ನವದೆಹಲಿ: ಹಮಾಸ್ ಬಂಡುಕೋರರ (Hamas Militants) ನಾಶಕ್ಕೆ ಪಣತೊಟ್ಟಿರುವ ಇಸ್ರೇಲ್ (Israel) ಗಾಜಾ ಪಟ್ಟಿಯ(Gaza Strip) ಮೇಲೆ ನಾಲ್ಕೂ ನಿಟ್ಟಿನಿಂದಲೂ ದಾಳಿ ನಡೆಸುತ್ತಿದೆ. ಆದರೆ, ಗಾಜಾ ಪಟ್ಟಿಯಲ್ಲಿ ಹಮಾಸ್ ಬಂಡುಕೋರರು ರಚಿಸಿಕೊಂಡಿರುವ ರಹಸ್ಯ ಸುರಂಗಗಳು (Secret Tunnels) ಸವಾಲೊಡ್ಡುತ್ತಿವೆ ಎನ್ನಲಾಗಿದೆ. ಸುರಂಗಗಳ ಜಾಲವನ್ನು ಹೊಂದಿರುವ ಜನನಿಬಿಡ ಪ್ರದೇಶವು ಇಸ್ರೇಲ್‌ನ ವಾಯು ದಾಳಿಗೆ ಸವಾಲಾಗಿದೆ. ಹಾಗಾಗಿ, ಹಮಾಸ್ ಬಂಡುಕೋರರ ರಹಸ್ಯ ಸುರಂಗಗಳನ್ನು ಧ್ವಂಸಗೊಳಿಸುವ ಕೆಲಸವನ್ನು ಮಾಡಲಾಗುತ್ತಿದೆ. ಆದರೆ, ಇದು ಅಷ್ಟು ಸುಲಭದ ಕೆಲಸವಲ್ಲ ಎಂದು ಇಸ್ರೇಲ್ ಪಡೆಗಳ ವಕ್ತಾರರು ನಿನ್ನೆಯಷ್ಟೇ ಹೇಳಿದ್ದರು.
ಕಳೆದ ವಾರಂತ್ಯದಲ್ಲಿ ಇಸ್ರೇಲ್ ಮೇಲೆ ಹಮಾಸ್ ಬಂಡುಕೋರು ಯಾರೂ ನಿರೀಕ್ಷಿಸದ ರೀತಿಯಲ್ಲಿ ದಾಳಿ ನಡೆಸಿದರು. ಆಕಾಶ, ಭೂಮಿ ಮತ್ತು ಸಮುದ್ರ ಮೂಲಕ ಏಕಕಾಲಕ್ಕೆ ದಾಳಿ ನಡೆಸಿ, ಸಾವಿರಾರು ಇಸ್ರೇಲಿಗಳನ್ನು ಕೊಂದು ಹಾಕಿದರು. ಆದರೆ, ಈ ದಾಳಿಯನ್ನು ಊಹಿಸಲು ಇಸ್ರೇಲ್‌ಗೆ ಸಾಧ್ಯವಾಗಲಿಲ್ಲ. ಗಾಜಾದೊಂದಿಗಿನ ಇಸ್ರೇಲ್‌ನ ಗಡಿಯು ಬೇಲಿಯಿಂದ ಸುತ್ತುವರಿದಿದೆ ಮತ್ತು ಚಲನೆಯನ್ನು ಪತ್ತೆಹಚ್ಚಲು ಸಂವೇದಕಗಳನ್ನು ಹೊಂದಿದೆ. ಆದರೆ ಹಮಾಸ್, ನಾಗರಿಕರ ಮೇಲೆ ಹಠಾತ್ ದಾಳಿ ನಡೆಸುವ ಮುನ್ನ ಯಾವುದೇ ಮುನ್ಸೂಚನೆ ಕೂಡ ಇಸ್ರೇಲ್‌ಗೆ ಸಿಗಲಿಲ್ಲ. ಬಹುಶಃ ಇಸ್ರೇಲ್ ಗೂಢಚರ ವ್ಯವಸ್ಥೆಗೆ ಹಮಾಸ್ ಬಂಡುಕೋರರು ಚಳ್ಳೆ ಹಣ್ಣು ತಿನ್ನಿಸುವಲ್ಲಿ ಈ ರಹಸ್ಯ ಸುರಂಗಗಳು ಪ್ರಮುಖ ಪಾತ್ರ ನಿರ್ವಹಿಸಿವೆ ಎಂದು ಹೇಳಲಾಗುತ್ತಿದೆ.
