ನವದೆಹಲಿ: ಹಮಾಸ್ ಬಂಡುಕೋರರು (Hamas Terrorists) ಮತ್ತು ಇಸ್ರೇಲ್ (Israel) ನಡುವಿನ ಕಾಳಗದಲ್ಲಿ ಮೃತಪಟ್ಟವರ ಸಂಖ್ಯೆ 1300ಕ್ಕೆ ಏರಿಕೆಯಾಗಿದೆ(1300 people Dead). ಅಲ್ಲದೇ, ಆಹಾರ ಮತ್ತು ಇಂಧನ ಪೂರೈಕೆ ನಿಷೇಧಿಸುವುದು ಸೇರಿದಂತೆ ಗಾಜಾದ ಮೇಲೆ “ಸಂಪೂರ್ಣ ದಿಗ್ಬಂಧನ” (Complete Siege On Gaza) ವಿಧಿಸುವುದಾಗಿ ಇಸ್ರೇಲ್ ಸೋಮವಾರ ಹೇಳಿದೆ. ಇಸ್ರೇಲ್ ಮೇಲೆ ಹಮಾಸ್ ದಾಳಿಯ ನಂತರ ಇಸ್ರೇಲ್ ಪ್ರದೇಶಕ್ಕೆ ವಿದ್ಯುತ್ ಪೂರೈಕೆಯನ್ನು ಕಡಿತಗೊಳಿಸಲಾಗಿದ್ದು, ಸಂಪೂರ್ಣ ಕತ್ತಲೆ ಆವರಿಸಿದೆ. ಈ ಮಧ್ಯೆ, ಹಮಾಸ್ ಬಂಡುಕೋರರು ಮತ್ತು ಇಸ್ರೇಲ್ ನಡುವಿನ ಯುದ್ಧವು ಮೂರನೇ ದಿನಕ್ಕೆ ಕಾಲಿಟ್ಟಿದೆ. ಈ ಸಂಘರ್ಷದಲ್ಲಿ ಅಮೆರಿಕದ 9 ಪ್ರಜೆಗಳು ಮೃತಪಟ್ಟಿದ್ದಾರೆ (American Citizens) ಎಂದ ಅಮೆರಿಕ ಖಚಿತಪಡಿಸಿದೆ. ಅ.7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ಏಕಕಾಲದಲ್ಲಿ 5000 ಕ್ಷಿಪಣಿಗಳ ದಾಳಿ ನಡೆಸುವ ಮೂಲಕ ಈಗ ನಡೆಯುತ್ತಿರುವ ಯುದ್ಧಕ್ಕೆ ಕಾರಣವಾಗಿದ್ದಾರೆ(Israel Palestine War).
ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, “ನಾನು ಗಾಜಾ ಪಟ್ಟಿಯ ಮೇಲೆ ಸಂಪೂರ್ಣ ಮುತ್ತಿಗೆ ಕೈಗೊಳ್ಳುವಂತೆ ಆದೇಶಿಸಿದ್ದೇನೆ. ಗಾಜಾಪಟ್ಟಿಯಲ್ಲಿ ಈಗ ವಿದ್ಯುತ್ ಇಲ್ಲ. ಆಹಾರ ಮತ್ತು ಇಂಧನ ಸೇರಿದಂತೆ ಯಾವುದು ಪೂರೈಕೆಯಾಗುವುದಿಲ್ಲ. ನಾವು ಮಾನವ ಪ್ರಾಣಿಗಳೊಂದಿಗೆ ಹೋರಾಡುತ್ತಿದ್ದೇವೆ ಮತ್ತು ನಾವು ಕೂಡ ಅವರಂತೆಯೇ ವರ್ತಿಸುತ್ತಿದ್ದೇವೆ ಎಂದು ಹೇಳಿದ್ದಾರೆ. 2007ರಲ್ಲಿ ಹಮಾಸ್ ಪ್ರತಿಸ್ಪರ್ಧಿ ಪ್ಯಾಲೆಸ್ತೀನ್ ಪಡೆಗಳಿಂದ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಇಸ್ರೇಲ್ ಮತ್ತು ಈಜಿಪ್ಟ್ ಗಾಜಾದ ಮೇಲೆ ವಿವಿಧ ಹಂತದ ದಿಗ್ಬಂಧನವನ್ನು ವಿಧಿಸಿವೆ.
ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಮೂರು ದಿನಗಳ ಸಂಘರ್ಷದ ನಂತರ ಈ ದಿಗ್ಬಂಧನ ನಡೆದಿದೆ. ಇಸ್ರೇಲ್ ಮತ್ತು ಗಾಜಾ ಪಟ್ಟಿಯಲ್ಲಿ ಈವರೆಗೆ ಸತ್ತವರ ಸಂಖ್ಯೆ 1300ಕ್ಕೆ ಏರಿಕೆಯಾಗಿದೆ. ಇಸ್ರೇಲ್‌ನಲ್ಲಿ 44 ಸೈನಿಕರು ಸೇರಿದಂತೆ 700 ಕ್ಕೂ ಹೆಚ್ಚು ಜನರು ಹತ್ಯೆಗೀಡಾಗಿದ್ದಾರೆ. ಹಮಾಸ್ ದಾಳಿಯ ಬೆನ್ನಲ್ಲೇ, ಇಸ್ರೇಲ್ ಪ್ಯಾಲೆಸ್ತೀನ್ ಮೇಲೆ ಯುದ್ಧ ಸಾರಿದೆ.
ಗಾಜಾಪಟ್ಟಿಯಲ್ಲಿನ ಭಯೋತ್ಪಾದಕ ಗುಂಪಿನ ಅಡಗುತಾಣಗಳನ್ನು ನಾಶಪಡಿಸುವುದಾಗಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಪ್ರತಿಜ್ಞೆ ಮಾಡಿದ್ದಾರೆ. ಏತನ್ಮಧ್ಯೆ, ಭಾನುವಾರದಂದು ಪಟ್ಟುಬಿಡದ ಇಸ್ರೇಲಿ ವಾಯುದಾಳಿಗಳನ್ನು ಸಹಿಸಿಕೊಂಡ ಗಾಜಾದಲ್ಲಿ ಕನಿಷ್ಠ 500 ಜನರು ಮೃತಪಟ್ಟಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್‌ಗೆ ಬೆಂಬಲ ನೀಡಿದ ಅಮೆರಿಕ
ಈ ಮಧ್ಯೆ, ಇಸ್ರೇಲ್‌ಗೆ ಅಮೆರಿಕ ಪೂರ್ಣ ಪ್ರಮಾಣದ ಬೆಂಬಲವನ್ನು ಘೋಷಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ “ಹಮಾಸ್ ಭಯಂಕರ ದಾಳಿಯ ಬಳಿಕ ಅಮೆರಿಕವು ಇಸ್ರೇಲ್‌ಗೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ. ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಅಮೆರಿಕದ ಜೆರಾಲ್ಡ್ ಆರ್ ಫೋರ್ಡ್ ವಿಮಾನವಾಹಕ ನೌಕೆ ಮತ್ತು ಯುದ್ಧನೌಕೆಗಳನ್ನು ಪೂರ್ವ ಮೆಡಿಟರೇನಿಯನ್‌ಗೆ ನಿಯೋಜನೆ ಮಾಡುವಂತೆ ಸೂಚಿಸಿದ್ದಾರೆ. ಮುಂಬರುವ ಯಾವುದೇ ಸಂಭಾವ್ಯ ದಾಳಿಗೆ ಅಮೆರಿಕ ಈಗಿನಿಂದಲೇ ಸಿದ್ಧವಾಗಿದೆ.
