Site icon Vistara News

Gabriel Attal: 34 ವರ್ಷದ ಗ್ಯಾಬ್ರಿಯೆಲ್‌ ಫ್ರಾನ್ಸ್‌ ಪ್ರಧಾನಿ; ಹುದ್ದೆಗೇರಿದ ಮೊದಲ ಸಲಿಂಗಿ!

Gabriel Attal

Gabriel Attal becomes France's youngest, first gay Prime Minister

ಪ್ಯಾರಿಸ್:‌ ಕೇವಲ 34 ವರ್ಷದ ಗ್ಯಾಬ್ರಿಯೆಲ್‌ ಅಟಲ್‌ (Gabriel Attal) ಅವರು ಫ್ರಾನ್ಸ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಫ್ರಾನ್ಸ್‌ ಪ್ರಧಾನಿ ಹುದ್ದೆಗೇರಿದ ಅತಿ ಕಿರಿಯ ಹಾಗೂ ಮೊದಲ ಸಲಿಂಗಿ (Gay) ಎಂಬ ಖ್ಯಾತಿಗೆ ಗ್ಯಾಬ್ರಿಯೆಲ್‌ ಅಟಲ್‌ ಅವರು ಭಾಜನರಾಗಿದ್ದಾರೆ. ಎಲಿಸಬೆತ್‌ ಬಾರ್ನ್‌ (Elisabeth Borne) ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದ ಕಾರಣ ಯುವ ನಾಯಕ ಗ್ಯಾಬ್ರಿಯೆಲ್‌ ಅಟಲ್‌ ಅವರನ್ನು ನೂತನ ಪ್ರಧಾನಿಯನ್ನಾಗಿ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ (Emmanuel Macron) ಅವರು ನೇಮಕ ಮಾಡಿದ್ದಾರೆ.

“ಗ್ಯಾಬ್ರಿಯೆಲ್‌ ಅಟಲ್‌ ಅವರನ್ನು ಫ್ರಾನ್ಸ್‌ ಪ್ರಧಾನಿಯನ್ನಾಗಿ ನೇಮಿಸಲಾಗಿದೆ. ಅವರಿಗೆ ಸರ್ಕಾಋ ರಚಿಸುವ ಹೊಣೆಯನ್ನು ನೀಡಲಾಗಿದೆ” ಎಂದು ಫ್ರಾನ್ಸ್‌ ಅಧ್ಯಕ್ಷರ ಕಚೇರಿಯು ಪ್ರಕಟಣೆ ಹೊರಡಿಸಿದೆ. ಇಮ್ಯಾನುಯೆಲ್‌ ಮ್ಯಾಕ್ರನ್‌ ನೇತೃತ್ವದ ರೆನೈಸನ್ಸ್‌ ಪಕ್ಷದ ಸಿಲ್ವೈನ್‌ ಮೇಲರ್ಡ್‌ ಅವರು ಅವರು ಗ್ಯಾಬ್ರಿಯೆಲ್‌ ಅಟಲ್‌ ಅವರನ್ನು ಅಭಿನಂದಿಸಿದ್ದಾರೆ. “ಫ್ರಾನ್ಸ್‌ ನಾಗರಿಕರ ಕನಸುಗಳನ್ನು ನನಸು ಮಾಡುವಲ್ಲಿ ನೀವು ಶ್ರಮ ವಹಿಸುತ್ತೀರಿ ಹಾಗೂ ಅದರಲ್ಲಿ ಯಶಸ್ವಿಯಾಗುತ್ತೀರಿ ಎಂಬ ನಂಬಿಕೆ ನಮಗಿದೆ” ಎಂದು ಅವರು ಹೇಳಿದ್ದಾರೆ.

ಯಾರಿವರು ಗ್ಯಾಬ್ರಿಯೆಲ್‌ ಅಟಲ್?

ಫ್ರಾನ್ಸ್‌ನ ಶಿಕ್ಷಣ ಸಚಿವರಾಗಿದ್ದ ಗ್ಯಾಬ್ರಿಯೆಲ್‌ ಅಟಲ್‌ ಅವರು ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರ ಆಪ್ತರಲ್ಲಿ ಒಬ್ಬರಾಗಿದ್ದಾರೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಇವರು ಸರ್ಕಾರದ ವಕ್ತಾರರಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಬಹಿರಂಗವಾದ ಜನಾಭಿಪ್ರಾಯ ಸಂಗ್ರಹದ ವರದಿ ಪ್ರಕಾರ, ಫ್ರಾನ್ಸ್‌ನ ಜನಪ್ರಿಯ ನಾಯಕರಲ್ಲಿ ಗ್ಯಾಬ್ರಿಯೆಲ್‌ ಅಟಲ್‌ ಅವರು ಕೂಡ ಒಬ್ಬರಾಗಿದ್ದಾರೆ. ಯುವಕರಾಗಿರುವ, ಯುವಕರ ಬೆಂಬಲ ಹೊಂದಿರುವ ಗ್ಯಾಬ್ರಿಯೆಲ್‌ ಅಟಲ್‌ ಅವರು ತಮ್ಮನ್ನು ತಾವೇ “ಜಾಣ ಮಂತ್ರಿ” ಎಂದು ಘೋಷಿಸಿಕೊಂಡಿದ್ದರು. ಇವರು “ನಾನು ಸಲಿಂಗಿ” ಎಂದು ಕೂಡ ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ.

ಇದನ್ನೂ ಓದಿ: PM Modi France Visit: ಫ್ರಾನ್ಸ್‌ನಲ್ಲಿ ನರೇಂದ್ರ ಮೋದಿ ಝಲಕ್‌; ಭೇಟಿಯ ಪ್ರಮುಖ ಫೋಟೊಗಳು ಇಲ್ಲಿವೆ

ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರು 2022ರಲ್ಲಿ ಬಹುಮತ ಕಳೆದುಕೊಂಡಿದ್ದು, ಅತಂತ್ರರಾಗಿದ್ದರು. ಇದಾದ ಬಳಿಕ ಎಲಿಸಬೆತ್‌ ಬಾರ್ನ್‌ ಅವರು ಕೂಡ ಪ್ರಧಾನಿಯಾಗಿ ಎರಡು ವರ್ಷ ತುಂಬುವ ಮೊದಲೇ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರ ವಿರುದ್ಧ ಪ್ರತಿಪಕ್ಷಗಳು ಟೀಕಾಸ್ತ್ರ ಪ್ರಯೋಗಿಸುತ್ತಿದ್ದವು. ಈಗ ಮ್ಯಾಕ್ರನ್‌ ಅವರು ಗ್ಯಾಬ್ರಿಯೆಲ್‌ ಅಟಲ್‌ ಅವರನ್ನು ಪ್ರಧಾನಿಯನ್ನಾಗಿ ನೇಮಿಸುವ ಮೂಲಕ ಸ್ಥಿರ ಸರ್ಕಾರ, ಉತ್ತಮ ಆಡಳಿತದ ಸೂಚನೆ ನೀಡಿದ್ದಾರೆ. ಜೂನ್‌ನಲ್ಲಿ ಐರೋಪ್ಯ ಒಕ್ಕೂಟದ ಚುನಾವಣೆ ಮೇಲೂ ಇದು ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version