿದೆ. ಕಳೆದ ಒಂದು ವಾರದಿಂದ ಫ್ರಾನ್ಸ್‌ನ ಎಲ್ಲ ನಗರಗಳಲ್ಲಿ ಕಾರ್ಮಿಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಮ್ಯಾನುಯೆಲ್ ಮ್ಯಾಕ್ರೋನ್ ಅವರು ಜಾರಿಗೆ ತಂದಿರುವ ಹೊಸ ಪಿಂಚಣಿ ವ್ಯವಸ್ಥೆಯನ್ನು ವಿರೋಧಿಸಿ, ಫ್ರಾನ್ಸ್‌ನಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ (Protest in France).
ಫ್ರಾನ್ಸ್‌ನಲ್ಲಿ ನಡೆಯುತ್ತಿರುವರ ಪ್ರತಿಭಟನೆಗೆ ಈವರೆಗೆ 441ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. 457ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಕಾರ್ಮಿಕರ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ, ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಹೊಸ ಪಿಂಚಣಿ ವ್ಯವಸ್ಥೆಯನ್ನು ವಾಪಸ್ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಫ್ರಾನ್ಸ್ ಸರ್ಕಾರ ಸ್ಪಷ್ಟಪಡಿಸಿದೆ. ಸರ್ಕಾರದ ಈ ನಿಲವು ಪ್ರತಿಭಟನೆಗೆ ಇನ್ನಷ್ಟು ಪುಷ್ಟಿ ನೀಡಿದೆ. ಫ್ರಾನ್ಸ್ ಸಂಸತ್ತು ಚರ್ಚೆ ನಡೆಸಿ ಅಂಗೀಕರಿಸಿರುವ ಈ ಹೊಸ ಪಿಂಚಣಿ ವ್ಯವಸ್ಥೆಯನ್ನು ವಾಪಸ್ ಪಡೆದುಕೊಳ್ಳುವ ಮಾತೇ ಇಲ್ಲ ಎಂದ ಮಂತ್ರಿಯೊಬ್ಬರು ತಿಳಿಸಿದ್ದಾರೆ.
ಫ್ರಾನ್ಸ್‌ನಲ್ಲಿ ಏಕೆ ಪ್ರತಿಭಟನೆ?
ಸಾಮಾಜಿಕ ಭದ್ರತಾ ವಿಷಯದಲ್ಲಿ ಅಮೆರಿಕದ ನಂತರ ಫ್ರಾನ್ಸ್ ಎರಡನೇ ಸ್ಥಾನದಲ್ಲಿದೆ. ಈ ಪೈಕಿ ಫ್ರಾನ್ಸ್‌ನಲ್ಲಿರುವ ಪಿಂಚಣಿ ವ್ಯವಸ್ಥೆಯೂ ಪ್ರಮುಖವಾಗಿದೆ. ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಸಾಮಾಜಿಕ ಭದ್ರತೆಯಾಗಿ ಪಿಂಚಣಿಯನ್ನು ನೀಡಲಾಗುತ್ತಿದೆ. ಫ್ರಾನ್ಸ್‌ನಲ್ಲಿರುವ ಪಿಂಚಣಿ ವ್ಯವಸ್ಥೆಯು ಏಕರೂಪವಾಗಿಲ್ಲ. ಈ ಪಿಂಚಣಿ ವ್ಯವಸ್ಥೆಯಲ್ಲೇ 42 ಉಪಯೋಜನೆಗಳಿದ್ದವು. ಅಲ್ಲದೇ, ವಿವಿಧ ಇಲಾಖೆಗಳ ನೌಕರರಿಗೆ ಭಿನ್ನ ನಿವೃತ್ತಿ ವಯಸ್ಸು ನಿಗದಿ ಮಾಡಲಾಗಿತ್ತು. ಈಗ ಮ್ಯಾಕ್ರೋನ್ ಸರ್ಕಾರವು, ಈ ಹಿಂದೆ ಜಾರಿಯಲ್ಲಿದ್ದ ಪಿಂಚಣಿ ವ್ಯವಸ್ಥೆಯನ್ನು ರದ್ದು ಮಾಡಿ, ಏಕರೂಪದ ಹೊಸ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ನಿವೃತ್ತಿ ವಯಸ್ಸನ್ನು 64 ವರ್ಷಕ್ಕೆ ಹೆಚ್ಚಿಸಿದೆ.
ಇದನ್ನೂ ಓದಿ: ಫ್ರಾನ್ಸ್ ಅಧ್ಯಕ್ಷರಾಗಿ ಇಮಾನ್ಯುಯೆಲ್ ಮ್ಯಾಕ್ರಾನ್ ಪುನರಾಯ್ಕೆ
ಸರ್ಕಾರದ ಈ ನಿರ್ಧಾರವು ಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಗಣಿ ಸೇರಿದಂತೆ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಭಾರೀ ಅನ್ಯಾಯವಾಗುತ್ತದೆ ಎಂಬ ದೂರು ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ 1.9 ಕೋಟಿ ಕಾರ್ಮಿಕರು ಕಳೆದ ಒಂದು ವಾರದಿಂದ ಪ್ರತಿಭಟನೆ ಮಾಡುತ್ತಿದ್ದಾರೆ.