ವಾಷಿಂಗ್ಟನ್: ಅಮೆರಿಕದ ನ್ಯೂ ಜೆರ್ಸಿಯಲ್ಲಿ ನಾಲ್ಕು ವರ್ಷದ ಹಿಂದೆ ಹಿಂದು ಸಂಪ್ರದಾಯದಂತೆ ಮದುವೆಯಾದ ಸಲಿಂಗಿ ದಂಪತಿ ಅಮಿತ್ ಶಾ ಹಾಗೂ ಆದಿತ್ಯ ಮದಿರಾಜು ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮೇ ತಿಂಗಳಲ್ಲಿ ಮಗುವಾಗಲಿದ್ದು, ಈ ಕುರಿತು ಸಂತಸ ಹಂಚಿಕೊಂಡಿರುವ ಫೋಟೊಗಳನ್ನು ಮ್ಯಾಗಜಿನ್‌ನಲ್ಲಿ ಪ್ರಕಟಿಸಲಾಗಿದೆ.
2019ರಲ್ಲಿ ಆದಿತ್ಯ ಮದಿರಾಜು ಹಾಗೂ ಅಮಿತ್ ಶಾ ಅವರು ಮದುವೆಯಾದಾಗ ಜಗತ್ತಿನಾದ್ಯಂತ ಸುದ್ದಿಯಾಗಿತ್ತು. ಇದಾದ ಬಳಿಕ ಇಬ್ಬರೂ ಮಗುವನ್ನು ಹೊಂದಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಎಗ್ ಡೋನರ್ ಅವರನ್ನು ಹುಡುಕಿ, ಈಗ ಬಾಡಿಗೆ ತಾಯ್ತನದ (IVF) ಮೂಲಕ ಮೊದಲ ಮಗುವನ್ನು ಪಡೆಯುತ್ತಿದ್ದಾರೆ.
“ಮದುವೆಯಾದ ಕೆಲ ತಿಂಗಳು ಆಗುವವರೆಗೂ ನಾವು ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೊಂದಬಹುದು ಎಂಬುದೇ ಗೊತ್ತಿರಲಿಲ್ಲ. ಆದರೆ, 2020ರಲ್ಲಿ ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾದೆವು. ಮಗುವನ್ನು ಹೇಗೆ ಪಡೆಯಬಹುದು? ಇದಕ್ಕಾಗಿ ಎಷ್ಟು ಖರ್ಚಾಗುತ್ತದೆ? ಪ್ರಕ್ರಿಯೆ ಏನು ಎಂಬುದನ್ನು ಅರಿತು ಈಗ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆಯುತ್ತಿದ್ದೇವೆ” ಎಂದು ಅಮಿತ್ ಶಾ ಹೇಳಿದ್ದಾರೆ.
ಇದನ್ನೂ ಓದಿ | ಪಾಲಕರ ವಿರೋಧದ ವಿರುದ್ಧ ಹೈಕೋರ್ಟ್ಗೆ ಹೋಗಿದ್ದ ಸಲಿಂಗಿ ಯುವತಿಯರಿಗೆ ಗೆಲುವು: ಉಂಗುರ ಬದಲಿಸಿಕೊಂಡು ಸಂಭ್ರಮ