ಗಾಜಾ ಗಡಿಯಲ್ಲಿ ಇಸ್ರೇಲ್ ಸುಮಾರು 30 ಎತ್ತರದ ಬೇಲಿಯನ್ನು ಹಾಕಿದ್ದು, ನೆಲದಲ್ಲಿ ಕಾಂಕ್ರೀಟ್ ತಡೆ ಗೋಡೆ ಇದೆ. ಹಾಗಿದ್ದೂ, ಈ ಬೇಲಿಯನ್ನು ದಾಟದೇ ಮತ್ತು ಕಾಂಕ್ರೀಟ್ ಗೋಡೆಯನ್ನು ಒಡೆಯದೇ ಹಮಾಸ್ ಬಂಡುಕೋರರು ಹೇಗೆ ಇಸ್ರೇಲ್‌ನೊಳಗೇ ನುಗ್ಗಿದರು ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಗಾಜಾ ನಗರದೊಳಗಿನ ಅತ್ಯಾಧುನಿಕ ಸುರಂಗಗಳಂತಲ್ಲದೆ, ಗಡಿಯಾಚೆಗಿನ ಸುರಂಗಗಳು ಕಚ್ಚಾ ಮಾದರಿಯಲ್ಲಿರುವ ಸಾಧ್ಯತೆ ಇದೆ ಎಂದು ರೀಚ್‌ಮನ್ ವಿಶ್ವವಿದ್ಯಾಲಯದ ಅಧ್ಯಾಪಕ ಸದಸ್ಯ ಡಾ.ಡಾಫ್ನೆ ರಿಚೆಮಂಡ್-ಬರಾಕ್ ಅಭಿಪ್ರಾಯಪಟ್ಟಿದ್ದಾರೆ. ಗಡಿ ಭೇದಿಸುವ ಸುರಂಗಗಳು ಪರಿಪೂರ್ಣವಾಗಿರುವುದಿಲ್ಲ. ಅವುಗಳನ್ನು ಒಂದು ಬಾರಿ ಉದ್ದೇಶಕ್ಕಾಗಿ ಅಗೆಯಲಾಗುತ್ತದೆ. ಇದೇ ತಂತ್ರವನ್ನು ಅನುಸರಿಸಿ ಹಮಾಸ್ ಬಂಡುಕೋರರು ಇಸ್ರೇಲಿ ಪ್ರದೇಶವನ್ನು ತಲುಪಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಬಹುಶಃ ಗಾಜಾಪಟ್ಟಿಯೊಳಗಿನ ಸುರಂಗಗಳು ಉದ್ಧವಾಗಿರುತ್ತವೆ ಮತ್ತು ಸರ್ವ ರೀತಿಯಿಂದಲೂ ಸಜ್ಜಾಗಿರುತ್ತವೆ. ಈ ಸುರಂಗಗಳಲ್ಲಿ ನಾಯಕರು ಅಡಗಿಕೊಂಡಿರುತ್ತಾರೆ. ಇಲ್ಲಿಂದಲೇ ಇಡೀ ಕಾರ್ಯಾಚರಣೆಯನ್ನು ಅವರು ನಡೆಸುತ್ತಾರೆ. ಈ ಸುರಂಗಗಳನ್ನು ಅವರು ಸಾರಿಗೆ ಮತ್ತು ಸಂವಹನ ಮಾರ್ಗಗಳಾಗಿ ಬಳಸುತ್ತಾರೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Israel Palestine War: ಅವಳಿ ಮಕ್ಕಳ ಪ್ರಾಣ ಉಳಿಸಲು ತಮ್ಮ ಜೀವವನ್ನೇ ಬಲಿ ಕೊಟ್ಟ ಇಸ್ರೇಲ್ ದಂಪತಿ!
2021ರಲ್ಲಿ ಹಮಾಸ್‌ನ 100 ಕಿ.ಮೀ. ಅಧಿಕ ಸುರಂಗವನ್ನು ನಾಶ ಮಾಡಿರುವುದಾಗಿ ಇಸ್ರೇಲ್ ಹೇಳಿಕೊಂಡಿತ್ತು. ಒಂದು ಅಂದಾಜಿನ ಪ್ರಕಾರ, ಗಾಜಾ ಪಟ್ಟಿಯಲ್ಲಿ 500 ಕಿ.ಮೀ.ನಷ್ಟು ಸುರಂಗ ಜಾಲವಿದೆ. ಕೇವಲ ಶೇ.5ರಷ್ಟು ಮಾತ್ರವೇ ನಾಶವಾಗಿದೆ ಎಂದು ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹೇಳಿಕೆ ನೀಡಿದ್ದರು.
ಗಾಜಾ ಪಟ್ಟಿ ಎಷ್ಟು ದೊಡ್ಡ ಸುರಂಗ ಜಾಲವನ್ನು ಹೊಂದಿದೆ ಎಂದರೆ ಸಿಂಪಲ್ ಆಗಿ ಹೇಳುವುದಾದಿರೆ, ದಿಲ್ಲಿಯ ಮೆಟ್ರೋ ಜಾಲಕ್ಕಿಂತ ಹೆಚ್ಚು. ದಿಲ್ಲಿ ಮೆಟ್ರೋ ಜಾಲ 392 ಕಿ.ಮೀ.ನಷ್ಟಿದೆ. ಅದೇ ದಿಲ್ಲಿ ಗಾಜಾ ಪಟ್ಟಿಗಿಂತಲೂ ನಾಲ್ಕು ಪಟ್ಟು ದೊಡ್ಡದಾಗಿದೆ! ಹಾಗಾಗಿ, ಗಾಜಾ ಪಟ್ಟಿಯಲ್ಲಿ ಸುರಂಗ ಜಾಲದ ವ್ಯಾಪಕತೆ ಮತ್ತು ದಾಳಿಯ ವೇಳೆ ಅದರ ಪ್ರಾಮುಖ್ಯತೆಯನ್ನು ಅರಿಯಬಹುದಾಗಿದೆ.