ಪ್ಯಾಲೆಸ್ತೀನಿಯರಿಗೆ ಕಾಂಗ್ರೆಸ್ ಪಕ್ಷ ಬೆಂಬಲ
ಇಸ್ರೇಲ್ ಮೇಲಿನ ಹಮಾಸ್ ಬಂಡುಕೋರರ ಭೀಕರ ದಾಳಿಯನ್ನು (Israel Palestine War) ಖಂಡಿಸಿದ್ದ ಕಾಂಗ್ರೆಸ್ ಪಕ್ಷವು(Congress Party), ಸೋಮವಾರ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ (CWC Meeting) ಪ್ಯಾಲೆಸ್ತೀನ್ ನಾಗರಿಕರ ಹಕ್ಕುಗಳಿಗೆ ತನ್ನ ಬೆಂಬಲವನ್ನು ನೀಡಿದೆ(Support To Palestine). ಈ ಕುರಿತಾಧ ನಿರ್ಣಯವನ್ನು ಅಂಗೀಕರಿಸಿರುವ ಕಾಂಗ್ರೆಸ್ ಕಾರ್ಯಕಾರಣಿ, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಉಂಟಾಗಿರುವ ಸಂಘರ್ಷದ ಕುರಿತು ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಅಲ್ಲದೇ, ನಿರ್ಣಯದಲ್ಲಿ ಪ್ಯಾಲೆಸ್ತೀನ್ ನಾಗರಿಕರ ಹಕ್ಕುಗಳಿಗೆ ತನ್ನ ಬೆಂಬಲವನ್ನು ನೀಡಿದೆ. ಕಾಂಗ್ರೆಸ್ ಪಕ್ಷವೂ ಮೊದಲಿನಿಂದ ಪ್ಯಾಲೆಸ್ತೀನ್ ನಾಗರಿಕರ ಹಕ್ಕುಗಳಿಗೆ ತನ್ನ ಬೆಂಬಲವನ್ನು ನೀಡುತ್ತಾ ಬಂದಿದೆ. ಅದೇ ನೀತಿಯನ್ನು ಈಗಲೂ ಮುಂದುವರಿಸಿದೆ. ಈ ಮಧ್ಯೆ, ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ನಾಯಕ ಬಿ.ಕೆ. ಹರಿಪ್ರಸಾದ್ ಅವರು, ”ಪ್ಯಾಲೆಸ್ತೀನ್ ಕುರಿತಾದ ನಿಲುವು ಕಾಂಗ್ರೆಸ್ ಪಕ್ಷದ್ದು, ವಾಜಪೇಯಿ ಅವರ ನಿಲುವು ಒಂದೇ. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ವಿದೇಶಾಂಗ ನಿಲುವು ಒಂದೇ ಆಗಿರುತ್ತದೆ. ಈ ಕುರಿತು ಕಾರ್ಯಕಾರಿಣಿಯಲ್ಲಿ ಹೆಚ್ಚು ಚರ್ಚೆಯಾಗಿಲ್ಲ” ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Israel Palestine War: ಇಸ್ರೇಲ್‌ನಲ್ಲಿ ಉಗ್ರರ ದಾಳಿ; ಕೇರಳ ಮಹಿಳೆಗೆ ಗಂಭೀರ ಗಾಯ!
ಅಮೆರಿಕದ ನಾಗರಿಕರ ಸಾವು
ಹಮಾಸ್ ಬಂಡುಕೋರರು ಮತ್ತು ಇಸ್ರೇಲ್ ನಡುವಿನ ಕಾಳಗದಲ್ಲಿ ತನ್ನ ಒಂಭತ್ತು ಪ್ರಜೆಗಳು ಮೃತಪಟ್ಟಿರುವುದನ್ನು ಅಮೆರಿಕ ಸರ್ಕಾರವು ಖಚಿತಪಡಿಸಿದೆ. ಅಲ್ಲದೆ, ಅಮೆರಿಕದ ಪ್ರಜೆಗಳು ಕೂಡ ಒತ್ತೆಯಾಳು ಆಗಿರುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಸದ್ಯದ ಮಾಹಿತಿಯ ಪ್ರಕಾರ, ಎಷ್ಟು ಜನರು ಒತ್ತೆಯಾಳುಗಳಾಗಿದ್ದಾರೆಂದು ಗೊತ್ತಿಲ್ಲ ಎಂದು ಹೇಳಿದೆ. ಇಸ್ರೇಲ್‌ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಮೆರಿಕನ್ ಪ್ರಜೆಗಳಿದ್ದಾರೆ. ಎಷ್ಟು ಸಾವು ನೋವು ಸಂಭವಿಸಿದೆ ಎಂಬ ಕುರಿತು ಮಾಹಿತಿ ಕಲೆ ಹಾಕಲು ಇಸ್ರೇಲ್ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಅಮೆರಿಕ ಹೇಳಿದೆ.